Advertisement
ಗುರುವಾರ ಬೆಳಗ್ಗೆ ಉಜಿರೆಯಲ್ಲಿ ಸಭೆ ನಡೆಸಿ ಅನಂತರ ಮಂಗಳೂರಿಗೆ ಬೈಕ್‌ನಲ್ಲಿ ತೆರಳುವುದು ಎಂದು ಕಾರ್ಯ ಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೆ ಹೊರ ಜಿಲ್ಲೆಗಳಿಂದ ಬೈಕ್ ಬರುವುದನ್ನು ತಡೆದ ಪೊಲೀಸರು ಇಲ್ಲಿಯೂ ಬೈಕ್ ಮೂಲಕ ತೆರಳಲು ಬಿಡುವುದು ಸಂಶಯವಿದೆ. ಜತೆಗೆ ಸಭಾ ಕಾರ್ಯಕ್ರಮಕ್ಕೆ ಕೂಡ ಪೊಲೀಸರು ಅನುಮತಿ ನೀಡಿದ್ದಾರೆ ಎಂದು ಸಂಘಟಕರು ಹೇಳಿದ್ದರೂ ಅನುಮತಿ ನೀಡಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಬುಧವಾರ ವಿವಿಧೆಡೆ ನಾಕಾಬಂದಿ ನಡೆಸಲಾಗಿದೆ. ಗಡಿ ಜಿಲ್ಲೆಗಳಿಂದ ಬರುವ ವಾಹನಗಳ ತಪಾಸಣೆ ನಡೆಸಲಾಗಿದೆ. ರ್ಯಾಲಿ ತಡೆಯುವ ಸರಕಾರದ ಉದ್ದೇಶ ಈಡೇರುವುದಿಲ್ಲ. ಸರಕಾರದ ಬಣ್ಣ ಬಯಲಾಗುವ ಆತಂಕದಿಂದ ಸರಕಾರ ರ್ಯಾಲಿ ತಡೆಯುವ ತಂತ್ರ ಮಾಡುತ್ತಿದೆ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ರಂಜನ್ ಜಿ. ಗೌಡ, ತಾ| ಯುವಮೋರ್ಚಾ ಅಧ್ಯಕ್ಷ ಸಂಪತ್ ಬಿ. ಸುವರ್ಣ ಹೇಳಿದ್ದಾರೆ.
ಬಂಟ್ವಾಳದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಬಿ.ಸಿ.ರೋಡ್ ಬ್ರಹ್ಮಶ್ರೀ ನಾರಾಯಣ ಗುರು ಮುಖ್ಯ ವೃತ್ತದಲ್ಲಿ ಪುತ್ತೂರು, ಧರ್ಮಸ್ಥಳ ಕಡೆಯಿಂದ ಬರುವ ರಸ್ತೆಯಲ್ಲಿ ಸೆ. 6ರಂದೇ ಎಂಟು ಕೆಎಸ್‌ಆರ್‌ಟಿಸಿ ಬಸ್, ನಾಲ್ಕು ಕೆಎಸ್‌ಆರ್‌ಪಿ ಪೊಲೀಸ್ ಬಸ್‌ಗಳ ಸಹಿತ ಪೊಲೀಸರನ್ನು ಹೆದ್ದಾರಿ ಕಾವಲಿಗೆ ನೇಮಿಸಲಾಗಿದೆ. ರಸ್ತೆಯಲ್ಲಿ ಬ್ಯಾರಿಕೇಡ್‌ಗಳನ್ನು ಹಾಕುವ ಮೂಲಕ ಸಂಚಾರ ನಿಯಂತ್ರಣ ಕ್ರಮವನ್ನು ಬುಧವಾರ ಮುಂಜಾನೆಯಿಂದಲೇ ಆರಂಭಿಸಿದ್ದು ನಗರದಾದ್ಯಂತ ಅಲ್ಲಲ್ಲಿ ಪೊಲೀಸ್ ಪಹರೆ ಮಾಡಲಾಗಿದೆ.
Related Articles
ಮೆಲ್ಕಾರ್, ಕಲ್ಲಡ್ಕ, ಮಾಣಿ, ಫರಂಗಿಪೇಟೆ, ತುಂಬೆ ಜಂಕ್ಷನ್, ಬಿ.ಸಿ.ರೋಡ್ ಕೈಕಂಬ ಜಂಕ್ಷನ್‌ನಲ್ಲಿಯೂ ಪೊಲೀಸರನ್ನು ನಿಯೋಜಿಸಲಾಗಿದೆ.
