Advertisement

ಪೊಲೀಸ್‌ ಫೋನ್‌ ಇನ್‌ ಕಾರ್ಯಕ್ರಮ 

09:38 AM Dec 30, 2017 | |

ಮಹಾನಗರ: ನಗರದ ಸೆಂಟ್ರಲ್‌ ಮಾರ್ಕೆಟ್‌ನಲ್ಲಿ ಇತ್ತೀಚಿನ ದಿನಗಳಲ್ಲಿ ರಸ್ತೆಯಲ್ಲಿ ವ್ಯಾಪಾರ ಮಾಡುವವರ ಸಂಖ್ಯೆ ಹೆಚ್ಚುತ್ತಿದ್ದು, ವಾಹನ ಸಂಚಾರಕ್ಕೆ ಮತ್ತು ಜನರ ಓಡಾಟಕ್ಕೆ ಕಷ್ಟವಾಗುತ್ತಿದೆ. ಬೀದಿ ವ್ಯಾಪಾರವನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಶುಕ್ರವಾರ ಪೊಲೀಸ್‌ ಕಮಿಷನರ್‌ ಕಚೇರಿಯಲ್ಲಿ ನಡೆದ ಪೋನ್‌ ಇನ್‌ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಆಗ್ರಹಿಸಿದರು.

Advertisement

ರಸ್ತೆಯಲ್ಲಿ ವ್ಯಾಪಾರ ಮಾಡುವವರನ್ನು ರಸ್ತೆ ಬದಿಗೆ ಹೋಗುವಂತೆ ಮನವಿ ಮಾಡಿದರೆ ಅವರು ವಾಹನ ಚಾಲಕರ ಜತೆ ಜಗಳ ಮಾಡುತ್ತಾರೆ. ಪೊಲೀಸರು ಇಂತಹ ಬೀದಿ ವ್ಯಾಪಾರಿಗಳ ಮೇಲೆ ಕಠಿನ ಕ್ರಮ ಜರಗಿಸಬೇಕು ಎಂದು ಸಾರ್ವಜನಿಕರು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್‌ ಕಮಿಷನರ್‌ ಟಿ.ಆರ್‌. ಸುರೇಶ್‌, ಈ ಬಗ್ಗೆ ಪೊಲೀಸರು ಈಗಾಗಲೇ ಮಹಾನಗರ
ಪಾಲಿಕೆ ಜತೆ ಸಮಾಲೋಚನೆ ನಡೆಸಿದ್ದಾರೆ. ಪಾಲಿಕೆಯ ಅಧಿಕಾರಿಗಳು ಮತ್ತು ಪೊಲೀಸರನ್ನು ಒಳಗೊಂಡ ತಂಡ
ರಚಿಸಲಾಗಿದೆ. ಬೀದಿ ವ್ಯಾಪಾರ ತೆರವು ಮಾಡುವ ಬಗ್ಗೆ ವ್ಯಾಪಾರಿಗಳಿಗೆ ನೋಟೀಸು ಜಾರಿ ಮಾಡುವಂತೆ ಮಹಾನಗರ ಪಾಲಿಕೆಗೆ ಪತ್ರ ಬರೆಯಲಾಗುವುದು. ಪಾಲಿಕೆಯ ವತಿಯಿಂದ ಸಹಕಾರ ಲಭಿಸದಿದ್ದರೆ ಪೊಲೀಸರಿಂದಲೇ ಕಾರ್ಯಾಚರಣೆ ನಡೆಸಲಾಗುವುದು ಎಂದರು.

