Advertisement

ಲಾಕ್ ಡೌನ್: ಜನರು ಹೀಗ್ಯಾಕೆ ವರ್ತಿಸ್ತಾರೆ? ಆರೋಗ್ಯ ಅಧಿಕಾರಿಗಳು, ಪೊಲೀಸರ ಮೇಲೆ ಹಲ್ಲೆ

09:09 AM Apr 03, 2020 | Nagendra Trasi |

ನವದೆಹಲಿ:ಮಾರಣಾಂತಿಕ ಕೋವಿಡ್ 19 ವೈರಸ್ ಭಾರತದಲ್ಲಿ ವೇಗವಾಗಿ ಹರಡುತ್ತಿದ್ದು, 1900ಕ್ಕೂ ಅಧಿಕ ಮಂದಿ ಸೋಂಕು ಪೀಡಿತರಾಗಿದ್ದು, ಸಾವಿನ ಸಂಖ್ಯೆ 50ಕ್ಕೆ ಏರಿಕೆಯಾಗಿದೆ. ಏತನ್ಮಧ್ಯೆ ಕೋವಿಡ್ 19 ವೈರಸ್ ಗೆ ಸಂಬಂಧಿಸಿದಂತೆ ಮಾಹಿತಿ ಕಲೆ ಹಾಕುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿ, ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿರುವ ಘಟನೆ ದೇಶದ ವಿವಿಧ ರಾಜ್ಯಗಳಲ್ಲಿ ನಡೆದಿದೆ.

Advertisement

ಪಂಜಾಬ್:
ದೇಶಾದ್ಯಂತ ಲಾಕ್ ಡೌನ್ ಹಿನ್ನೆಲೆಯಲ್ಲಿ ಪಂಜಾಬ್ ನ ನೂರ್ ಪುರ್ ಹಕೀಮಾ ಗ್ರಾಮದಲ್ಲಿ ಜನರು ಪೊಲೀಸರ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಶಟ್ ಡೌನ್ ಮಾಡಿರುವುದು ಕೋವಿಡ್ 19 ಸೋಂಕು ಹರಡದಂತೆ ತಡೆಗಟ್ಟಲು, ಆದರೆ ಜನರು ನಿರ್ಲಕ್ಷ್ಯದಿಂದ ಓಡಾಡುತ್ತಿದ್ದು ಈ ಸಂದರ್ಭದಲ್ಲಿ ತಡೆಯಲು ಮುಂದಾದ ಪೊಲೀಸ್ ಅಧಿಕಾರಿ ಮೇಲೆ ಜನರು ಹಲ್ಲೆ ನಡೆಸಿದ್ದರು. ಘಟನೆಗೆ ಸಂಬಂಧಿಸಿದಂತೆ 27 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮಹಿಳೆ ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿ ತಿಳಿಸಿದೆ.

ಉತ್ತರಪ್ರದೇಶ:
ಉತ್ತರಪ್ರದೇಶದ ಮೀರತ್ ಜಿಲ್ಲೆಯ ನೌಚಾಂದಿ ಪ್ರದೇಶದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳ ಮೇಳೆ ಹಲ್ಲೆ ನಡೆಸಿದ ಘಟನೆ ಬೆನ್ನಲ್ಲೇ ಗುರುವಾರ ಕಾನ್ ಖೇರ್ ಖೇರಾದ ದಾಯೀಂಪುರ್ ಗ್ರಾಮದಲ್ಲಿ ತಂಡವೊಂದು ಅಧಿಕಾರಿಗಳ ಮೇಲೆ ದಾಳಿ ನಡೆಸಿದ ಘಟನೆ ನಡೆದಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಶಂಕಿತ ಕೋವಿಡ್ ರೋಗಿಗಳು ಇದ್ದಾರೆಯೇ ಎಂಬುದನ್ನು ಪರಿಶೀಲಿಸಲು ಮನೆ, ಮನೆಗೆ ಭೇಟಿ ನೀಡಿ ಅಂಕಿ ಅಂಶ ಕಲೆ ಹಾಕುತ್ತಿದ್ದರು. ಈ ವೇಳೆ ಜನರು ಹಲ್ಲೆ ನಡೆಸಿದ್ದರು. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ನಾಲ್ವರನ್ನು ಬಂಧಿಸಿದ್ದಾರೆ.

