Advertisement
ಅಕ್ರಮ ಕಟ್ಟಡ, ಪಾರ್ಕಿಂಗ್ ಗೆ ಜಾಗವಿಲ್ಲ, ಇಕ್ಕಟ್ಟು ರಸ್ತೆ ಮೊದಲಾದ ಕಾರಣಗಳಿಂದ ಪುತ್ತೂರು ಪೇಟೆ ತೀರಾ ಇಕ್ಕಟ್ಟಿನಿಂದ ಕೂಡಿದೆ. ವಾಹನ ಪಾರ್ಕಿಂಗ್‌ಗೆ ಜಾಗವೇ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ. ಅಕ್ರಮಗಳ ತೆರವು ಮಾಡದೆ, ವಾಹನ ಪಾರ್ಕಿಂಗ್ ಗೆ ವ್ಯವಸ್ಥೆ ಮಾಡದೇ ವಾಹನಗಳ ಮೇಲೆ ನಿರ್ಬಂಧ ಹೇರಲು ಮೇಲಧಿಕಾರಿಗಳು ಸೂಚಿಸಿದರು. ಪರಿಣಾಮ ಏಕಾಏಕಿ ಕಾನೂನನ್ನು ಜಾರಿಗೆ ತರಲಾಯಿತು. ರಸ್ತೆಯ ಬದಿಯಲ್ಲಿ ನಿಲ್ಲಿಸಿರುವ ವಾಹನಗಳಿಗೆ ದಂಡ ವಿಧಿಸುವುದು, ಚಕ್ರಕ್ಕೆ ಲಾಕ್ ಹಾಕುವ ಕ್ರಮ ಕೈಗೊಳ್ಳಲಾಯಿತು.
ದರ್ಬೆಯಿಂದ ಬೊಳುವಾರು ನಡುವಿನ ಮುಖ್ಯರಸ್ತೆಯ ಬದಿಯಲ್ಲಿ ಯಾವುದೇ ವಾಹನಗಳನ್ನು ಪಾರ್ಕ್ ಮಾಡುವಂತಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳೇ ಆದೇಶ ಹೊರಡಿಸಿದ್ದಾರೆ. ಆದರೆ ಈ ಆದೇಶ ಹೊರ ಊರಿನಿಂದ ಬರುವ ಪ್ರಯಾಣಿಕನಿಗೆ ತಿಳಿಯುವುದು ಹೇಗೆ? ಕನಿಷ್ಠ ಸೂಚನ ಫಲಕವಾದರೂ ಅಳವಡಿಸಿದರೆ, ಮಾಹಿತಿ ನೀಡಿದಂತಾಗುತ್ತದೆ. ಆದರೆ ಇದಾವುದನ್ನು ಮಾಡದೆ, ವಾಹನಗಳಿಗೆ ಏಕಾಏಕಿ ದಂಡ ವಿಧಿಸುವುದು ಎಷ್ಟು ಸರಿ ಎಂದು ಪ್ರಶ್ನಿಸುತ್ತಾರೆ ಸಾರ್ವಜನಿಕರು. ಅನುದಾನ ನಿಗದಿ
ನಗರಸಭೆಯ ಸ್ವಂತ ನಿಧಿಯಿಂದ 10 ಲಕ್ಷ ರೂ. ಬಳಸಿಕೊಂಡು ಪುತ್ತೂರು ಪೇಟೆಯ ಪ್ರಮುಖ ಕಡೆಗಳಲ್ಲಿ ಸೂಚನ ಫಲಕ, ಡಿವೈಡರ್ ಗಳಿಗೆ ಬಣ್ಣ ಬಳಿಯುವುದು ಮೊದಲಾದ ಯೋಜನೆ ಹಮ್ಮಿಕೊಳ್ಳಲಾಗಿದೆ. ಆದರೆ ಮಳೆ ಕಡಿಮೆ ಆಗದೆ, ಈ ಯೋಜನೆಯನ್ನು ಜಾರಿಗೆ ತರಲು ಸಾಧ್ಯವಿಲ್ಲ ಎನ್ನಲಾಗಿದೆ. ಈಗಿನ ಸ್ಥಿತಿಯಲ್ಲಿ ಜನಸಾಮಾನ್ಯರು ಬಿಡಿ, ಪೊಲೀಸರೇ ಕಾನೂನು ಉಲ್ಲಂಘಿಸುವ ಸ್ಥಿತಿ ನಿರ್ಮಾಣವಾಗಿದೆ.
