Advertisement
ಉಡುಪಿ: ಪ್ರತೀ ಗ್ರಾಮಕ್ಕೆ ಒಬ್ಬ ಪೊಲೀಸ್. ಆಕಸ್ಮಿಕ ಘಟನೆಗಳನ್ನು ಹೊರತುಪಡಿಸಿ ಏನೇ ನಡೆದರೂ ಆತನೇ ಜವಾಬ್ದಾರಿ. ಅನೈತಿಕ ಚಟುವಟಿಕೆ, ಅಕ್ರಮ, ಅವ್ಯವಹಾರಗಳು, ಇಸ್ಪೀಟು, ಮಾದಕ ವ್ಯಸನ, ಕೋಳಿ ಅಂಕ…ಹೀಗೆ ಆ ಗ್ರಾಮದಲ್ಲಿ ಯಾವುದೇ ಅವ್ಯವಹಾರ ನಡೆದರೂ ಆ ನಿರ್ದಿಷ್ಟ ಪೊಲೀಸ್ ಸಿಬಂದಿ ಠಾಣೆಗೆ ಮಾಹಿತಿ ನೀಡಬೇಕು. ಬಳಿಕ ಕಾರ್ಯಾಚರಣೆಯ ಆಲೋಚನೆ.
ಅಂದಿನ ಬೀಟ್ ವ್ಯವಸ್ಥೆ ಈಗಲೂ ಇದ್ದು, ನಡೆಯುತ್ತಿರುವ ಅಕ್ರಮಗಳ ಬಗ್ಗೆಯೂ ಅರಿವಿದೆ. ಆದರೆ ಅವರಿಗೆ ಪವರ್ ಇಲ್ಲವಂತೆ. ರಾಜ್ಯ ಪೊಲೀಸ್ ಮಹಾನಿರ್ದೇಶಕರಿಂದ ಐಜಿಪಿಗಳ ಮೂಲಕ ಆಯಾ ಜಿಲ್ಲಾ ಎಸ್‌ಪಿಗಳಿಗೆ ಒತ್ತಡ ಹಾಕಿದರಷ್ಟೇ ವ್ಯವಸ್ಥೆ ಪರಿಣಾಮಕಾರಿಯಾಗಿ ನಡೆಯುತ್ತದೆ. ಅದಾಗದ ಕಾರಣ ಈಗ ಈಗ ಬೀಟ್ ವ್ಯವಸ್ಥೆ ನಾಮ್ ಕೇ ವಾಸ್ತೆ ಎಂಬಂತಾಗಿದೆ.
Related Articles
ಇಸ್ಪೀಟು ಕ್ಲಬ್‌ಗಳು, ಮಟ್ಕಾ ಹಾವಳಿ, ವೇಶ್ಯಾವಾಟಿಕೆ ಸಹಿತ ಅಕ್ರಮ ಚಟುವಟಿಕೆಗಳ ಬಗ್ಗೆ ಸಾರ್ವಜನಿಕರು ಪೊಲೀಸರಿಗೆ ದೂರು ನೀಡಬಹುದು. ಆದರೆ ದೂರು ನೀಡುತ್ತಿಲ್ಲ ಎಂಬುವುದು ಪೊಲೀಸರ ಅಂಬೋಣ. ದೂರು ನೀಡದೆಯೂ ದಾಳಿ ಮಾಡಿ ಕಾನೂನು ಕ್ರಮ ಜರಗಿಸುವ ಅಧಿಕಾರ ಆಯಾ ಠಾಣೆಯ ಇನ್‌ಸ್ಪೆಕ್ಟರ್‌ಗಳಿಗಿದೆ. ಆದರೆ ಜಿಲ್ಲೆಯಲ್ಲಿ ಅದಕ್ಕೇ ಮನಸ್ಸು ಮಾಡುತ್ತಿಲ್ಲ. ಪೊಲೀಸರಿಗೆ ಎಲ್ಲ ಅಕ್ರಮಗಳೂ ತಿಳಿದಿದ್ದರೂ ನಮಗ್ಯಾಕೆ ಎಂಬಂತಿದ್ದಾರೆ. ನಾಗರಿಕರು ನಾವು ಹೇಳಿದರೂ ಪ್ರಯೋಜನವಾಗದು ಎಂದು ಸುಮ್ಮನಾಗಿದ್ದಾರೆ. ಡ್ರಗ್ಸ್ ಹಾವಳಿ ಹೆಚ್ಚಾಗಲೂ ಇದೂ ಕಾರಣ. ಸಾರ್ವಜನಿಕರೊಬ್ಬರು ಕಳುಹಿಸಿದ ಸಂದೇಶದ ಪ್ರಕಾರ, ಪ್ರಾಥಮಿಕ- ಪ್ರೌಢ ಶಾಲೆಗಳ ಮಟ್ಟಕ್ಕೂ ಮಾದಕ ವಸ್ತುಗಳ ಹಾವಳಿ ತಲುಪಿದೆ.
