Advertisement
ಕಳ್ಳತನಕ್ಕೆ ಬಳಸಿದ ಮತ್ತು ಮದ್ಯ, ಗಾಂಜಾ, ಗಂಧ, ಹೊಯಿಗೆ ಮುಂತಾದ ಅಕ್ರಮ ವಸ್ತುಗಳನ್ನು ಸಾಗಾಟ ಮಾಡುತ್ತಿರುವಾಗ ವಶಪಡಿಸಿಕೊಂಡ ವಾಹನಗಳನ್ನು ಎಲ್ಲೆಂದರಲ್ಲಿ ಉಪೇಕ್ಷಿಸಲಾಗಿದೆ. ಅನಧಿಕೃತವಾಗಿ ಹೊಯಿಗೆ ಸಾಗಿಸುತ್ತಿದ್ದ ದೋಣಿಯನ್ನು ಲಾರಿಯಲ್ಲಿ ತಂದು ಠಾಣೆಯ ಮುಂದೆ ಇರಿಸಲಾಗಿದೆ. ಪರವಾನಿಗೆ ರಹಿತ ಹೊಯಿಗೆ ಸಾಗಿಸುತ್ತಿದ್ದ ರಿಕ್ಷಾದಿಂದ ತೊಡಗಿ ಹಲವು ಲಾರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಮರಳನ್ನು ತುರ್ತು ಅಗತ್ಯಕ್ಕಾಗಿ ಮನೆಗೆ ಸಾಗಿಸುತ್ತಿದ್ದ ಬೈಕ್ ನ್ನೂ ಬೆಂಬತ್ತಿ ವಶಪಡಿಸಿಕೊಳ್ಳಲಾಗಿದೆ. ಅಕ್ರಮ ಸಾಗಾಟದ ವಾಹನಗಳ ಕೆಲವು ಚಾಲಕರು ಮತ್ತು ಕ್ಲೀನರ್‌ಗಳು ಪರಾರಿಯಾದರೆ ಕೆಲವರು ಸೆರೆ ಸಿಕ್ಕಿ ಕೇಸಿನಲ್ಲಿ ಬಸವಳಿಯುತ್ತಿದ್ದಾರೆ. ಆದರೆ ಲಕ್ಷಗಟ್ಟಲೆ ರೂಪಾಯಿ ಬೆಲೆ ಬಾಳುವ ವಾಹನಗಳು ಮಾತ್ರ ಬಿಸಿಲು ಗಾಳಿ ಮಳೆಗೆ ಮೈ ಒಡ್ಡಿ ನಿಂತಿವೆ.
ಅಕ್ರಮ ಸಾಗಾಟ ಮಾಡಿದ ವಾಹನಗಳನ್ನು ವಶಪಡಿಸಿಕೊಂಡ ಬಳಿಕ ನ್ಯಾಯಾಲಯದಲ್ಲಿ ಕೇಸು ದಾಖಲಿಸಿದರೂ ವಾಹನಗಳನ್ನು ಬಿಟ್ಟು ಕೊಡುವ ಹಾಗಿಲ್ಲವಂತೆ. ಕಾನೂನು ಉಲ್ಲಂಘಿಸಿದ ಕಾರಣ ವಾಹನಗಳ ಮಾಲಕರು ತಮ್ಮ ವಾಹನಗಳತ್ತ ತಲೆ ಹಾಕುವುದಿಲ್ಲ. ಕೋರ್ಟ್ ಅಂತೂ ವಾಹನಗಳನ್ನು ಸುಲಭದಲ್ಲಿ ಬಿಟ್ಟು ಕೊಡುತ್ತಿಲ್ಲ. ಹಾಗಾಗಿ ಭಾರೀ ಬೆಲೆಬಾಳುವ ವಾಹನಗಳು ಜೀರ್ಣಗೊಂಡು ಮಣ್ಣು ಸೇರುತ್ತಿವೆ. ವರ್ಷಂಪ್ರತಿ ನಡೆಯುವ ಕುಂಬಳೆ ಬೆಡಿ ಪ್ರದೇಶದ ಮೈದಾನಲ್ಲಿ ಹೊಯಿಗೆ ರಾಶಿ ಮತ್ತು ವಾಹನಗಳ ರಾಶಿಯನ್ನು ಕಾಣಬಹುದು. ಇದನ್ನು ಜೆ.