Advertisement
ಪಾಂಡೇಶ್ವರ: ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚಿನ ಬಾರ್ ಮತ್ತು ಮದ್ಯದಂಗಡಿಗಳನ್ನು ಮುಚ್ಚಿರುವುದರಿಂದ ಜನರು ಮದ್ಯ ಸೇವನೆಗೆ ನಗರಕ್ಕೆ ಬರುತ್ತಿದ್ದಾರೆ. ಇದರಿಂದ ಕೆಲವು ಮದ್ಯದಂಗಡಿ/ ಬಾರ್‌ಗಳ ಆವರಣದಲ್ಲಿ ವಾಹನಗಳ ದಟ್ಟಣೆಯಿಂದ ಸಂಚಾರಕ್ಕೆ ತಡೆ ಉಂಟಾಗುತ್ತಿದೆ. ಅಲ್ಲದೆ ನಗರದ ಕೆಲವು ವೈನ್ ಶಾಪ್‌ಗ್ಳಲ್ಲಿ ಬೆಳಗ್ಗೆ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂಬ ದೂರು ಶುಕ್ರವಾರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಕೇಳಿಬಂದವು. ಈ ವಿಷಯದ ಕುರಿತು ಅಬಕಾರಿ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗುವುದು ಎಂದು ಕರೆಗಳನ್ನು ಸ್ವೀಕರಿಸಿದ ಎಸಿಪಿ ತಿಲಕ್‌ಚಂದ್ರ ತಿಳಿಸಿದರು.
Related Articles
ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಮಾದಕ ಪದಾರ್ಥಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ, ಮೋರ್ಗನ್ಸ್ ಗೇಟ್‌ನಲ್ಲಿ ಬಾರ್ ಒಂದರ ಮೇಲೆ ರಿಕ್ರಿಯೇಶನ್ ಕ್ಲಬ್ ಆರಂಭವಾಗುವ ಸಾಧ್ಯತೆ ಕುರಿತು, ಕೃಷ್ಣಾಪುರದಲ್ಲಿ ಸಣ್ಣ ಮಕ್ಕಳು ಬೈಕ್ ರೈಡ್ ಮಾಡುತ್ತಿರುವ ಬಗ್ಗೆ ಸಾರ್ವಜನಿಕರು ದೂರು ನೀಡಿದರು. ಕಾನೂನು ಬಾಹಿರ ಚಟುವಟಿಕೆಗಳಿಗೆ ಅವಕಾಶ ಮಾಡಿ ಕೊಡುವುದಿಲ್ಲ. ಅಂತಹ ಕೃತ್ಯಗಳು ನಡೆಯುತ್ತಿರುವ ಬಗ್ಗೆ ಗಮನಕ್ಕೆ ಬಂದಲ್ಲಿ ಸಾರ್ವಜನಿಕರು ತಮಗೆ ದೂರು ಸಲ್ಲಿಸಬಹುದು ಎಂದು ಎಸಿಪಿ ವಿವರಿಸಿದರು.