ಕಾಮಗಾರಿ ಮುಗಿಸಲು ಸೂಚನೆ
ಒಳಚರಂಡಿ ಮತ್ತು ರಸ್ತೆ ಕಾಂಕ್ರೀಟ್‌ ಪ್ರಯುಕ್ತ ಪಂಪ್‌ವೆಲ್‌- ಕಂಕನಾಡಿ ಫಾದರ್‌ ಮುಲ್ಲರ್‌ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಹಾಗೆಯೇ ಈಗ ಕಾರ್‌ ಸ್ಟ್ರೀಟ್‌ ರಸ್ತೆಯಲ್ಲಿ ಪಿರೇರಾ ಹೊಟೇಲ್‌ ಬಳಿಯಿಂದ ಶ್ರೀನಿವಾಸ್‌ ಹೊಟೇಲ್‌ ತನಕದ ರಸ್ತೆಯಲ್ಲಿ ಒಳ ಚರಂಡಿ ಪೈಪ್‌ಲೈನ್‌ ಕಾಮಗಾರಿ ಕೈಗೆತ್ತಿಕೊಂಡಿರುವುದರಿಂದ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಈ ಕಾರಣಗಳಿಂದಾಗಿ ಪಂಪ್‌ವೆಲ್‌ ಜಂಕ್ಷನ್‌ ನಲ್ಲಿ ಮತ್ತು ಸೆಂಟ್ರಲ್‌ ಮಾರ್ಕೆಟ್‌ ಪರಿಸರದಲ್ಲಿ ವಾಹನಗಳ ಒತ್ತಡ ಜಾಸ್ತಿ ಇದ್ದು, ಸಂಚಾರ ಕಷ್ಟಕರವಾಗಿದೆ. ಇಲ್ಲಿ ಆರಂಭಿಸಿರುವ ಕಾಮಗಾರಿಗಳನ್ನು ತ್ವರಿತಗೊಳಿಸಲು ಸೂಚನೆ ನೀಡಬೇಕು ಎಂದು ಸಾರ್ವಜನಿಕರು ಪೊಲೀಸರಿಗೆ ಸಲಹೆ ಮಾಡಿದರು.

ಇದಕ್ಕೆ ಉತ್ತರಿಸಿದ ಪೊಲೀಸ್‌ ಕಮಿಷನರ್‌ ಟಿ.ಆರ್‌. ಸುರೇಶ್‌ ಪಂಪ್‌ ವೆಲ್‌- ಕಂಕನಾಡಿ ಫಾದರ್‌ ಮುಲ್ಲರ್‌ ಆಸ್ಪತ್ರೆ ರಸ್ತೆಯಲ್ಲಿ ಒಳಚರಂಡಿ ಪೈಪ್‌ ಲೈನ್‌ ಅಗಲೀಕರಣ ಕಾಮಗಾರಿ ಆರಂಭಿಸಿ ಒಂದೂವರೆ ತಿಂಗಳಾಗಿದೆ. ಕೆಲಸ ನಿಧಾನವಾಗಿ ನಡೆಯುತ್ತಿದೆ. ರಾತ್ರಿ ವೇಳೆ ಮತ್ತು ರಜಾ ದಿನಗಳಲ್ಲಿ ಕೆಲಸ ನಡೆಯುತ್ತಿಲ್ಲ. ಕಾರ್‌ಸ್ಟ್ರೀಟ್‌ ರಸ್ತೆಯಲ್ಲಿಯೂ ಕಾಮಗಾರಿ ನಿಧಾನ ಗತಿಯಲ್ಲಿ ಸಾಗುತ್ತಿದೆ. ಕಾಮಗಾರಿಯನ್ನು ತ್ವರಿತಗೊಳಿಸಿ ಶೀಘ್ರದಲ್ಲಿ ಮುಕ್ತಾಯಗೊಳಿಸುವಂತೆ ಪಾಲಿಕೆಯನ್ನು ಕೋರಲಾಗುವುದು ಎಂದರು.

