ಬೆಂಗಳೂರು: ಸರ್ಕಾರದ ಯಾವುದಾದರೂ ಇಲಾಖೆಯಲ್ಲಿ ದ್ವಿತೀಯ ದರ್ಜೆ ಮತ್ತು ಪ್ರಥಮ ದರ್ಜೆ ಸಹಾಯಕ ಹುದ್ದೆ ಕೊಡಿಸುವುದಾಗಿ ನಂಬಿಸಿ 47 ಲಕ್ಷ ರೂ. ನಗದು ಹಾಗೂ 857 ಗ್ರಾಂ ಚಿನ್ನಾಭರಣ ಪಡೆದು ವಂಚಿಸಿದ ನಗರ ಸಶಸ್ತ್ರ ಮೀಸಲು ಪಡೆ(ಸಿಎಆರ್) ಪಡೆಯ ಹೆಡ್ ಕಾನ್‌ಸ್ಟೇಬಲ್, ಆತನ ಪತ್ನಿ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
ಅನ್ನಪೂರ್ಣೇಶ್ವರಿನಗರ ನಿವಾಸಿ ಭಾಗ್ಯ ಎಂಬುವರು ನೀಡಿದ ದೂರಿನ ಮೇರೆಗೆ ನಂದಿನಿ ಲೇಔಟ್ ಠಾಣೆ ಪೊಲೀಸರು, ಚಾಮರಾಜಪೇಟೆಯ ಸಿಎಆರ್‌ನ ಹೆಡ್ ಕಾನ್‌ಸ್ಟೇಬಲ್ ಎಚ್.ಆರ್.ಪ್ರಶಾಂತ್ ಕುಮಾರ್ ಮತ್ತು ಆತನ ಪತ್ನಿ ದೀಪಾ ಹಾಗೂ ಸ್ನೇಹಿತ ಡಿ.ಪ್ರಶಾಂತ್ ಎಂಬುವರ ವಿರುದ್ಧ ವಂಚನೆ ಆರೋಪ ದಡಿ ಪ್ರಕರಣ ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಪಿ ಹೆಡ್‌ಕಾನ್‌ಸ್ಟೇಬಲ್ ಸೇರಿ ಮೂವರಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ಕೊಡಲಾ ಗುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದರು.
ದೂರುದಾರೆ ಭಾಗ್ಯಗೆ ದಿವ್ಯಾ ಮತ್ತು ಕಾರ್ತಿಕ್ ಎಂಬ ಇಬ್ಬರು ಮಕ್ಕಳಿದ್ದಾರೆ. ಈ ನಡುವೆ ಪರಿಚಯಸ್ಥರ ಮೂಲಕ ಹೆಡ್ ಕಾನ್‌ಸ್ಟೇಬಲ್ ಪ್ರಶಾಂತ್ ಕುಮಾರ್ ಪರಿಚಯವಾಗಿದೆ. ಈ ವೇಳೆ ತಮ್ಮ ಮಕ್ಕಳಿಗೆ ಸರ್ಕಾರಿ ಉದ್ಯೋಗದ ಬಗ್ಗೆ ಭಾಗ್ಯ ಚರ್ಚಿಸಿದ್ದಾರೆ. ಆಗ ಆರೋಪಿ, “ತಾನು ಎಡಿಜಿಪಿ ಉಮೇಶ್ ಕುಮಾರ್ ಕಾರು ಚಾಲಕನಾಗಿದ್ದು, ಕೆಲ ಸರ್ಕಾರಿ ಅಧಿಕಾರಿಗಳು ಮತ್ತು ಕೆಪಿಎಸ್‌ಸಿಯಲ್ಲೂ ಕೆಲವರ ಪರಿಚಯವಿದೆ. ಮೂರು ತಿಂಗಳಲ್ಲಿ ಪುತ್ರನಿಗೆ ಎಸ್‌ಡಿಎ ಹಾಗೂ ಪುತ್ರಿಗೆ ಎಫ್ಡಿಎ ಕೆಲಸ ಕೊಡಿಸುತ್ತೇನೆ. ಅದಕ್ಕೆ 45 ಲಕ್ಷ ರೂ. ಆಗುತ್ತದೆ’ ಎಂದು ನಂಬಿಸಿದ್ದನು. ಬಳಿಕ ದೂರುದಾ ರರು ಹಣ ಕೊಡಲು ಒಪ್ಪಿದ್ದಾರೆ. ನಂತರ ಮುಂಗಡವಾಗಿ 2 ಹಂತದಲ್ಲಿ 5.5 ಲಕ್ಷ ರೂ. ಕೊಡಲಾಗಿದೆ. ಬಳಿಕ ಪ್ರಶಾಂತ್ ಕುಮಾರ್ ಪತ್ನಿ ದೀಪಾ ಕೂಡ ಹಣ ಕೊಡಿ ಕೆಲಸ ಮಾಡಿಕೊಡುತ್ತಾರೆ ಎಂದು ಒತ್ತಾಯಿಸಿದ್ದಾರೆ.
