Advertisement

Police Martyrs Day: ದೇಶದ ಅಖಂಡತೆಗೆ ಹುತಾತ್ಮರ ತ್ಯಾಗ ಸಹಾಯಕ: ನ್ಯಾಯಾಧೀಶ

02:11 AM Oct 22, 2024 | Team Udayavani |

ಉಡುಪಿ: ಹುತಾತ್ಮರ ತ್ಯಾಗ, ಬಲಿದಾನಗಳು ದೇಶದ ಅಖಂಡತೆ ಮತ್ತು ಸಾರ್ವಭೌಮತೆಯನ್ನು ಎತ್ತಿ ಹಿಡಿಯಲು ಕಾರಣವಾಗಿದೆ ಎಂದು ಜಿಲ್ಲಾ ಸತ್ರ ನ್ಯಾಯಾಧೀಶರಾದ ಕೆ.ಎಸ್‌. ಗಂಗಣ್ಣನವರ್‌ ಹೇಳಿದರು.

Advertisement

ಜಿಲ್ಲಾ ಪೊಲೀಸ್‌ ವತಿಯಿಂದ ಪೊಲೀಸ್‌ ಪರೇಡ್‌ ಮೈದಾನದಲ್ಲಿ ಪೊಲೀಸ್‌ ಹುತಾತ್ಮ ದಿನದ ಅಂಗವಾಗಿ ಹುತಾತ್ಮ ಸ್ಮಾರಕಕ್ಕೆ ಸೋಮವಾರ ಪುಷ್ಪಗುಚ್ಛ ಅರ್ಪಿಸಿ ಮಾತನಾಡಿ ದೇಶವೆಂದರೆ ಕೇವಲ ಭೌಗೋಳಿಕ ವಸ್ತುಗಳಿಂದ ಆಗಿರುವಂಥದ್ದಲ್ಲ. ಬದಲಾಗಿ ಅದು ಎಲ್ಲ ರೀತಿಯ ಮಾನವ, ಪ್ರಾಣಿ ಹಾಗೂ ಸಸ್ಯ ಸಂಕುಲಗಳನ್ನು ಒಳಗೊಂಡ ವ್ಯವಸ್ಥೆ. ಈ ದೇಶದ ರಕ್ಷಣೆಗಾಗಿ ತಮ್ಮ ಪ್ರಾಣವನ್ನು ಬಲಿಕೊಟ್ಟ ಹುತಾತ್ಮರ ಬಲಿದಾನಗಳನ್ನು ನಾವು ನೆನೆದುಕೊಂಡು ಅದರ ಮೂಲಕ ದೇಶದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯ ಪ್ರತೀಕವಾಗಬೇಕು. ದೇಶಕ್ಕಾಗಿ ಎಲ್ಲ ಶ್ರದ್ಧೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಅರುಣ್‌ ಕೆ. ಮಾತನಾಡಿ, 1959ರ ಅ.21 ರಂದು ಲಡಾಕ್‌ ಬಳಿಯಲ್ಲಿ ಭಾರತ ಹಾಗೂ ಚೀನದ ಸೈನಿಕರ ಮಧ್ಯೆ ನಡೆದ ಗುಂಡಿನ ದಾಳಿಯಲ್ಲಿ ಸಿಆರ್‌ಪಿಎಫ್ ಯೋಧರು ಮೃತಪಟ್ಟಿದ್ದರು. ಅಂದಿನಿಂದ ದೇಶಾದ್ಯಂತ ಪೊಲೀಸ್‌ ಸಿಬಂದಿಯ ಗೌರವಾರ್ಥ ಪೊಲೀಸ್‌ ಹುತಾತ್ಮ ದಿನ ಆಚರಿಸಲಾಗುತ್ತಿದೆ. ಒಂದು ವರ್ಷದಲ್ಲಿ ದೇಶದಲ್ಲಿ 216 ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬಂದಿ ಕರ್ತವ್ಯದ ವೇಳೆ ಪ್ರಾಣಾರ್ಪಣೆ ಮಾಡಿದ್ದಾರೆ. ಅದರಲ್ಲಿ ಕರ್ನಾಟಕದ ಐದು ಮಂದಿ ಅಧಿಕಾರಿಗಳು ಮತ್ತು ಸಿಬಂದಿ ಸೇರಿದ್ದಾರೆ ಎಂದರು.

ಜಿಲ್ಲಾಧಿಕಾರಿ ಡಾ| ಕೆ.ವಿದ್ಯಾ ಕುಮಾರಿ, ಕರಾವಳಿ ಕಾವಲು ಪೊಲೀಸ್‌ ಪಡೆಯ ವರಿಷ್ಠಾಧಿಕಾರಿ ಮಿಥುನ್‌ ಎಚ್‌.ಎನ್‌., ಹೆಚ್ಚುವರಿ ಎಸ್‌ಪಿಗಳಾದ ಎಸ್‌.ಟಿ. ಸಿದ್ದಲಿಂಗಪ್ಪ, ಪಿ.ಎ. ಹೆಗ್ಡೆ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next