Advertisement

ಪೊಲೀಸ್‌ ಸಿಬ್ಬಂದಿಗೆ ಶಿಸ್ತು -ಸಂಯಮ ಅವಶ್ಯ

12:15 PM Apr 04, 2022 | Team Udayavani |

ಹುಬ್ಬಳ್ಳಿ: ಪೊಲೀಸರು ಸಮಾಜದ ಬಗ್ಗೆ ಕಳಕಳಿ ಭಾವನೆ ಹೊಂದಬೇಕು. ಸಾರ್ವಜನಿಕ ನೆಮ್ಮದಿಗೆ ಕಾರ್ಯ ಪ್ರವೃತ್ತರಾಗಬೇಕು. ಪೊಲೀಸ್‌ ಸಿಬ್ಬಂದಿಗೆ ಶಿಸ್ತು ಮತ್ತು ಸಂಯಮ ಬಹಳ ಅವಶ್ಯಕ ಎಂದು ನಿವೃತ್ತ ಪೊಲೀಸ್‌ ಇನ್ಸ್‌ಪೆಕ್ಟರ್‌ ಅನಿಲ ಕುಲಕರ್ಣಿ ಹೇಳಿದರು.

Advertisement

ಗೋಕುಲ ರಸ್ತೆಯ ಹೊಸ ಸಿಎಆರ್‌ ಮೈದಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪೊಲೀಸ್‌ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪೊಲೀಸರು ಕಾನೂನುಗಳ ಬಗ್ಗೆ ಅರಿವು ಹೊಂದುವುದು ಬಹಳ ಮುಖ್ಯ. ಕಾನೂನುಗಳ ಬಗ್ಗೆ ತಿಳಿದುಕೊಂಡಾಗ ಮಾತ್ರ ಬೇರೆಯವರು ನಮ್ಮ ಮೇಲೆ ಅಧಿಕಾರ ಚಲಾಯಿಸುವುದು ತಪ್ಪುತ್ತದೆ. ಅತ್ಯಂತ ಚುರುಕುತನದಿಂದ ತನಿಖೆ ಮಾಡಬೇಕು. ದಿನನಿತ್ಯದ ಒತ್ತಡದಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದರು.

ನಿವೃತ್ತ ಪೊಲೀಸ್‌ ಇನ್ಸ್‌ಪೆಕ್ಟರ್‌ ಅರುಣಕುಮಾರ ಸಾಳುಂಕೆ ಮಾತನಾಡಿ, ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸಲು ಅಧಿಕಾರಿಗಳು ತೋರಿದ ಸಹಕಾರ ಅನನ್ಯವಾದುದು. ಸೇನಾಪಡೆಗಳು ಗಡಿ ಕಾಯುವ ಹಾಗೆ ಪೋಲಿಸರು ಆಂತರಿಕ ರಕ್ಷಣೆಯಲ್ಲಿ ತೊಡಗಿರುತ್ತಾರೆ. ದೈನಂದಿನ ಜೀವನದಲ್ಲಿ ಸವಾಲುಗಳು ಸಹಜ. ಅವುಗಳನ್ನು ದಿಟ್ಟತನದಿಂದ ಎದುರಿಸಲು ಸನ್ನದ್ಧರಾಗಬೇಕು. ಸಾರ್ವಜನಿಕರು ನಮ್ಮ ಮೇಲೆ ಹೆಚ್ಚಿನ ಗೌರವ ಹೊಂದಿರುತ್ತಾರೆ. ಆ ಗೌರವ ಉಳಿಸಿಕೊಂಡು ಹೋಗಬೇಕಾದದ್ದು ನಮ್ಮೆಲ್ಲರ ಕರ್ತವ್ಯ ಎಂದರು.

ಕಳೆದ 34 ವರ್ಷದಿಂದ ಬಳ್ಳಾರಿ, ಹಾವೇರಿ, ಗದಗ, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಾಡಿದ ಸೇವಾ ದಿನಗಳ ಮೆಲುಕು ಹಾಕಿದರು. ಹು-ಧಾ ಪೊಲೀಸ್‌ ಕಮಿಷನರ್‌ ಲಾಭೂ ರಾಮ್‌ ಮಾತನಾಡಿ, ಕರ್ನಾಟಕ ರಾಜ್ಯ ಏಕೀಕರಣವಾದ ನಂತರ ಕರ್ನಾಟಕ ಪೊಲೀಸ್‌ ಪಡೆಯನ್ನು 1965 ಏ. 2ರಂದು ಕರ್ನಾಟಕ ಪೊಲೀಸ್‌ ಕಾಯ್ದೆಗೆ ಒಳಪಡಿಸಲಾಯಿತು. ಅದರ ಸ್ಮರಣೆಗಾಗಿ ಪ್ರತಿ ವರ್ಷ ಏ. 2ರಂದು ಪೊಲೀಸ್‌ ಧ್ವಜ ದಿನಾಚರಣೆಯನ್ನಾಗಿ ರಾಜ್ಯದ ಎಲ್ಲ ಘಟಕಗಳಲ್ಲಿ ಆಚರಿಸಲಾಗುತ್ತಿದೆ. ಪೊಲೀಸ್‌ ಧ್ವಜಗಳನ್ನು ಮಾರಾಟ ಮಾಡಿ ಸಂಗ್ರಹವಾದ ಹಣವನ್ನು ನಿವೃತ್ತ ಪೊಲೀಸ್‌ ಅಧಿಕಾರಿಗಳ ಕಲ್ಯಾಣ ನಿಧಿಗೆ ಅರ್ಪಿಸಲಾಗುವುದು ಎಂದರು.

