ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣ ಮತ್ತೂಂದು ಆಯಾಮ ಪಡೆದುಕೊಂಡಿದೆ. ಸ್ಯಾಂಡಲ್‌ವುಡ್‌ನ ನಟಿಯರು, ಬಿಗ್‌ಬಾಸ್ ಸ್ಪರ್ಧಿ ಬಳಿಕ ಇದೀಗ ಡ್ರಗ್ಸ್ ಜಾಲದಲ್ಲಿ ಸಿನಿಮಾ ನಿರ್ಮಾಪಕರೊಬ್ಬರು ಸಿಲುಕಿದ್ದಾರೆ.
ಸ್ಯಾಂಡಲ್‌ವುಡ್‌ನ ಹೆಸರಾಂತ ನಿರ್ಮಾಪಕ ಶಂಕರ್ ಗೌಡ ಅವರ ಕಚೇರಿ ಮೇಲೆ ಪೂರ್ವ ವಿಭಾಗದ ಬಾಣಸವಾಡಿ ಎಸಿಪಿ ಲಿಂಗಪ್ಪ ಬಿ.ಸಕ್ರಿ ಮತ್ತು ಗೋವಿಂದಪುರ ಠಾಣೆ ಇನ್‌ಸ್ಪೆಕ್ಟರ್ ಪ್ರಕಾಶ್ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ಸಂಜಯನಗರದ ಡಾಲರ್ಸ್ ಕಾಲೋನಿಯಲ್ಲಿರುವ ಆರ್‌ಎಂವಿ ಬಳಿಯ ನಾಲ್ಕು ಅಂತಸ್ತಿನ ಕಟ್ಟಡದಲ್ಲಿರುವ ಕಚೇರಿ ಮೇಲೆ ದಾಳಿ ನಡೆಸಲಾಗಿದೆ.
ಇತ್ತೀಚೆಗೆ ಪೂರ್ವ ವಿಭಾಗ ಪೊಲೀಸರ ಕಾರ್ಯಾಚರಣೆಯಲ್ಲಿ ಬಿಗ್ ಬಾಸ್ ಸ್ಪರ್ಧಿ ಮಸ್ತಾನ್ ಚಂದ್ರನನ್ನು ಗೋವಿಂದಪುರ ಪೊಲೀಸರು ಬಂಧಿಸಿದ್ದರು. ಈತನ ವಿಚಾರಣೆ ಸಂದರ್ಭದಲ್ಲಿ ವಾರಾಂತ್ಯದ ಪಾರ್ಟಿಗಳಿಗೆ ಮಸ್ತಾನ್ ಚಂದ್ರು ಡ್ರಗ್ಸ್ ಪೂರೈಕೆ ಮಾಡುತ್ತಿದ್ದು, ನಿರ್ಮಾಪಕ ಶಂಕರ್ ಗೌಡ ಅವರು ಕಚೇರಿಯಲ್ಲಿ ಆಯೋಜಿಸುತ್ತಿದ್ದ ಪಾರ್ಟಿಗಳಿಗೆ ನಿರಂತರವಾಗಿ ಡ್ರಗ್ಸ್ ಪೂರೈಕೆ ಮಾಡುತ್ತಿದ್ದೆ ಎಂದು ಹೇಳಿಕೆ ನೀಡಿದ್ದ. ಅಲ್ಲದೆ, ಶಂಕರ್‌ಗೌಡ ಕಚೇರಿಯಲ್ಲಿ ಯಾವಾಗಲೂ ಡ್ರಗ್ಸ್ ಇರುತ್ತಿತ್ತು. ತನ್ನ ಕಚೇರಿಗೆ ಬರುವ ಸ್ನೇಹಿತರು, ಸ್ಯಾಂಡಲ್‌ವುಡ್‌ನ ಕೆಲ ನಟ- ನಟಿಯರು, ಇತರೆ ಕಲಾವಿದರಿಗೆ ಪಾರ್ಟಿ ವೇಳೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದರು ಜತೆಗೆ ತಾವು ಕೂಡ ಡ್ರಗ್ಸ್ ಸೇವಿಸುತ್ತಿದ್ದರು ಎಂದು ಹೇಳಲಾಗಿದೆ. ಈ ಹಿನ್ನೆಯೆಲ್ಲಿ ದಾಳಿ ನಡೆಸಲಾಗಿದೆ.