Advertisement
ವ್ಯವಸ್ಥೆ ಏನಾಗಿದೆ?ಬೀಟ್ ಪೊಲೀಸರು ಆಯಾ ಠಾಣಾ ವ್ಯಾಪ್ತಿಯ ಪ್ರಮುಖ ಸ್ಥಳಗಳಿಗೆ ತೆರಳಿ ಅಲ್ಲಿರಿಸಿದ ಪುಸ್ತಕಕ್ಕೆ ಸಹಿ ಮಾಡುವ ಪದ್ದತಿ ಈಗಲೂ ಚಾಲ್ತಿಯಲ್ಲಿದೆ. ಇತ್ತೀಚೆಗೆ ಪೊಲೀಸರು ಆ್ಯಪ್ ಮೂಲಕವೇ ಆಯಾ ಸ್ಥಳಕ್ಕೆ ಹೋದ ಬಗ್ಗೆ ಮಾಹಿತಿ ಕಂಟ್ರೋಲ್ ರೂಂಗೆ ಲಭಿಸುತ್ತದೆ. ಪ್ರತೀ ವಾರ್ಡ್, ಗ್ರಾಮಕ್ಕೊಬ್ಬರೂ ಪೊಲೀಸರಿದ್ದಾರೆ. ಆದರೂ ಡ್ರಗ್ಸ್ ದಂಧೆಯಂಥ ಅಕ್ರಮಗಳನ್ನು ಪತ್ತೆ ಹಚ್ಚಲು ಯಾಕೆ ಆಗುತ್ತಿಲ್ಲ ಎಂಬುದೇ ಯಕ್ಷಪ್ರಶ್ನೆ. ಇಲಾಖೆಯ ಕೆಲವರ ಪ್ರಕಾರ, ‘ನಾವು ಹೇಳಿದರೂ ಮೇಲಧಿಕಾರಿಗಳು ಸುಮ್ಮನಿರುತ್ತಾರೆ, ಮನಸ್ಸು ಮಾಡುವುದಿಲ್ಲ’ ಎನ್ನುತ್ತಾರೆ. ಬೀಟ್ ವ್ಯವಸ್ಥೆಗೆ ಹೊಸ ರೂಪ
ಮಂಗಳೂರು: ಇಲ್ಲಿಯೂ ಬೀಟ್ ವ್ಯವಸ್ಥೆಗೆ ಹೊಸ ರೂಪ ನೀಡಲಾಗಿದೆ. ಒಂದು ಠಾಣಾ ವ್ಯಾಪ್ತಿಯ ನಿರ್ದಿಷ್ಟ ಪ್ರದೇಶವನ್ನು ಒಂದು ಅಥವಾ ಇಬ್ಬರು ಪೊಲೀಸ್ ಸಿಬಂದಿಗೆ ವಹಿಸಿ, ಸ್ಥಳೀಯರೊಂದಿಗೆ ನಿರಂತರ ಸಂಪರ್ಕವನ್ನಿಟ್ಟುಕೊಳ್ಳುವುದು ಬೀಟ್ ವ್ಯವಸ್ಥೆ. ದ.ಕ ಜಿಲ್ಲಾ ವ್ಯಾಪ್ತಿಯಲ್ಲಿ ತಿಂಗಳಿಗೆ ಎರಡು ಬಾರಿ, ಕಮಿಷನರೆಟ್ ವ್ಯಾಪ್ತಿಯಲ್ಲಿ ಕನಿಷ್ಠ ಮೂರು ಬಾರಿ ಸಭೆ ನಡೆಸಬೇಕಿದೆ. ಹೆಚ್ಚಿನ ಕಡೆಗಳಲ್ಲಿ ಸಭೆ ನಡೆದರೂ, ಡ್ರಗ್ಸ್ ದಂಧೆ ಹತ್ತಿಕ್ಕುವ ವಿಷಯಗಳಿಗೆ ಆದ್ಯತೆಯೇ ಇರದು. ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ 15 ಪೊಲೀಸ್ ಠಾಣೆಗಳಿದ್ದು ಇಲ್ಲಿ ಕನಿಷ್ಠ 16 ರಿಂದ ಗರಿಷ್ಠ 64 ಪೊಲೀಸ್ ಬೀಟ್(ಏರಿಯಾ) ಗಳಿವೆ. ಠಾಣೆಯಲ್ಲಿ 50 ಸಿಬಂದಿಯಿದ್ದರೆ ಅವರಲ್ಲಿ 40 ಜನರಿಗೆ ತಲಾ ಇಬ್ಬರಿಗೆ ಒಂದಂತೆ 20 ಬೀಟ್ ಮಾಡಲಾಗಿದೆ. ಬ್ರಿಫಿಂಗ್ ಸಭೆ