ನಿವೃತ್ತಿ ಹೊಂದಿದ ಪೊಲೀಸ್‌ ಸಿಬ್ಬಂದಿ ಹಾಗೂ ಅಧಿಕಾರಿಗಳ ಕುಟಂಬದವರ ವೈದ್ಯಕೀಯ ವೆಚ್ಚ ಹಾಗೂ ಶವ ಸಂಸ್ಕಾರಕ್ಕಾಗಿ ಕಲ್ಯಾಣ ನಿ ಧಿಯಿಂದ ಧನಸಹಾಯ ನೀಡಲಾಗುತ್ತದೆ. ಇಂದು ಸಂಗ್ರಹವಾದ ಹಣದಲ್ಲಿ ಅರ್ಧದಷ್ಟು ಪೊಲೀಸ್‌ ಕಲ್ಯಾಣ ನಿಧಿಗೆ ಹಾಗೂ ಉಳಿದ ಅರ್ಧ ಹಣವನ್ನು ನಿವೃತ್ತ ಪೊಲೀಸ್‌ ಅಧಿಕಾರಿಗಳ ಕ್ಷೇಮ ನಿಧಿಗೆ ಉಪಯೋಗಿಸಲಾಗುತ್ತದೆ. ಸಿಬ್ಬಂದಿ ಮಕ್ಕಳ ವಿದ್ಯಾಭ್ಯಾಸ, ವೈದ್ಯಕೀಯ ವೆಚ್ಚ ಹಾಗೂ ಸಿಬ್ಬಂದಿ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಬಳಸಲಾಗುತ್ತದೆ. ಕಳೆದ ಬಾರಿ ಪೊಲೀಸ್‌ ಧ್ವಜ ಮಾರಾಟದಿಂದ 16 ಲಕ್ಷ ರೂ. ಸಂಗ್ರಹವಾಗಿತ್ತು ಎಂದು ಹೇಳಿದರು.

Advertisement

ಉಪ ಪೊಲೀಸ್‌ ಆಯುಕ್ತರಾದ ಸಾಹಿಲ್‌ ಬಾಗ್ಲಾ, ಎಸ್‌.ವಿ. ಯಾದವ, ಡಾ| ಗೋಪಾಲ ಬ್ಯಾಕೋಡ, ಎಸಿಪಿಗಳಾದ ಆರ್‌.ಕೆ. ಪಾಟೀಲ, ತಾಯಪ್ಪ ದೊಡ್ಡಮನಿ, ಮಾಜಿ ಸಂಸದ ಪ್ರೊ| ಐ.ಜಿ. ಸನದಿ, ರವಿ ನಾಯಕ ಇದ್ದರು. ಇನ್ಸ್‌ಪೆಕ್ಟರ್‌ ಜಗದೀಶ ಹಂಚಿನಾಳ ನಿರೂಪಿಸಿದರು ಪೊಲೀಸರ ಕಲ್ಯಾಣ ನಿಧಿಗೆ ಒಂದು ಲಕ್ಷ ರೂ. ದೇಣಿಗೆ 2022ನೇ ಸಾಲಿನ ಪೊಲೀಸ್‌ ಧ್ವಜ ಬಿಡುಗಡೆ ಮಾಡಲಾಯಿತು.

ಉದ್ಯಮಿ ವಿ.ಎಸ್‌.ವಿ. ಪ್ರಸಾದ್‌ ಅವರು ಪೊಲೀಸ್‌ ಕಲ್ಯಾಣ ನಿಧಿ ಗೆ 1 ಲಕ್ಷ ರೂ. ದೇಣಿಗೆ ನೀಡಿದರು. ಮುಖ್ಯಮಂತ್ರಿಯವರ ಚಿನ್ನದ ಪದಕಕ್ಕೆ ಭಾಜನರಾದ ಪೊಲೀಸ್‌ ಕಾನ್ಸಸ್ಟೇಬಲ್‌ಗ‌ಳಾದ ನಾಗರಾಜ ಕೆಂಚಣ್ಣನವರ, ಶಿವಾನಂದ ತಿಮ್ಮಾಪುರ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.

ಸಂತೋಷ ಭೋಜಪ್ಪಗೋಳ ನೇತೃತ್ವದಲ್ಲಿ ಪೊಲೀಸ್‌ ಪಡೆಗಳ ಪಥ ಸಂಚಲನ ನಡೆಯಿತು. ಎಡ್ವಿನ್‌ ಡಿಸೋಜಾ ಅವರ ನೇತೃತ್ವದಲ್ಲಿ ಪೊಲೀಸ್‌ ಬ್ಯಾಂಡ್‌ ಪಥ ಸಂಚಲನ ನಡೆಯಿತು. ಆರ್‌ಎಸ್‌ಐ ಭಾಗಣ್ಣ ವಾಲೀಕಾರ ಅವರು ರಾಷ್ಟ್ರ ಧ್ವಜದ ಬೆಂಗಾವಲು ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next