Advertisement

ಪೊಲೀಸ್‌ ವೇಷದಲ್ಲಿ  ದರೋಡೆ: ಶಿಕ್ಷಕ ಸಹಿತ ಮೂವರ ಬಂಧನ

06:20 AM Nov 19, 2017 | Team Udayavani |

ಬೆಂಗಳೂರು: ನಗರದ ಹೊರವಲಯದಲ್ಲಿ ವಿಶೇಷ ಪೊಲೀಸ್‌ ಸಿಬಂದಿ ಎಂದು ಹೇಳಿಕೊಂಡು ಅಮಾಯಕ ಸಾರ್ವಜನಿಕರನ್ನು ಸುಲಿಗೆ ಮಾಡುತ್ತಿದ್ದ ಒಬ್ಬ ಶಿಕ್ಷಕ ಸಹಿತ ಮೂವರನ್ನು ದಕ್ಷಿಣ ವಿಭಾಗದ ತಲ್ಲಘಟ್ಟಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ರಾಮನಗರ ಮೂಲದ ರಘು (34), ಆನೇಕಲ್‌ನ ದೊಡ್ಡಯ್ಯ (48), ತಮಿಳುನಾಡಿನ ಹರೀಶ (31) ಬಂಧಿತರು. ಇವರು ನಡೆಸಿದ 14 ಸುಲಿಗೆ ಪ್ರಕರಣಗಳು ಪತ್ತೆಯಾಗಿದ್ದು, 15 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 4 ಲಕ್ಷ ರೂ. ನಗದು, ಬೊಲೆರೋ ವಾಹನ, 1 ನಕಲಿ ಪಿಸ್ತೂಲ್‌, ಪೊಲೀಸ್‌ ಸ್ಟಿಕ್ಕರ್‌ ಮತ್ತು ಸರಕಾರಿ  ಜೀಪ್‌ಗೆ ಅಳವಡಿಸುವ ಜಿ ಅಕ್ಷರವುಳ್ಳ ನಕಲಿ ನಂಬರ್‌ ಪ್ಲೇಟ್‌ ಇತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರ ಪೈಕಿ ಈ ಮೊದಲು ಗೃಹ ರಕ್ಷಕ ದಳದ ಸಿಬಂದಿಯಾಗಿದ್ದ ರಘು ಪೊಲೀಸರ ವೇಷ ಧರಿಸಿ ಹಣ ಸುಲಿಗೆ ಮಾಡಲು ಸಂಚು ರೂಪಿಸಿದ್ದ. ಇದಕ್ಕಾಗಿ ಮುತ್ತೂಟ್‌ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ದೊಡ್ಡಯ್ಯ ಮತ್ತು ಶಿಕ್ಷಕ ಹರೀಶ್‌ ಸಹಾಯ ಪಡೆದು ಕೃತ್ಯವೆಸಗಿದ್ದಾನೆ ಎಂದು ಹೆಚ್ಚುವರಿ ಪೊಲೀಸ್‌ ಆಯುಕ್ತೆ ಮಾಲಿನಿ ಕೃಷ್ಣಮೂರ್ತಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸಿಕ್ಕಿದ್ದು ಹೇಗೆ?: ಇತ್ತೀಚೆಗೆ ಬನ್ನೇರುಘಟ್ಟ ರಸ್ತೆಯಲ್ಲಿ ಪ್ರೇಮಿಗಳ ಮೇಲೆ ದಾಳಿ ನಡೆಸಿದ ಆರೋಪಿಗಳು ಬೆದರಿಸಿ ಹಣ, 2 ಮೊಬೈಲ್‌ಗ‌ಳನ್ನು ಸುಲಿಗೆ ಮಾಡಿದ್ದರು. ಇವರ ವರ್ತನೆ ಬಗ್ಗೆ ಪ್ರೇಮಿಗಳಿಗೆ ಅನುಮಾನ ಬಂದಿತ್ತು. ಪೊಲೀಸರಂತೆ ಕಾಣುತ್ತಾರೆ. ಆದರೆ ದರೋಡೆಕೋರರಂತೆ ಸುಲಿಗೆ ಮಾಡುತ್ತಾರೆ ಎಂಬ ಅನುಮಾನದೊಂದಿಗೆ ಯುವಕ ನೊಬ್ಬ ತಲಘಟ್ಟಪುರ ಠಾಣೆಯಲ್ಲಿ ದೂರು ನೀಡಿದ್ದ. ಅನಂತರ ಪ್ರೇಮಿಗಳಿಂದ ದರೋಡೆ ಮಾಡಿದ್ದ ಮೊಬೈಲ್‌ ನೆಟ್‌ವರ್ಕ್‌ ಜಾಡು ಹಿಡಿದು ಶೋಧ ಕಾರ್ಯ ನಡೆಸಿದಾಗ ಆರೋಪಿಗಳು ಸಿಕ್ಕಿ ಬಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next