Advertisement
ಪುತ್ತೂರು ವರದಿಪುತ್ತೂರು ನಗರ, ಗ್ರಾಮಾಂತರ ಹಾಗೂ ಸುಳ್ಯ ಮೂರು ವ್ಯಾಪ್ತಿಯಲ್ಲಿ ಪೊಲೀಸರು ಬಿಗಿ ಬಂದೋಬಸ್ತನ್ನು ಬುಧವಾರ ಸಂಜೆಯಿಂದಲೇ ಆರಂಭಿಸಿದ್ದಾರೆ. ಇದರಲ್ಲಿ ಪುತ್ತೂರಿಗೆ ಡಿವೈಎಸ್‌ಪಿ ಶ್ರೀನಿವಾಸ್ ಹಾಗೂ ಸುಳ್ಯಕ್ಕೆ ಡಿವೈಎಸ್‌ಪಿ ಚಂದ್ರಶೇಖರ್ ನೇತೃತ್ವ ವಹಿಸಿಕೊಂಡಿದ್ದಾರೆ. ಆಯಾಕಟ್ಟಿನ ಮಸೀದಿಗಳಿಗೆ ಹೆಚ್ಚಿನ ಭದ್ರತೆ ನೀಡುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಅದರಂತೆ ಮಸೀದಿಗಳಿಗೂ ಪೊಲೀಸ್ ನಿಯೋಜಿಸಲಾಗಿದೆ. ಪುತ್ತೂರು ನಗರ ವ್ಯಾಪ್ತಿಯಲ್ಲಿ ನಾಲ್ಕು ಚೆಕ್‌ಪೋಸ್ಟ್ ತೆರೆದಿದ್ದು, ಕಬಕ, ಕೆಮ್ಮಾಯಿ, ಪರ್ಲಡ್ಕ, ಮುಕ್ವೆಯಲ್ಲಿ ವಾಹನ ತಪಾಸಣೆ ನಡೆಸಲಾಗುತ್ತಿದೆ. ಬುಧವಾರ ಸಂಜೆಯಿಂದಲೇ ತಪಾಸಣೆ ಆರಂಭವಾಗಿದ್ದು, ಶುಕ್ರವಾರ ಬೆಳಗ್ಗಿನವರೆಗೂ ಸಾಗಲಿದೆ. ಪ್ರತಿ ಚೆಕ್‌ಪೋಸ್ಟ್‌ನಲ್ಲೂ ತಲಾ 15 ಪೊಲೀಸರನ್ನು ನಿಯೋಜಿಸಲಾಗಿದೆ. ಸಿಸಿ ಕ್ಯಾಮರಾ ಕೂಡ ಅಳವಡಿಸಲಾಗಿದೆ. ಅಗತ್ಯಕ್ಕಾಗಿ 5 ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ತರಿಸಿಕೊಳ್ಳಲಾಗಿದೆ. 8 ಎಸ್‌ಐ, 50 ಹೋಂ ಗಾರ್ಡ್ಸ್, 25 ಮಹಿಳಾ ಪೊಲೀಸ್, 100 ಹೆಚ್ಚುವರಿ ಪೊಲೀಸ್ ನಿಯೋಜಿಸಲಾಗಿದೆ. 4 ವಿಶೇಷ ಗಸ್ತು ವಾಹನ, 1 ವಜ್ರ, 2 ಕೆಎಸ್‌ಆರ್‌ಪಿ ತುಕಡಿ ಬಂದೋಬಸ್ತ್ನಲ್ಲಿ ಇರಲಿದೆ. ನೆಲ್ಯಾಡಿ, ಈಶ್ವರಮಂಗಲ, ಗುಂಡ್ಯ, ಕಲ್ಲೇರಿ ನಾಲ್ಕು ಕಡೆಗಳಲ್ಲಿ ಚೆಕ್‌ಪೋಸ್ಟ್ ತೆರೆಯಲಾಗಿದೆ. 200 ಹೆಚ್ಚುವರಿ ಪೊಲೀಸ್ 3 ಪೊಲೀಸ್ ನಿರೀಕ್ಷಕರು, 5 ಎಸ್‌ಐ ಕರ್ತವ್ಯಕ್ಕೆ ನಿಯೋಜಿತರಾಗಿದ್ದಾರೆ. 2 ಕೆಎಸ್‌ಆರ್‌ಪಿ ತುಕಡಿ ತರಿಸಿಕೊಳ್ಳಲಾಗಿದೆ. ಸುಳ್ಯ ವರದಿ