ಸಿ.ಬಿ. ಯಂತ್ರದ ಮೂಲಕ ಪಕ್ಕಕ್ಕೆ ಸರಿಸಲಾಗುವುದು. ಕಾರುಗಳನ್ನು ಒಂದರ ಮೇಲೊಂದರಂತೆ ಪೇರಿಸಲಾಗುತ್ತಿದೆ. ಪೊಲೀಸ್ ಠಾಣೆಯ ಸುಪರ್ದಿಯಲ್ಲಿರುವ, ಅನಾಥವಾಗಿರುವ ಕೆಲವು ವಾಹನಗಳ ಟಯರ್ ಇನ್ನಿತರ ಬಿಡಿ ಭಾಗಗಳು ಸದ್ದಿಲ್ಲದೆ ಕಳವಾಗುತ್ತಿವೆಯಂತೆ. ಆದರೆ ಇದು ಸುದ್ದಿಯಾಗುವುದಿಲ್ಲವಂತೆ. ವಶಪಡಿಸಿಕೊಂಡ ಬೆಲೆ ಬಾಳುವ ವಾಹನಗಳು ತುಕ್ಕು ಹಿಡಿದು ಮಣ್ಣು ಸೇರುವುದನ್ನು ತಡೆಯಲು ಇತರ ರಾಜ್ಯಗಳಂತೆ ಏಲಂ ಕಾಯಿದೆ ತರುವತ್ತ ನ್ಯಾಯಾಲಯ ಮುಂದಾಗಬೇಕಾಗಿದೆ.
Related Articles
ಕೇರಳದಲ್ಲಿ ಏಲಂ ಇಲ್ಲ
ಕುಂಬಳೆ ಪೊಲೀಸ್ ಠಾಣೆಯ ಮುಂಭಾಗದ ಮತ್ತು ಬಲಭಾಗದ ಮೈದಾನದಲ್ಲಿ ರಸ್ತೆ ಪಕ್ಕದಲ್ಲಿ ತುಕ್ಕು ಹಿಡಿದು ಮಣ್ಣುಪಾಲಾಗುತ್ತಿರುವ ಬೆಲೆ ಬಾಳುವ ವಾಹನಗಳನ್ನು ನೋಡುವಾಗ ಅಯ್ಯೋ ಎಂದಾಗುವುದು. ಇಷ್ಟೊಂದು ಬೆಲೆ ಬಾಳುವ ಸೊತ್ತಿನ ಪಾಡನ್ನು ಕೇಳುವವರಿಲ್ಲವೇ ಎಂದಾಗುವುದು. ಆದರೆ ಕಾನೂನಿನ ಬಿಗಿ ಹಿಡಿತದಿಂದ ಇದನ್ನು ಬಿಡಿಸಲು ಆಸಾಧ್ಯವೆಂಬುದಾಗಿ ಠಾಣೆಯ ಅಧಿಕಾರಿಗಳ ಹೇಳಿಕೆಯಾಗಿದೆ. ಕೆಲವು ಅನ್ಯ ರಾಜ್ಯಗಳಲ್ಲಿ ವಶಪಡಿಸಿದ ವಾಹನಗಳನ್ನು ಏಲಂ ಮಾಡುವ ಕಾಯಿದೆ ಇದ್ದರೂ ಕೇರಳದಲ್ಲಿ ಇಲ್ಲವಂತೆ.
Advertisement
— ಅಚ್ಯುತ ಚೇವಾರ್