ಈ ನಡುವೆ ಹೆಡ್ ಕಾನ್‌ಸ್ಟೇಬಲ್ ಪ್ರಶಾಂತ್ ಕುಮಾರ್, ದೂರುದಾರೆ ಭಾಗ್ಯಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಅವರ ಆಪ್ತ ಸಹಾಯಕ ಎಂದು ಸುಳ್ಳು ಹೇಳಿ ಪ್ರಶಾಂತ್ ಎಂಬಾತನನ್ನು ಪರಿಚಯಿಸಿದ್ದಾನೆ. ಆತ ಕೂಡ ಬೇಗನೆ ಹಣ ಕೊಟ್ಟರೆ ಕೆಲಸ ಆಗುತ್ತದೆ ಎಂದು ಒತ್ತಾಯಿಸಿದ್ದ. ಹೀಗಾಗಿ ಪತಿಯವರ ಹೆಸರಿನಲ್ಲಿ ಬ್ಯಾಂಕ್‌ನಲ್ಲಿ ಸಾಲ ಪಡೆದು 10 ಲಕ್ಷ ರೂ. ಸೇರಿ ಹಂತ-ಹಂತವಾಗಿ ಒಟ್ಟು 47 ಲಕ್ಷ ರೂ. ಕೊಡಲಾಗಿದೆ.
ಆ ನಂತರ 2024ರ ಜೂನ್ 12ರಂದು ಪುತ್ರನಿಗೆ ನೀರಾವರಿ ಇಲಾಖೆ ಹಾಗೂ ಪುತ್ರಿಗೆ ಬೇರೊಂದು ಇಲಾಖೆಯಲ್ಲಿ ಹುದ್ದೆ ಸಿಕ್ಕಿದ್ದು, ಕೆಪಿಎಸ್‌ಸಿಯ 2ನೇ ಹೆಚ್ಚುವರಿ ಆಯ್ಕೆ ಪಟ್ಟಿಯಲ್ಲಿ ಇಬ್ಬರ ಹೆಸರಿದೆ ಎಂದು ಪ್ರತಿಯನ್ನು ನೀಡಿದ್ದಾನೆ. ಬಳಿಕ ಮತ್ತೆ 5 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾನೆ. ನಂತರ ಆರೋಪಿ ಕೊಟ್ಟ ದಾಖಲೆಗಳನ್ನು ಪರಿಶೀಲಿಸಿದಾಗ ನಕಲಿ ಎಂಬುದು ಗೊತ್ತಾಗಿದೆ. ಈ ಬಗ್ಗೆ ಪ್ರಶ್ನಿಸಿದಾಗ ಆರೋಪಿಗಳು 58 ಲಕ್ಷ ರೂ. ಮೌಲ್ಯದ ಚೆಕ್ ನೀಡಿದ್ದಾರೆ. ಆದರೆ, ಆ ಚೆಕ್ ಬೌನ್ಸ್ ಆಗಿದೆ. ಬಳಿಕ ನಗದು ರೂಪದಲ್ಲಿ ಹಣ ಕೇಳಿದಾಗ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಭಾಗ್ಯ ದೂರಿನಲ್ಲಿ ಆರೋಪಿಸಿದ್ದಾರೆ.
ಹೆಡ್ ಕಾನ್‌ಸ್ಟೇಬಲ್ ಅಮಾನತು:
ವಂಚನೆ ಪ್ರಕರಣ ದಾಖಲಾಗುತ್ತಿದ್ದಂತೆ ಸಿಎಆರ್ ಹೆಡ್ ಕಾನ್‌ಸ್ಟೇಬಲ್ ಪ್ರಶಾಂತ್ ಕುಮಾರ್‌ನನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ. ಜತೆಗೆ ಇಲಾಖಾ ತನಿಖೆಗೂ ಸೂಚಿಸಲಾಗಿದೆ. ಈ ಮಧ್ಯೆ ಆರೋಪಿ ಪ್ರಶಾಂತ್ ಕುಮಾರ್, ಈ ಹಿಂದೆಯೂ ಇದೇ ರೀತಿ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹತ್ತಾರು ಮಂದಿಗೆ ವಂಚಿಸಿದ್ದಾನೆ ಎಂಬುದು ಗೊತ್ತಾಗಿದೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
857 ಗ್ರಾಂ ಚಿನ್ನಾಭರಣ ದೋಚಿದ್ದ ಆರೋಪಿಗಳು!:
ದೂರುದಾರೆ ಭಾಗ್ಯ ನಂದಿನಿ ಲೇಔಟ್‌ನ ಬ್ಯಾಂಕ್‌ನಲ್ಲಿ 915 ಗ್ರಾಂ ಚಿನ್ನಾಭರಣಗಳನ್ನು ಅಡಮಾನ ಇಟ್ಟಿದ್ದರು. ಆದರೆ, ಆರೋಪಿಗಳೇ 25 ಲಕ್ಷ ರೂ. ಪಾವತಿಸಿ ಒಡವೆ ಬಿಡಿಸಿದ್ದಾರೆ. ಬಳಿಕ 58 ಗ್ರಾಂ ಚಿನ್ನಾಭರಣ ದೂರುದಾರೆಗೆ ಕೊಟ್ಟು, ಬಾಕಿ 857 ಚಿನ್ನಾಭರಣಗಳನ್ನು ಕೊಂಡೊಯ್ದಿದ್ದಾರೆ. ಅದು ಸಹ ವಾಪಸ್ ನೀಡಿಲ್ಲ ಎಂದು ಭಾಗ್ಯ ದೂರಿನಲ್ಲಿ ಉಲ್ಲೇಖೀಸಿದ್ದಾರೆ.