ಇದನ್ನೂ ಓದಿ :ನ್ಯಾಯಪೀಠ ನೀಡಿದ್ದ ಹೇಳಿಕೆಯನ್ನು ತಪ್ಪಾಗಿ ವರದಿ ಮಾಡಲಾಗಿದೆ: ಸುಪ್ರೀಂ ಸ್ಪಷ್ಟನೆ
ದಾಳಿ ವೇಳೆ ಶಂಕರ್ ಗೌಡ ಹಾಗೂ ಮೂವರು ಸಿಬ್ಬಂದಿ ಕಚೇರಿಯಲ್ಲಿದ್ದರು. ಎಲ್ಲರ ಮೊಬೈಲ್ಗಳು, ಹಾರ್ಡ್‌ಡಿಸ್ಕ್ ವಶಕ್ಕೆ ಪಡೆಯಲಾಗಿದೆ. ಕಚೇರಿಯ ಕೊಠಡಿಗಳು, ಕಾರುಗಳನ್ನು ಪರಿಶೀಲಿಸಲಾಗಿದ್ದು, ಕೆಲ ಮಾಹಿತಿಗಳನ್ನು ಸಂಗ್ರಹಿಸಲಾಗಿದೆ. ಆದರೆ, ಸದ್ಯ ಯಾವುದೇ ಡ್ರಗ್ಸ್ ಪತ್ತೆಯಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅಲರ್ಟ್ ಆಗಿದ್ದ ಶಂಕರ್ ಗೌಡ:
ಬಿಗ್‌ಬಾಸ್ ಸ್ಪರ್ಧಿ ಮಸ್ತಾನ್ ಚಂದ್ರ ಬಂಧನವಾಗುತ್ತಿದ್ದಂತೆ ನಿರ್ಮಾಪಕ ಶಂಕರ್ ಗೌಡ ಎಚ್ಚೆತ್ತುಕೊಂಡಿದ್ದಾರೆ. ತಮ್ಮ ಕಚೇರಿಯಲ್ಲಿದ್ದ ಡ್ರಗ್ಸ್‌ಗಳನ್ನು ವಿಲೇವಾರಿ ಮಾಡಿದ್ದಾರೆ. ಹೀಗಾಗಿ ಯಾವುದೇ ಡ್ರಗ್ಸ್ ಪತ್ತೆಯಾಗಿಲ್ಲ. ಆದರೆ, ಅವರ ಮೊಬೈಲ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಮಸ್ತಾನ್ ಚಂದ್ರ ಜತೆಗಿನ ನಂಟು ಹಾಗೂ ಇತರೆ ವ್ಯವಹಾರಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತೇವೆ ಎಂದು ಪೊಲೀಸರು ಹೇಳಿದರು.
ವಿಚಾರಣೆಗೆ ಹಾಜರಾಗಲು ಸೂಚನೆ:
ರಾತ್ರಿ 10 ಗಂಟೆ ಸುಮಾರಿಗೆ ದಾಳಿ ಮುಕ್ತಾಯಗೊಳಿಸಿದ ಪೊಲೀಸರು ಮಂಗಳವಾರ ಗೋವಿಂದಪುರ ಠಾಣೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಶಂಕರ್ ಗೌಡ ಕೆಂಪೇಗೌಡ ಭಾಗ-1 ಮತ್ತು 2, ವರದನಾಯಕ ಸೇರಿ ಹಲವಾರು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.