Advertisement

ರಿಕ್ಷಾ ಚಾಲಕರಿಂದ ಹೆಚ್ಚು ಬಾಡಿಗೆ
ಕೊಟ್ಟಾರದಲ್ಲಿ ಕೆಲವು ಆಟೋ ರಿಕ್ಷಾಗಳ ಚಾಲಕರು ದುಪ್ಪಟ್ಟು ಬಾಡಿಗೆ ದರ ಕೇಳುತ್ತಿದ್ದಾರೆ ಎಂದು ಮಹಿಳೆ ಯೊಬ್ಬರು
ದೂರು ನೀಡಿದರು. ಇಂತಹ ಪ್ರಕರಣಗಳಲ್ಲಿ ಸಂಬಂಧಪಟ್ಟ ಆಟೋ ರಿಕ್ಷಾದ ನಂಬರ್‌ ಪ್ಲೇಟ್‌ ಸಮೇತ ಮೊಬೈಲ್‌ನಲ್ಲಿ
ಫೋಟೊ ತೆಗೆದು ‘ಕುಡ್ಲ ಟ್ರಾಫಿಕ್‌’ ವಾಟ್ಸಪ್‌ಗೆ (ನಂಬರ್‌: 9480802312) ಕಳುಹಿಸುವಂತೆ ಕಮಿಷನರ್‌ ಸಲಹೆ
ಮಾಡಿದರು.

ಶೂಟೌಟ್‌ ಪ್ರಕರಣ ಪತ್ತೆ: ಪೊಲೀಸರಿಗೆ ಅಭಿನಂದನೆ
ಶೂಟೌಟ್‌ ಪ್ರಕರಣ ಕುರಿತಂತೆ ತ್ವರಿತವಾಗಿ ಇಬ್ಬರು ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸಿರುವ ಬಗ್ಗೆ ವ್ಯಕ್ತಿಯೊಬ್ಬರು ಪೊಲೀಸರಿಗೆ ಕೃತಜ್ಞತೆ ಸಲ್ಲಿಸಿದರು.

ಲ್ಯಾಂಡ್‌ ಲಿಂಕ್ಸ್‌ ಟೌನ್‌ ಶಿಪ್‌ಗೆ ಬಸ್‌ ಬೇಕು
ದೇರೆಬೈಲ್‌ ಕೊಂಚಾಡಿಯ ಲ್ಯಾಂಡ್‌ ಲಿಂಕ್ಸ್‌ ಟೌನ್‌ಶಿಪ್‌ಗೆ ಒಂದು ಬಸ್‌ ಮಾತ್ರ ಇದ್ದು, ಹೆಚ್ಚುವರಿ ಬಸ್ಸುಗಳ ಓಡಾಟಕ್ಕೆ ವ್ಯವಸ್ಥೆ ಮಾಡಬೇಕು. ಇಲ್ಲಿ ಸುಮಾರು 2,500 ಮನೆಗಳಿದ್ದು, 5,000 ಕ್ಕೂ ಅಧಿಕ ಜನಸಂಖ್ಯೆ ಇದೆ ಎಂದು ಮಹಿಳೆಯೊಬ್ಬರು ತಿಳಿಸಿದರು.