Advertisement
ಬೀದಿ ನಾಯಿಗಳ ಹಾವಳಿಬಿಜೈನಲ್ಲಿ ಬೆಳಗ್ಗಿನ ಹೊತ್ತು ಬೀದಿ ನಾಯಿಗಳ ಹಾವಳಿ ಜಾಸ್ತಿಯಾಗಿದ್ದು, ಪಾದಚಾರಿಗಳಿಗೆ ನಡೆದಾಡಲು ಕಷ್ಟವಾಗುತ್ತಿದೆ. ವಾಕಿಂಗ್ ಹೋಗುವಾಗ ನಾಯಿಗಳ ಹಿಂಡು ಅಟ್ಟಿಸಿಕೊಂಡು ಬರುತ್ತದೆ ಎಂಬ ದೂರು ಬಂತು. ಈ ಬಗ್ಗೆ ಮಹಾನಗರ ಪಾಲಿಕೆಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಎಸಿಪಿ ತಿಲಕ್‌ಚಂದ್ರ ತಿಳಿಸಿದರು. ಬಂಟ್ಸ್ ಹಾಸ್ಟೆಲ್ ಜಂಕ್ಷನ್ ಬಳಿ ಹಾಪ್‌ಕಾಮ್ಸ್ ಮಳಿಗೆ ಎದುರಿನ ರಸ್ತೆಯನ್ನು ಏಕಮುಖ ರಸ್ತೆಯನ್ನಾಗಿ ಮಾಡಿದರೆ ಬಂಟ್ಸ್ ಹಾಸ್ಟೆಲ್- ಪಿವಿಎಸ್ ರಸ್ತೆಯಲ್ಲಿ ಆಗಿಂದಾಗ್ಗೆ ಸಂಚಾರ ಅಸ್ತವ್ಯಸ್ತಗೊಳ್ಳುವುದನ್ನು ತಡೆಯಬಹುದು ಎಂಬ ಸಲಹೆಯನ್ನು ಸಾರ್ವಜನಿಕರೊಬ್ಬರು ಮುಂದಿಟ್ಟರು. ಪಿಕ್ ಪಾಕೆಟ್ ಹೆಚ್ಚಳ
ರೂಟ್ ನಂಬ್ರ 15 ಬಸ್‌ನಲ್ಲಿ ಲಾಲ್‌ಬಾಗ್- ನಂತೂರು ಮಧ್ಯೆ ಪಿಕ್ ಪಾಕೆಟ್ ಪ್ರಕರಣಗಳು ಹೆಚ್ಚು ಸಂಭವಿಸುತ್ತವೆ ಎಂಬ ದೂರಿಗೆ ಸ್ಪಂದಿಸಿದ ಎಸಿಪಿ ಈ ಕುರಿತು ಬಸ್‌ಗಳ ಚಾಲಕ, ನಿರ್ವಾಹಕರಿಗೆ ನಿಗಾವಹಿಸುವಂತೆ ಸೂಚಿಸಲಾಗುವುದು ಎಂದರು. ನಂಬರ್ ಪ್ಲೇಟ್ ಇಲ್ಲದ ವಾಹನಗಳಿದ್ದರೆ ದೂರು ಕೊಡಿ ಎಂದು ತಿಳಿಸಿದರು. ಸಿಸಿಬಿ ವಿಭಾಗದ ಎಸಿಪಿ ವೆಲೆಂಟೈನ್ ಡಿ’ಸೋಜಾ, ಇನ್‌ಸ್ಪೆಕ್ಟರ್ ಸವಿತ್ರತೇಜ, ಎಎಸ್‌ಐ ಯೂಸುಫ್, ಹೆಡ್‌ಕಾನ್‌ಸ್ಟೇಬಲ್ ಪುರುಷೋತ್ತಮ ಅವರು ಉಪಸ್ಥಿತರಿದ್ದರು. ಬಸ್ ಮಾಲಕರ ಸಂಘದ ಪ್ರತಿನಿಧಿ ಉಪಸ್ಥಿತಿ
