Advertisement

ಲಾಂಗ್‌ ಬೀಸಲು ಬಂದ ರೌಡಿಗೆ ಪೊಲೀಸರ ಗುಂಡು

11:31 AM Nov 10, 2017 | |

ಬೆಂಗಳೂರು: ಕುಡಿತದ ಅಮಲಿನಲ್ಲಿ ಸ್ನೇಹಿತರ ಜತೆಗೂಡಿ ಸಿಕ್ಕ ಸಿಕ್ಕ ವಾಹನಗಳನ್ನು ಜಖಂಗೊಳಿಸಿದ್ದ ಹಾಗೂ ಬಂಧಿಸಲು ಬಂದ ಇನ್ಸ್‌ಪೆಕ್ಟರ್‌ ಮೇಲೇ ಲಾಂಗ್‌ನಿಂದ ಹಲ್ಲೆ ನಡೆಸಲು ಮುಂದಾದ ರೌಡಿ ಮೇಲೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.

Advertisement

ಗುರುವಾರ ಮುಂಜಾನೆ 4.30ರ ಸುಮಾರಿಗೆ ಮೈಸೂರು ರಸ್ತೆಯ ಅಗ್ನಿಶಾಮಕ ದಳದ ಕಚೇರಿ ಸಮೀಪ ಘಟನೆ ನಡೆದಿದ್ದು, ಗುಂಡೇಟಿನಿಂದ ಗಾಯಗೊಂಡಿರುವ ರೌಡಿ ವಿಷ್ಣು ಅಲಿಯಾಸ್‌ ಬೋಜಾ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದಾನೆ.

ಬೋಜಾ ಹಾಗೂ ಆತನ ಸ್ನೇಹಿತರು ಮದ್ಯ ಸೇವಿಸಿ ಸಾರ್ವಜನಿಕರ ಮೇಲೆ ಹಲ್ಲೆ ಮಾಡಿ ವಾಹನಗಳನ್ನು ಜಖಂಗೊಳಿಸಿದ್ದರು. ಈ ಬಗ್ಗೆ ಬಂದ ದೂರು ಆಧರಿಸಿ ಸ್ಥಳಕ್ಕೆ ತೆರಳಿದ ಬಸವನಗುಡಿ ಠಾಣೆ ಇನ್ಸಪೆಕ್ಟರ್‌ ಶೇಖರ್‌, ಆರೋಪಿಗಳನ್ನು ಬಂಧಿಸಲು ಮುಂದಾದಾಗ, ಬೋಜಾ ಲಾಂಗ್‌ ಬೀಸಿದ್ದ. ಹೀಗಾಗಿ ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ.

ಹಳೆ ದ್ವೇಷದ ಹಿನ್ನೆಲೆಯಲ್ಲಿ ಪ್ರವೀಣ್‌ ಎಂಬಾತನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ ಬೋಜಾ ಮತ್ತು ಸ್ನೇಹಿತರು, ಗುರುವಾರ ರಾತ್ರಿ ಸ್ನೇಹಿತರ ಜತೆ ಮದ್ಯಪಾನ ಮಾಡಿದ್ದು, ಎ.ಕೆ.ಕಾಲೋನಿಯಲ್ಲಿ ಪ್ರವೀಣ್‌ ಇರುವ ಬಗ್ಗೆ ತಿಳಿದು ಅಲ್ಲಿಗೆ ತೆರಳಿದ್ದರು. ಆದರೆ, ಪ್ರವೀಣ್‌ ಸಿಗದ ಕಾರಣ ಕೋಪಗೊಂಡ ಬೋಜಾ ಹಾಗೂ ಸ್ನೇಹಿತರು, ಯಡಿಯೂರು ಕೆರೆದುರ್ಗಾ ಪರಮೇಶ್ವರಿ ರಸ್ತೆಯಲ್ಲಿ ನಿಲ್ಲಿಸಿದ್ದ 6 ಆಟೋ, 9 ಕಾರು, ಎರಡು  ಟಾಟಾ ಏಸ್‌ ವಾಹನಗಳ ಗಾಜುಗಳನ್ನು ಪುಡಿಮಾಡಿದರು. 

