Advertisement

ಕಳವಿಗೆ ಪೊಲೀಸರಿಂದಲೇ ಕುಮ್ಮಕ್ಕು!

12:14 PM Apr 11, 2018 | |

ಬೆಂಗಳೂರು: ಪೊಲೀಸರೇ ಕಳ್ಳನೊಂದಿಗೆ ಸೇರಿಕೊಂಡು ಮನೆಗಳವು ಮಾಡಿಸಿರುವ ಘಟನೆ ನಗರದಲ್ಲಿ ನಡೆದಿದೆ. ಆದರೆ, ಪೊಲೀಸ್‌ ಪೇದೆಗಳ ಮಾತು ಕೇಳಿ ಮನೆಗಳ್ಳತನ ಮಾಡುತ್ತಿದ್ದ ಆರೋಪಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

Advertisement

ತಮಿಳುನಾಡು ಮೂಲದ ಅನ್ನಪೂರ್ಣೇಶ್ವರಿ ನಗರದ ನಿವಾಸಿ ಆರ್ಮುಗಂ (31) ಬಂಧಿತ. ಈತನ ಕೃತ್ಯಕ್ಕೆ ಸಹಕಾರ ನೀಡಿ ಪಾಲು ಪಡೆಯುತ್ತಿದ್ದ ಅನ್ನಪೂಣೇಶ್ವರಿನಗರ ಠಾಣೆ ಪೇದೆಗಳಾದ ಮಧು (22), ತಿಪ್ಪೇಸ್ವಾಮಿ(45) ಪರಾರಿಯಾಗಿದ್ದು, ಹುಡುಕಾಟ ನಡೆಯುತ್ತಿದೆ. ಆರೋಪಿ ಆರ್ಮುಗಂ ವಿರುದ್ಧ ರಾಜ್ಯದ ವಿವಿಧ ಠಾಣೆಗಳಲ್ಲಿ 50ಕ್ಕೂ ಅಧಿಕ ಮನೆಗಳ್ಳತನ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

2016ರಲ್ಲಿ ಅನ್ನಪೂರ್ಣೇಶ್ವರಿ ನಗರದಲ್ಲಿ ನಡೆದ ಮನೆಗಳ್ಳತನ ಪ್ರಕರಣದಲ್ಲಿ ಆರ್ಮುಗಂ ಜೈಲು ಸೇರಿದ್ದ. ಆ ವೇಳೆ ಪೇದೆಗಳಾದ ಮಧು ಮತ್ತು ತಿಪ್ಪೇಸ್ವಾಮಿಗೆ ಪರಿಚಯವಾಗಿದೆ. ಈತನಿಗೆ ಕಳ್ಳತನಕ್ಕೆ ಪ್ರೋತ್ಸಾಹಿಸಿದರೆ ಲಕ್ಷಾಂತರ ಹಣಗಳಿಸಬಹುದು ಎಂದು ನಿರ್ಧರಿಸಿದ ಪೇದೆಗಳು ಈತನ ಕೃತ್ಯಕ್ಕೆ ಸಹಕಾರ ನೀಡುತ್ತಿದ್ದರು.

ಅದರಂತೆ ಆರ್ಮುಗಂ ಜಾಮೀನು ಪಡೆದು ಹೊರಬರುತ್ತಿದ್ದಂತೆ ಆತನನ್ನು ಸಂಪರ್ಕಿಸಿದ ಪೇದೆಗಳು, ಕಳ್ಳತನ ಮಾಡಿ ಗಳಿಸಿದ ಚಿನ್ನಾಭರಣ, ಹಣದಲ್ಲಿ ಅರ್ಧದಷ್ಟು ನಮಗೆ ನೀಡಿದರೆ, ಬಂಧಿಸುವುದಿಲ್ಲ, ಕೇಸ್‌ ದಾಖಲಿಸುವುದಿಲ್ಲ ಎಂದು ಹೇಳಿದ್ದರು.

ಹೀಗಾಗಿ ಆ ಪೇದೆಗಳು ಸೂಚಿಸಿದ ಕೆಲ ಮನೆಗಳು ಸೇರಿದಂತೆ ಅನ್ನಪೂರ್ಣೇಶ್ವರಿನಗರ ಠಾಣೆ ವ್ಯಾಪ್ತಿಯಲ್ಲಿ ಇತರೆ ಮನೆಗಳಲ್ಲಿ ಕಳ್ಳತನ ಮಾಡಿ ಆರ್ಮಗಂ ಪಾಲು ಕೊಡುತ್ತಿದ್ದ. ಪೇದೆಗಳು ಅರ್ಮಗಂಗೆ ಅನ್ನಪೂರ್ಣೇಶ್ವರಿ ನಗರದಲ್ಲೇ ಬಾಡಿಗೆ ಮನೆ ಮಾಡಿಕೊಟ್ಟಿದ್ದರು.

Advertisement

ಪೊಲೀಸರ ಸಹಕಾರ: ಮಾ.26ರಂದು ಆರ್ಮುಗಂ ಮೈಕೋಲೇಔಟ್‌ನಲ್ಲಿ ಬೀಗ ಹಾಕಿದ ಮನೆಯೊಂದರಲ್ಲಿ ಕಳ್ಳತನ ನಡೆಸಿ ತಡರಾತ್ರಿ 1ರ ಸುಮಾರಿಗೆ ಬೈಕ್‌ನಲ್ಲಿ ತೆರಳುತ್ತಿದ್ದ. ಆ ವೇಳೆ ಗಸ್ತಿನಲ್ಲಿದ್ದ ಮೈಕೋಲೇಔಟ್‌ ಠಾಣೆ ಪೇದೆಗಳು ಸಂಶಯದ ಮೇರೆಗೆ ಆರೋಪಿಯನ್ನು ನಿಲ್ಲಿಸಿ, ಪರಿಶೀಲಿಸಿದಾಗ ಬ್ಯಾಗ್‌ನಲ್ಲಿ ಬೆಳ್ಳಿಯ ವಸ್ತು, ಸ್ಟೀಲ್‌ ಪಾತ್ರೆಗಳು, ಚಿನ್ನಾಭರಣ ಪತ್ತೆಯಾಗಿತ್ತು. ಠಾಣೆಗೆ ಕರೆತಂದು ತೀವ್ರ ವಿಚಾರಣೆ ನಡೆಸಿದಾಗ ಪೊಲೀಸ್‌ ಪೇದೆ ಮಧು ಮತ್ತು ತಿಪ್ಪೇಸ್ವಾಮಿ ಬಗ್ಗೆ ಹೇಳಿಕೆ ನೀಡಿದ್ದ.

Advertisement

Udayavani is now on Telegram. Click here to join our channel and stay updated with the latest news.

Next