Advertisement

ಪೊಲೀಸರ ತಡರಾತ್ರಿ ಉಡುಗೊರೆ

06:45 AM Jan 02, 2019 | Team Udayavani |

ಬೆಂಗಳೂರು: ಚಿನ್ನಾಭರಣ ಕಳೆದುಕೊಂಡಿದ್ದ ಸಾರ್ವಜನಿಕರಿಗೆ ನಗರ ಪೊಲೀಸರು ಹೊಸ ವರ್ಷಾಚರಣೆ ದಿನ ದಿಢೀರ್‌ ಸಿಹಿ ಸುದ್ದಿ ನೀಡಿ ಅವರ ಮುಖದಲ್ಲಿ ನಗು ಮೂಡಿಸಿದ್ದಾರೆ. ನಗರ ಪೊಲೀಸ್‌ ಆಯುಕ್ತ ಟಿ.ಸುನೀಲ್‌ ಕುಮಾರ್‌ ಸೇರಿದಂತೆ ಆಯಾ ವಲಯದ ಡಿಸಿಪಿಗಳು ಚಿನ್ನಾಭರಣ ಕಳೆದುಕೊಂಡಿದ್ದವರ ಮನೆಗಳಿಗೆ ಸೋಮವಾರ ತಡರಾತ್ರಿ ಖುದ್ದು ಭೇಟಿ ನೀಡಿ ಹೊಸ ವರ್ಷದ ಉಡುಗೊರೆಯಾಗಿ ಚಿನ್ನಾಭರಣ ಮರಳಿಸಿದ್ದಾರೆ.

Advertisement

ನಗರ ಪೊಲೀಸರ ಈ ವಿನೂತನ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ.ಪಶ್ಚಿಮ ವಿಭಾಗ, ವೈಟ್‌ ಫೀಲ್ಡ್‌, ದಕ್ಷಿಣ, ಈಶಾನ್ಯ, ಆಗ್ನೇಯ, ಉತ್ತರ ವಿಭಾಗದ ಪೊಲೀಸರು ಈ ವಿನೂತನ ಕಾರ್ಯ ನಡೆಸಿದ್ದಾರೆ. ಆಭರಣ ಕಳೆದುಕೊಂಡಿದ್ದ ನಾಗರಿಕರ ಮನೆಗಳಿಗೆ ಸೋಮವಾರ ರಾತ್ರಿ 12 ಗಂಟೆ ಬಳಿಕ ಭೇಟಿ ನೀಡಿದ ಪೊಲೀಸರು, ಕಾಲಿಂಗ್‌ ಬೆಲ್‌ ಒತ್ತಿದ್ದಾಗ ಅಚ್ಚರಿಯಿಂದಲೇ ಮನೆಯವರು ಬರಮಾಡಿಕೊಂಡಿದ್ದಾರೆ.

ಈ ವೇಳೆ ತಿಂಗಳುಗಳ ಹಿಂದೆ ಅವರು ಕಳೆದುಕೊಂಡಿದ್ದ ಆಭರಣಗಳನ್ನು ನೀಡಿದ ಪೊಲೀಸರು, ಹೊಸ ವರ್ಷಕ್ಕೆ ಶುಭಕೋರಿದಾಗ ಅಚ್ಚರಿಗೊಳಗಾಗಿದ್ದಾರೆ. ಜತೆಗೆ, ಪೊಲೀಸರ ಮಾದರಿ ಕಾರ್ಯಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

ಪಶ್ಚಿಮ, ಉತ್ತರ, ಈಶಾನ್ಯ ವಿಭಾಗದ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿದ್ದ ಕೆಲ ಪ್ರಕರಣಗಳಲ್ಲಿ ಆರೋಪಿಗಳಿಂದ ವಶಕ್ಕೆ ಪಡೆದ ಆಭರಣಗಳನ್ನು ನಗರ ಪೊಲೀಸ್‌ ಆಯುಕ್ತ ಟಿ.ಸುನೀಲ್‌ ಕುಮಾರ್‌ ಅವರು ನಾಗರಿಕರ ಮನೆಗಳಿಗೆ ಖುದ್ದು ತೆರಳಿ ಹಿಂತಿರುಗಿಸಿದ್ದಾರೆ. ಈ ಕಾರ್ಯಕ್ಕೆ ಪಶ್ಚಿಮ ವಿಭಾಗದ ಡಿಸಿಪಿ ರವಿ ಡಿ.ಚೆನ್ನಣ್ಣನವರ್‌ ಹಾಗೂ ಇತರೆ ಪೊಲೀಸ್‌ ಅಧಿಕಾರಿಗಳು ಸಾಥ್‌ ನೀಡಿದ್ದಾರೆ.

ವೈಟ್‌ ಫೀಲ್ಡ್‌ ವಿಭಾಗದ ಡಿಸಿಪಿ ಅಬ್ದುಲ್‌ ಅಹದ್‌ ಅವರು ಕೆ.ಆರ್‌.ಪುರ ಪೊಲೀಸ್‌ ಠಾಣೆ ವ್ಯಪ್ತಿಯ  ಪ್ರಕರಣಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರ ಮನೆಗೆ ತೆರಳಿ ಆಭರಣ ಹಿಂತಿರುಗಿಸಿದ್ದಾರೆ. ಉಳಿದಂತೆ ಆಯಾ ಠಾಣೆಯ ಅಧಿಕಾರಿಗಳು ಈ ಕಾರ್ಯ ನಡೆಸಿದ್ದಾರೆ.

Advertisement

ನಗರ ಪೊಲೀಸರ ಈ ಅಚ್ಚರಿಯ ಉಡುಗೊರೆ ನೀಡುವ ಕಾರ್ಯಕ್ಕೆ ಫೇಸ್‌ಬುಕ್‌, ಟ್ವಿಟರ್‌ ಸೇರಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಪೊಲೀಸರ ಈ ಕಾರ್ಯ ಅನುಕರಣೀಯ, ಜನಸ್ನೇಹಿ ಪೊಲೀಸ್‌ ವ್ಯವಸ್ಥೆ ಗಟ್ಟಿಗಳಿಸುವಲ್ಲಿ ಇಂತಹ ಕಾರ್ಯ ಹೆಚ್ಚು ಅನುಕೂಲವಾಗಲಿದೆ ಎಂದು ಮೆಚ್ಚುಗೆ ಕೇಳಿಬಂದಿದೆ.

ಬಂದೋಬಸ್ತ್ಗೆ ಶ್ಲಾಘನೆ: ಈ ಮಧ್ಯೆ, ನಗರಾದ್ಯಂತ ಹೊಸವರ್ಷ ಸಂಭ್ರಮಾಚರಣೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ ಪೊಲೀಸರ ಕಾರ್ಯಕ್ಕೂ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.

ಸಾವಿರಾರು ಸಂಖ್ಯೆಯ ಜನ ಸೇರುವ ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ, ಚರ್ಚ್‌ಸ್ಟ್ರೀಟ್‌, ವೈಟ್‌ಫೀಲ್ಡ್‌ ವಿಭಾಗದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸಿಸಿ ಕ್ಯಾಮೆರಾ ಅಳವಡಿಕೆ ಸೇರಿ ಇತರೆ ಕ್ರಮಗಳು ಸಫ‌ಲವಾಗಿದ್ದು, ಪೊಲೀಸರ ಕಾರ್ಯ ಅದ್ಭುತ ಎಂದು ಜಾಲತಾಣಿಗರು ಬಣ್ಣಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next