ಸುಳ್ಯ ವ್ಯಾಪ್ತಿಯಲ್ಲಿ 3 ಚೆಕ್‌ಪೋಸ್ಟ್ ಗಳನ್ನು ತೆರೆಯಲಾಗಿದೆ. ಕಲ್ಲುಗುಂಡಿ, ಕನಕಮಜಲು, ಜಾಲೂÕರಿನಲ್ಲಿ ವಾಹನ ತಪಾಸಣೆ ಸಾಗಲಿದೆ. ಡಿವೈಎಸ್ಪಿ ಚಂದ್ರಶೇಖರ್ ನೇತೃತ್ವದಲ್ಲಿ 2 ಪೊಲೀಸ್ ನಿರೀಕ್ಷಕರು, 3 ಎಸ್‌ಐ, 50 ಪೊಲೀಸರು ಬಂದೋಬಸ್ತ್ನ ಹೊಣೆ ಹೊತ್ತಿದ್ದಾರೆ. 2 ಕೆಎಸ್‌ಆರ್‌ಪಿ ತುಕಡಿ ಇದೆ. ಮದ್ಯ ನಿಷೇಧ
ಮುನ್ನೆಚ್ಚರಿಕೆ ಕ್ರಮವಾಗಿ ಬುಧವಾರ ರಾತ್ರಿ 12ರಿಂದ ಗುರುವಾರ ರಾತ್ರಿ 12ರವರೆಗೆ ಮದ್ಯ ಮಾರಾಟ ಮಾಡದಂತೆ ಸೂಚನೆ ನೀಡಲಾಗಿದೆ. ರ್ಯಾಲಿಯಲ್ಲಿ ಭಾಗಿ
ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಸುಮಾರು 2 ಸಾವಿರ ಮಂದಿ ರ್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಆದರೆ ಪುತ್ತೂರಿನಿಂದ ಬೈಕ್ ರ್ಯಾಲಿ ಹಮ್ಮಿಕೊಂಡಿಲ್ಲ. ಬದಲಾಗಿ ಸ್ವಂತ ವಾಹನ, ಬಸ್‌ಗಳಲ್ಲಿ ಮಂಗಳೂರಿಗೆ ತೆರಳುವ ಯೋಜನೆ ರೂಪಿಸಲಾಗಿದೆ. ಗುರುವಾರ ಬೆಳಗ್ಗೆ 10 ಗಂಟೆಗೆ ಜ್ಯೋತಿಗೆ ತೆರಳಿ, ರ್ಯಾಲಿಯಲ್ಲಿ ಸೇರಿಕೊಳ್ಳಲಾಗುವುದು ಎಂದು ಪುತ್ತೂರು ಮಂಡಲ ಬಿಜೆಪಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ತಿಳಿಸಿದ್ದಾರೆ. ಸಂಪಾಜೆಯಲ್ಲಿ ರಸ್ತೆತಡೆ
ಗುರುವಾರದ ಬಿಜೆಪಿ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿದ್ದ ಸುಮಾರು 25 ಬೈಕ್‌ಗಳನ್ನು ಸಂಪಾಜೆ ಬಳಿ ಕೊಡಗು ಪೊಲೀಸರು ತಡೆದಿದ್ದಾರೆ. ಇದರಿಂದ ಆಕ್ರೋಶಿತರಾದ ತಂಡದ ಸದಸ್ಯರು, ಸಂಪಾಜೆ ಗೇಟ್ ಬಳಿಯೇ ಸಾಂಕೇತಿಕ ಪ್ರತಿಭಟನೆ ನಡೆಸಿದ ಘಟನೆ ಬುಧವಾರ ಸಂಜೆ ಸಂಭವಿಸಿತು. ರ್ಯಾಲಿಯಲ್ಲಿ ಆಗಮಿಸುವವರಿಗೆ ಸುಳ್ಯದಲ್ಲಿ ತಂಗಲು ವ್ಯವಸ್ಥೆ ಮಾಡಿದ್ದು, ಇಲ್ಲಿಗೆ ತಂಡ ಬೈಕ್‌ಗಳಲ್ಲಿ ಬರುತ್ತಿತ್ತು ಎಂದು ಹೇಳಲಾಗಿದೆ. ಆದರೆ ಸಂಪಾಜೆ ಚೆಕ್‌ಪೋಸ್ಟ್‌ನಲ್ಲಿ ಕೊಡಗು ಪೊಲೀಸರು ತಂಡವನ್ನು ತಡೆದ ಕಾರಣ, ತಂಡ ಹಿಂದಿರುಗಿದೆ. ಸಂಪಾಜೆ, ಚೆಂಬು, ಕಲ್ಲುಗುಂಡಿ ಬಿಜೆಪಿ ಗ್ರಾಮ ಸಮಿತಿ ಸದಸ್ಯರು ಬೈಕ್‌ನಲ್ಲಿ ಸುಳ್ಯಕ್ಕೆ ಆಗಮಿಸುತ್ತಿದ್ದರು.