ಈ ವೇಳೆ ದೊರೆತ ನಂತರ ಪ್ರವೀಣ್‌ನ ಸ್ನೇಹಿತ ನೂತನ್‌ ಹಾಗೂ ಸ್ಥಳೀಯ ನಿವಾಸಿ ಆನಂದ್‌ ಎಂಬುವರ ಮೇಲೂ ಹಲ್ಲೆ ನಡೆಸಿದರು. ಈ ಬಗ್ಗೆ ಸಾರ್ವಜನಿಕರು ನೀಡಿದ ದೂರಿನಂತೆ ದಕ್ಷಿಣ ವಿಭಾಗದ ಡಿಸಿಪಿ ಡಾ. ಶರಣಪ್ಪ, ಬಸವನಗುಡಿ, ಬನಶಂಕರಿ ಠಾಣೆ ಇನ್ಸಪೆಕ್ಟರ್‌ಗಳ ನೇತೃತ್ವದಲ್ಲಿ ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚನೆ ಮಾಡಿದ್ದರು.

Advertisement

ಆರೋಪಿ ವಿಷ್ಣು, ತನ್ನದೇ ಗ್ಯಾಂಗ್‌ ಕಟ್ಟಿಕೊಂಡು ಎ.ಕೆ. ಕಾಲೋನಿ, ತ್ಯಾಗರಾಜನಗರ, ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಹಲವು ವರ್ಷಗಳಿಂದ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆ. ಸಿದ್ದಾಪುರ ಪೊಲೀಸ್‌ ಠಾಣೆಯಲ್ಲಿ  ಒಂದು ಡಕಾಯಿತಿ  ಹಾಗೂ ಬಸವನಗುಡಿ ಠಾಣೆಯಲ್ಲಿ ನಾಲ್ಕು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ.ಆರೋಪಿ ವಿಷ್ಣು ವಿರುದ್ಧ ಐಪಿಸಿ 304,ಸರ್ಕಾರಿ ಅಧಿಕಾರಿಯ ಮೇಲೆ ಹಲ್ಲೆ ಯತ್ನ ಸೇರಿದಂತೆ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಅರಳೀಕಟ್ಟೆ ಬಳಿ ಬಿತ್ತು ಗುಂಡೇಟು!
ಎ.ಕೆ. ಕಾಲೋನಿ ಬಳಿ ದಾಂಧಲೆ ನಡೆಸಿದ ಆರೋಪಿಗಳು ಪರಾರಿಯಾಗಿದ್ದು, ಬೋಜಾ ಹಾಗೂ ಪ್ರಮೋದ್‌ ಮುಂಜಾನೆ 3.40ರ ಸುಮಾರಿಗೆ ಅಗ್ನಿಶಾಮಕ ಕಚೇರಿಯ ಸಮೀಪವಿರುವ ಅರಳೀಕಟ್ಟೆ ಮೇಲೆ ಕುಳಿತು ಮದ್ಯಸೇವಿಸುತ್ತಿದ್ದರು.

ವಿಷಯ ತಿಳಿದ ಬಸವನಗುಡಿ ಠಾಣೆ ಇನ್ಸಪೆಕ್ಟರ್‌ ಶೇಖರ್‌ ಹಾಗೂ ಬನಶಂಕರಿ ಠಾಣೆ ಇನ್ಸಪೆಕ್ಟರ್‌, ಸ್ಥಳಕ್ಕೆ ತೆರಳಿ ಆರೋಪಿಗಳಿಗೆ ಶರಣಾಗಲು ಸೂಚಿಸಿದ್ದಾರೆ. ಆದರೆ ಆರೋಪಿಗಳು ಲಾಂಗ್‌ ಹಿಡಿದು ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಸಿದ್ದಾರೆ.

ಆದರೂ ಬೋಜಾ, ಹಲ್ಲೆಗೆ ಮುಂದಾದಾಗ ಇನ್ಸಪೆಕ್ಟರ್‌ ಶೇಖರ್‌, ಆತ್ಮರಕ್ಷಣೆಗಾಗಿ ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ. ನೆಲಕ್ಕೆ ಕುಸಿದ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ಕಾರ್ಯಾಚರಣೆ ನಡೆಸಿದ ವಿಶೇಷ ತಂಡ, ಆರೋಪಿಗಳಾದ ಪ್ರಮೋದ್‌, ಸಿದ್ದರಾಜು, ಮುಬಾರಕ್‌, ದರ್ಶನ್‌ನನ್ನು ಬಂಧಿಸಿದ್ದಾರೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next