ಪೊಲೀಸರು ಪ್ರಮುಖ ಜನಸಂದಣಿ ಸ್ಥಳ, ಸೂಕ್ಷ್ಮವೆಂದು ಗುರುತಿಸಲ್ಪಟ್ಟ ಪ್ರದೇಶಗಳಲ್ಲಿ ಬ್ರಿಫಿಂಗ್ ಸಭೆ ಕೂಡ ನಡೆಸುತ್ತಾರೆ. ಪೊಲೀಸರ ನಿರಂತರ ಗಸ್ತು ಹಲವು ಅಪರಾಧ ಚಟುವಟಿಕೆಗಳನ್ನು ಹದ್ದುಬಸ್ತಿನಲ್ಲಿಡಬಲ್ಲದು. ಆದರೆ ಪೊಲೀಸರಿಗೆ ಠಾಣಾ ಕರ್ತವ್ಯ, ನ್ಯಾಯಾಲಯ ಕಲಾಪ, ವಿಐಪಿ ಭದ್ರತೆ, ಪಾಸ್‌ಪೋರ್ಟ್ ಪರಿಶೀಲನೆ ಇತ್ಯಾದಿ ಒತ್ತಡವೇ ಹೆಚ್ಚಿದ್ದು, ಗಸ್ತು ಕೊನೆಯ ಆದ್ಯತೆಯಾಗಿದೆ. ಆದ ಕಾರಣ ಆಯಕಟ್ಟಿನ ಸ್ಥಳಗಳಲ್ಲಿ ಮದ್ಯ, ಸಿಗರೇಟು, ಗಾಂಜಾ ಸಹಿತ ಮಾದಕ ದ್ರವ್ಯ ಪ್ರಕರಣ ಹೆಚ್ಚಾಗುತ್ತಿದೆ ಎಂಬುದು ಸಾರ್ವಜನಿಕರ ದೂರು.
ಮೂರು ವರ್ಷಗಳ ಹಿಂದೆ ಮಹಿಳೆಯರ ಸುರಕ್ಷತೆಯ ಉದ್ದೇಶಕ್ಕಾಗಿ ಆರಂಭವಾದ ರಾಣಿ ಅಬ್ಬಕ್ಕ ಪೊಲೀಸ್ ಪಡೆ ಈಗ ಅಸ್ತಿತ್ವದಲ್ಲಿಲ್ಲ. ಇದರಿಂದ ಪ್ರಸ್ತುತ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು, ನಾಗರಿಕರ ಮೇಲಾಗುವ ದುರ್ವರ್ತನೆ ಡೆಯಲು ಯಾವುದೇ ಪ್ರತ್ಯೇಕ ವ್ಯವಸ್ಥೆ ಇಲ್ಲ. ಕೆಮರಾಗಳ ಅವಲಂಬನೆ
ಸ್ಮಾರ್ಟ್ ಸಿಟಿ ಯೋಜನೆಯಡಿ ಜಂಕ್ಷನ್ ಗಳಲ್ಲಿ ಸಿಸಿ ಕೆಮರಾ ಅಳವಡಿಸಿದ್ದು, ಪೊಲೀಸ್ ಇಲಾಖೆಯೂ ನೂರು ಸಿಸಿ ಕೆಮರಾಗಳನ್ನು ಅಳವಡಿಸುತ್ತಿದೆ. ಗಡಿ ಪ್ರದೇಶಗಳಲ್ಲೂ ಕೆಮರಾಗಳಿವೆ. ಆದರೂ ಕಟ್ಟುನಿಟ್ಟಿನ ನಿಗಾ ಹಾಗೂ ಸಂಗ್ರಹಿತ ದೃಶ್ಯಗಳನ್ನು ಪರಿಶೀಲಿಸಿ ಅಕ್ರಮಗಳನ್ನು ಪತ್ತೆ ಹಚ್ಚದಿದ್ದರೆ ಕೆಮರಾಗಳಿದ್ದೂ ಪ್ರಯೋಜನವಾಗದು. ಮಾಹಿತಿ ಕೊಡಿ
ಡ್ರಗ್ಸ್ ಸಹಿತ ಯಾವುದೇ ಅಪರಾಧ, ಅಕ್ರಮ ಚಟುವಟಿಕೆಗಳ ಬಗ್ಗೆ 112 ಕ್ಕೆ ಕರೆ ಮಾಡಿ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಬಹುದು. ಮಾಹಿತಿ ನೀಡಿದವರ ಗುರುತನ್ನು ಗೌಪ್ಯವಾಗಿಡಲಾಗುತ್ತದೆ. ಸ್ಥಳೀಯ ಪೊಲೀಸರ ಮೇಲೆ ವಿಶ್ವಾಸವಿಲ್ಲದಿದ್ದರೆ ಪೊಲೀಸ್ ಆಯುಕ್ತರು, ಎಸ್ ಪಿ ಅವರಿಗೂ ನೇರವಾಗಿ ಮಾಹಿತಿ ನೀಡಬಹುದು. – ಪುನೀತ್ ಸಸಿಹಿತ್ಲು/ಸಂತೋಷ್ ಬೊಳ್ಳೆಟ್ಟು