Related Articles
ಕೋರ್ಟ್, ತಾಲೂಕು ಕಚೇರಿ, ಮಿನಿ ವಿಧಾನಸೌಧ, ಆಸ್ಪತ್ರೆ, ಕಿಲ್ಲೆ ಮೈದಾನ ಸಹಿತ ಹಲವು ಕಚೇರಿಗಳ ಕೇಂದ್ರ ಕಿಲ್ಲೆ ಮೈದಾನ. ತುರ್ತು ಸಂದರ್ಭ ಪೊಲೀಸ್ ಜೀಪನ್ನು ಪಾರ್ಕ್ ಮಾಡುವಷ್ಟು ವ್ಯವಧಾನ ಸಿಗದ ಕಾರಣ, ರಸ್ತೆಯಲ್ಲೇ ಪಾರ್ಕ್ ಮಾಡಿ ತೆರಳಲಾಗಿದೆ. ಪಾರ್ಕಿಂಗ್‌ಗೆ ಜಾಗವೇ ಇಲ್ಲದೆ ಪೊಲೀಸರು ಏನೂ ಮಾಡಲು ಸಾಧ್ಯವಿಲ್ಲದಂತಾಗಿತ್ತು.
Advertisement
ಪಾರ್ಕಿಂಗ್ ಗೆ ಜಾಗವಿಲ್ಲಕಲ್ಲಾರೆಯಲ್ಲಿ ಪಾರ್ಕಿಂಗ್ ಗೆ ಒಂದಷ್ಟು ಜಾಗ ಮೀಸಲಿಟ್ಟಿದ್ದು ಬಿಟ್ಟರೆ, ಬೇರೆಲ್ಲೂ ವಾಹನ ಪಾರ್ಕ್ ಮಾಡುವಂತಿಲ್ಲ. ಜಿಲ್ಲೆಯ 2ನೇ ಅತಿದೊಡ್ಡ ವಾಣಿಜ್ಯ ಕೇಂದ್ರ ಪುತ್ತೂರಿಗೆ ಆಗಮಿಸುವ ಅತಿದೊಡ್ಡ ಸಂಖ್ಯೆಯ ವರ್ತಕರು, ಕೃಷಿಕರು, ಜನಸಾಮಾನ್ಯರು ತಮ್ಮ ವಾಹನವನ್ನು ಪಾರ್ಕ್ ಮಾಡುವುದೆಲ್ಲಿ? ಪ್ರತಿ ವಾಣಿಜ್ಯ ಮಳಿಗೆಯಲ್ಲೂ ಪಾರ್ಕಿಂಗ್‌ಗೆ ಜಾಗ ಗೊತ್ತು ಪಡಿಸಬೇಕಿತ್ತು. ಆದರೆ ಇದನ್ನು ಪಾಲಿಸದೇ ಇರುವುದರಿಂದ ರಸ್ತೆ ಬದಿಯಲ್ಲೇ ವಾಹನ ಪಾರ್ಕ್ ಮಾಡುವಂತಾಗಿದೆ. ಇದಕ್ಕೆ ಕಾನೂನು ಜಾರಿ ಮಾಡುವ ಜತೆಗೆ, ಪಾರ್ಕಿಂಗ್ ಗೂ ಜಾಗ ಗೊತ್ತು ಪಡಿಸುವ ಕೆಲಸ ಮಾಡಬೇಕಿದೆ. ಅನುಕೂಲ ಕಲ್ಪಿಸಿ
ಪೊಲೀಸರು ದಂಡ ವಿಧಿಸುವ ಮುನ್ನ ವಾಹನ ಸವಾರರಿಗೆ ಸಾಕಷ್ಟು ಅನುಕೂಲ ಕಲ್ಪಿಸಲಿ. ದಂಡ ಕೊನೆಯ ಅಸ್ತ್ರವಾಗಲಿ. ನಾಗರಿಕರ ಜತೆ ಸ್ಥಳೀಯಾಡಳಿತ ಸಭೆ ನಡೆಸಿ, ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು.
– ತುಳಸಿದಾಸ್ ಪಿಲಿಂಜ, ಮಾಜಿ ಸೈನಿಕ — ಗಣೇಶ್ ಎನ್. ಕಲ್ಲರ್ಪೆ