ಇದಕ್ಕೆ ಉತ್ತರಿಸಿದ ಪೊಲೀಸ್‌ ಆಯುಕ್ತರು ಹಂಪನಕಟ್ಟೆ, ಸ್ಟೇಟ್‌ಬ್ಯಾಂಕ್‌ ಕಡೆಯಿಂದ ಲ್ಯಾಂಡ್‌ಲಿಂಕ್ಸ್‌ ಟೌನ್‌ಶಿಪ್‌ಗೆ
ಹೊಸತಾಗಿ ಬಸ್‌ಗಳನ್ನು ಹಾಕಲು ಪರವಾನಿಗೆ ನೀಡುವಲ್ಲಿ ನಿರ್ಬಂಧ ಇದೆ. ಹಾಗಾಗಿ ಕುಂಟಿಕಾನ- ಕೊಂಚಾಡಿ
ಮಾರ್ಗದಲ್ಲಿ ಈಗ ಸಂಚರಿಸುತ್ತಿರುವ ಬಸ್‌ಗಳನ್ನು ಲ್ಯಾಂಡ್‌ ಲಿಂಕ್ಸ್‌ ಟೌನ್‌ ಶಿಪ್‌ಗೆ ವಿಸ್ತರಿಸಬಹುದೇ ಎಂದು ಪರಿಶೀ
ಲಿಸಬಹುದು ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಬಸ್‌ ಮಾಲಕರ ಸಂಘದ ಕಾರ್ಯದರ್ಶಿ ರಾಮಚಂದ್ರ ಶಿಫಾಲಿ ಮಾತನಾಡಿ, ಮಂಗ
ಳೂರು ಜಂಕ್ಷನ್‌ ರೈಲು ನಿಲ್ದಾಣದಿಂದ ಪಡೀಲ್‌- ಪಂಪ್‌ವೆಲ್‌- ಕಂಕನಾಡಿ- ಜ್ಯೋತಿ ಜಂಕ್ಷನ್‌- ಬಂಟ್ಸ್‌ ಹಾಸ್ಟೆಲ್‌-
ಪಿವಿಎಸ್‌- ಲಾಲ್‌ಬಾಗ್‌- ಕೆಎಸ್‌ಆರ್‌ ಟಿಸಿ- ಕುಂಟಿಕಾನ್‌- ದೇರೆಬೈಲ್‌- ಕೊಂಚಾಡಿ- ಲ್ಯಾಂಡ್‌ಲಿಂಕ್ಸ್‌ ಟೌನ್‌
ಶಿಪ್‌ ಮಾರ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಓಡಿಸಲು ಅವಕಾಶವಿದೆ. ಇದನ್ನು ಪರಿಗಣಿಸುವಂತಾದರೆ ಲ್ಯಾಂಡ್‌ಲಿಂಕ್ಸ್‌ ಟೌನ್‌ಶಿಪ್‌ ಜನರ ಮತ್ತು ಮಂಗಳೂರು ಜಂಕ್ಷನ್‌ ರೈಲು ನಿಲ್ದಾಣದ ಪ್ರಯಾಣಿಕರ ಬೇಡಿಕೆಯನ್ನು ಈಡೇರಿಸಬಹುದು ಎಂದು ಸಲಹೆ ಮಾಡಿದರು. ಇದು 67 ನೇ ಫೋನ್‌ ಇನ್‌ ಕಾರ್ಯಕ್ರಮವಾಗಿದ್ದು, ಒಟ್ಟು 12 ಕರೆಗಳು ಬಂದವು. ಟ್ರಾಫಿಕ್‌ ಎಸಿಪಿ ಮಂಜುನಾಥ ಶೆಟ್ಟಿ, ಟ್ರಾಫಿಕ್‌ ಪಿಎಸ್‌ಐ ಸುಕುಮಾರ್‌, ಎಎಸ್‌ಐ ಶ್ಯಾಂಸುಂದರ್‌, ಹೆಡ್‌ಕಾನ್‌ಸ್ಟೇಬಲ್‌ ಪುರುಷೋತ್ತಮ ಉಪಸ್ಥಿತರಿದ್ದರು. 

ಗಸ್ತುವಾಹನ ಸಮಸ್ಯೆ
ಪೊಲೀಸ್‌ ಗಸ್ತು ವಾಹನ ‘ಸಾಗರ್‌’ ನ ಕಾರ್ಯಾಚರಣೆಯ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿ ವ್ಯಕ್ತಿಯೊಬ್ಬರು ದೂರು ನೀಡಿದರು. ‘ಈ ವಾಹವನ್ನು ಎಲ್ಲೋ ಒಂದು ಕಡೆ ನಿಲ್ಲಿಸಿ ಅದರ ಸಿಬಂದಿ ಮರಗಳ ಅಡಿಯಲ್ಲಿ ಕುಳಿತು ಮಾತನಾಡುತ್ತಾರೆ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್‌ ಆಯುಕ್ತರು, ‘ಸಾಗರ್‌’ ಗಸ್ತು
ವಾಹನವನ್ನು ಸ್ಟ್ರಾಟಜಿಕ್‌ ಪಾಯಿಂಟ್‌ನಲ್ಲಿ ನಿಲ್ಲಿಸುವಂತೆ ಸೂಚನೆ ನೀಡಲಾಗಿದೆ. ಇದರ ಅನ್ವಯ ವಾಹನದ ಸಿಬಂದಿ ಕಾರ್ಯನಿರ್ವಹಿಸಬೇಕಾಗುತ್ತದೆ ಎಂದರು.