ಬಿಹಾರ:
ಬಿಹಾರದ ಹಝ್ರತ್ ಗಂಜ್ ನ ಮುಂಗೇರ್ ಕಾಸೀಂ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯ ಶಂಕಿತ ಕೋವಿಡ್ 19 ಕುಟುಂಬದ ಸದಸ್ಯರನ್ನು ಕರೆತರಲು ವೈದ್ಯಾಧಿಕಾರಿಗಳ ತಂಡ ಭೇಟಿ ನೀಡಿದ ವೇಳೆ ಕೆಲವು ಸಮಾಜಘಾತುಕ ವ್ಯಕ್ತಿಗಳು ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ಈ ಕುಟುಂಬದ ವ್ಯಕ್ತಿಯೊಬ್ಬರು ಕೋವಿಡ್ 19 ವೈರಸ್ ನಿಂದ ಸಾವನ್ನಪ್ಪಿದ್ದು, ಇತರ ಸದಸ್ಯರನ್ನು ಕ್ವಾರಂಟೈನ್ ನಲ್ಲಿ ಇಡುವ ಉದ್ದೇಶದಿಂದ ಸ್ಥಳಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಹಲ್ಲೆ ನಡೆಸಿದ್ದು, ಪೊಲೀಸರು ಆಗಮಿಸಿದ ಬಳಿಕ ಸಮಾಜಘಾತುಕ ವ್ಯಕ್ತಿಗಳು ಪರಾರಿಯಾಗಿರುವುದಾಗಿ ವರದಿ ತಿಳಿಸಿದೆ. ಬಳಿಕ ಕುಟುಂಬದ ಆರು ಸದಸ್ಯರನ್ನು ಕ್ವಾರಂಟೈನ್ ನಲ್ಲಿ ಇಡಲು ವೈದ್ಯಾಧಿಕಾರಿಗಳ ತಂಡ ಕರೆದೊಯ್ದಿರುವುದಾಗಿ ವರದಿ ತಿಳಿಸಿದೆ.

Advertisement

ಮಧ್ಯಪ್ರದೇಶ:
ಇಂದೋರ್ ನ ಸೀಲಾವತ್ ಪುರದಲ್ಲಿ ವೈದ್ಯರ ತಂಡ ಹಾಗೂ ಮುನ್ಸಿಪಲ್ ಕಾರ್ಪೋರೇಷನ್ ಸಿಬ್ಬಂದಿಗಳ ಮೇಲೆ ಕಲ್ಲುತೂರಾಟ ನಡೆಸಿರುವ ಘಟನೆ ವರದಿಯಾಗಿದೆ. ಈ ಘಟನೆಯಲ್ಲಿ ಯಾರು ಶಾಮೀಲಾಗಿದ್ದಾರೋ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರೂಪೇಶ್ ವ್ಯಾಸ್ ತಿಳಿಸಿದ್ದಾರೆ.

ಪಶ್ಚಿಮಬಂಗಾಳ:
ಕೋಲ್ಕತಾದಲ್ಲಿ ಕೋವಿಡ್ 19 ರೋಗಿಯೊಬ್ಬ ಸಾವನ್ನಪ್ಪಿದ್ದು, ಆತನ ಅಂತ್ಯಸಂಸ್ಕಾರದ ಮೆರವಣಿಗೆ ನಡೆಸುವ ಉದ್ದೇಶದಿಂದ ನೂರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಆದರೆ ಪೊಲೀಸರು ಅಂತ್ಯಸಂಸ್ಕಾರ ನಡೆಸಲು ಅವಕಾಶ ನೀಡಲಿಲ್ಲ. ಕೋವಿಡ್ 19 ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಶವವನ್ನು ಸುಡುವುದರಿಂದ ಸುತ್ತಮುತ್ತಲಿನ ಪ್ರದೇಶದ ಜನರಿಗೂ ಹರಡುತ್ತದೆ ಎಂದು ಮನವರಿಕೆ ಮಾಡಿದ್ದರು. ಆದರೆ ಇದರಿಂದ ಆಕ್ರೋಶಗೊಂಡ ಜನರು ಪೊಲೀಸರ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿರುವುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next