ಫೋನ್ ಇನ್ ಕಾರ್ಯಕ್ರಮದಲ್ಲಿ ಜಿಲ್ಲಾ ಬಸ್ ಮಾಲಕರ ಸಂಘದ (ಸಿಟಿ ಬಸ್) ಪ್ರಧಾನ ಕಾರ್ಯದರ್ಶಿ ಸುಚೇತನ್ ಅವರೂ ಉಪಸ್ಥಿತರಿದ್ದು, ಬಸ್ ಸಂಚಾರಕ್ಕೆ ಸಂಬಂಧಿಸಿದ ಸಾರ್ವನಿಕರ ಸಮಸ್ಯೆಗಳನ್ನು ಆಲಿಸಿದರು. ಇತ್ತೀಚೆಗೆ ನಡೆದ ಪೊಲೀಸ್ – ಬಸ್ ಮಾಲಕರ ಸೌಹಾರ್ದ ಸಭೆಯಲ್ಲಿ ಮುಂದಿನ ಫೋನ್ ಇನ್ ಕಾರ್ಯಕ್ರಮಗಳಿಗೆ ಬಸ್ ಮಾಲಕರ ಸಂಘದ ಪ್ರತಿನಿಧಿಯೊಬ್ಬರು ಹಾಜರಿರುವಂತೆ ಪೊಲೀಸ್ ಆಯುಕ್ತರು ಸೂಚಿಸಿದ್ದರು. ಸಾರ್ವಜನಿಕರಿಂದ ಬಂದ ದೂರು/ ಸಮಸ್ಯೆಗಳು
– ತೊಕ್ಕೋಟು ಜಂಕ್ಷನ್‌ನಲ್ಲಿ ಎಲ್ಲೆಂದರಲ್ಲಿ ಜನರು ರಸ್ತೆ ದಾಟುತ್ತಿದ್ದು, ಇದನ್ನು ತಡೆಯಲು ಕ್ರಮ ಜರಗಿಸಬೇಕು. ಪಿ.ಎ. ಕಾಲೇಜು ಕ್ರಾಸ್ ಬಳಿ ಹಂಪ್ ಹಾಕಬೇಕು. – ಕೆ.ಎಸ್. ರಾವ್ ರಸ್ತೆಯಲ್ಲಿ ಬಸ್ ಬೇ ಬೇಕು. – ಪಡೀಲ್- ಬಜಾಲ್ ರಸ್ತೆಯಲ್ಲಿ ಬಸ್ಸುಗಳನ್ನು ಚಾಲಕರು ಮಾರ್ಗ ಮಧ್ಯೆ ನಿಲ್ಲಿಸುತ್ತಾರೆ. – ಕೆಎಸ್‌ಆರ್‌ಟಿಸಿ ರೂಟ್ ನಂಬ್ರ 17ರ ಬಸ್ಸನ್ನು ಕುಂಜತ್ತಬೈಲ್‌ನಿಂದ ನಿಗದಿತ ಸಮಯಕ್ಕೆ ಮೊದಲೇ ಬಿಡುತ್ತಾರೆ. – ಉರ್ವ ಮಾರಿಗುಡಿ ಬಳಿ ರಾತ್ರಿ 7 ಗಂಟೆ ಬಳಿಕ ರಸ್ತೆಯ ಎರಡೂ ಬದಿ ವಾಹನ ಗಳನ್ನು ನಿಲ್ಲಿಸಿ ಸಂಚಾರಕ್ಕೆ ತಡೆ ಉಂಟು ಮಾಡಲಾಗುತಿದ್ದು ನಡೆದಾಡಲೂ ಕಷ್ಟವಾಗುತ್ತದೆ. – ಕೆಲವು ಸಿಟಿ ಬಸ್‌ಗಳಲ್ಲಿ ಜಾಸ್ತಿ ಟಿಕೆಟ್ ದರ ಪಡೆಯುತ್ತಿದ್ದಾರೆ. – ಮಂಗಳಾದೇವಿಯಲ್ಲಿ ‘ಮಂಗಳೂರು ವನ್’ ಸೇವೆಯನ್ನು ಆರಂಭಿಸಬೇಕು. ಜಲ್ಲಿಗುಡ್ಡೆ- ಮಂಗಳಾದೇವಿ ಮಾರ್ಗದಲ್ಲಿ ಓಡಾಡುವ 11ಸಿ ಬಸ್ಸು ಸಮರ್ಪಕವಾಗಿ ಕಾರ್ಯಾಚರಿಸುವುದಿಲ್ಲ. – ಫಳ್ನೀರ್ ರಸ್ತೆಯಲ್ಲಿ ಶಾಲಾ ಕಾಲೇಜು ಬಿಡುವ ಸಂದರ್ಭದಲ್ಲಿ ಟ್ರಾಫಿಕ್ ಜಾಮ್ ಆಗುತ್ತಿದೆ. – ಸ್ಟರಕ್ ರಸ್ತೆಯಲ್ಲಿ ಸಂಜೆ 5.30 ರ ಬಳಿಕ ರಸ್ತೆಯ ಎರಡೂ ಕಡೆ ವಾಹನ ನಿಲ್ಲಿಸುವುದರಿಂದ ಸಂಚಾರಕ್ಕೆ ತಡೆ.