ನಿಯಮಬಾಹಿರ ಟ್ರಿಪ್‌
ಬಜಪೆಯಲ್ಲಿ ಕೆಲವು ಖಾಸಗಿ ವಾಹನಗಳು ಅಧಿಕ ಸಂಖ್ಯೆಯಲ್ಲಿ ಮಕ್ಕಳನ್ನು ತುಂಬಿಸಿಕೊಂಡು ಸ್ಕೂಲ್‌ ಟ್ರಿಪ್‌ ಮಾಡುತ್ತಿವೆ. ಕೆಲವು ಮಂದಿ ಬ್ಯಾಡ್ಜ್ ಮತ್ತು ಲೈಸನ್ಸ್‌ ಇಲ್ಲದೆ ರಿಕ್ಷಾ ಚಲಾಯಿಸುತ್ತಿದ್ದಾರೆ ಎಂದು ಸಾರ್ವಜನಿಕರೊಬ್ಬರು ಆರೋಪಿಸಿದರು. ಈ ಬಗ್ಗೆ ವಾರದಲ್ಲಿ ಒಂದು ದಿನ ಇಂಟರ್‌ಸೆಪ್ಟರ್‌ ವಾಹನವನ್ನು ಬಜಪೆಗೆ ಕೊಂಡೊಯ್ದು ವಾಹನಗಳ ತಪಾಸಣೆಗೆ ಕ್ರಮ ಜರಗಿಸಲಾಗುವುದು ಎಂದು ಕಮಿಷನರ್‌ ತಿಳಿಸಿದರು. 

ಅಡ್ಡ ರಸ್ತೆಗಳಿಗೆ ಹಂಪ್ಸ್ 
ವಾಹನಗಳ ವೇಗವನ್ನು ನಿಯಂತ್ರಿಸಲು ನಗರದ ರಸ್ತೆಗಳಲ್ಲಿ ಹಂಪ್‌ಗಳನ್ನು  ನಿರ್ಮಾಣ ಮಾಡಬೇಕೆಂದು ಸಾರ್ವಜನಿಕರಿಂದ ಬೇಡಿಕೆಗಳು ಬಂದವು. ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್‌ ಕಮಿಷನರ್‌ ಅಡ್ಡ ರಸ್ತೆಗಳಲ್ಲಿ ಮಾತ್ರ ಹಂಪ್‌ಗ್ಳ ನಿರ್ಮಾಣಕ್ಕೆ ಅವಕಾಶವಿದೆ. ಆದ್ದರಿಂದ ಅಗತ್ಯತೆಯನ್ನು ಪರಿಶೀಲಿಸಿ ಹಂಪ್‌ ಗಳನ್ನು ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಸಮಸ್ಯೆ/ಅಹವಾಲು
· ಉರ್ವ ಮಾರ್ಕೆಟ್‌ನಲ್ಲಿ ರಸ್ತೆಯಲ್ಲಿಯೇ ವಾಹನಗಳನ್ನು ನಿಲ್ಲಿಸಿ ಸಂಚಾರಕ್ಕೆ ಅಡಚಣೆ ಉಂಟುಮಾಡಲಾಗುತ್ತದೆ.
· 15 ಮತ್ತು 19 ನಂಬ್ರದ ಕೆಲವು ಖಾಸಗಿ ಸಿಟಿ ಬಸ್‌ಗಳಲ್ಲಿ ಪ್ರಯಾಣಿಕರಿಗೆ ಟಿಕೆಟ್‌ ನೀಡುತ್ತಿಲ್ಲ.
· ರೈಲು ನಿಲ್ದಾಣ ರಸ್ತೆಯ ಮುತ್ತಪ್ಪ ಗುಡಿ ಜಂಕ್ಷನ್‌ನಲ್ಲಿ ವೃತ್ತ ನಿರ್ಮಾಣ ಮಾಡಬೇಕು. 

Advertisement

Udayavani is now on Telegram. Click here to join our channel and stay updated with the latest news.

Next