ಬೆಂಗಳೂರು: ರಾಜ್ಯದಲ್ಲಿ ಸದ್ಯ ಖಾಲಿ ಇರುವ 16,838 ಸಬ್ ಇನ್ಸ್‌ಪೆಕ್ಟರ್ ಹಾಗೂ ಪೊಲೀಸ್ ಪೇದೆಗಳ ಹುದ್ದೆಗಳನ್ನು 2022ರ ಮಾರ್ಚ್ ವೇಳೆಗೆ 4 ಹಂತಗಳಲ್ಲಿ ಭರ್ತಿ ಮಾಡಲಾಗುವುದು ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಬುಧವಾರ ತಿಳಿಸಿದೆ.
ಈ ಕುರಿತು ಸುಪ್ರೀಂಕೋರ್ಟ್ ನಿರ್ದೇಶನದಂತೆ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ್, ನ್ಯಾ.ಮೊಹಮ್ಮದ್ ನವಾಜ್ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
ಸರ್ಕಾರದ ಪರ ವಕೀಲ ಬಿ.ಪಿ.ಕೃಷ್ಣ ಪ್ರಮಾಣಪತ್ರ ಸಲ್ಲಿಸಿ, ಖಾಲಿ ಹುದ್ದೆ ಭರ್ತಿಗೆ ಸರ್ಕಾರ ಹಾಕಿಕೊಂಡಿರುವ ವೇಳಾಪಟ್ಟಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು. ಅದರಂತೆ, ಖಾಲಿ ಇರುವ 16,838 ಸಬ್ ಇನ್ಸ್‌ಪೆಕ್ಟರ್ ಹಾಗೂ ಪೊಲೀಸ್ ಪೇದೆ ಹುದ್ದೆ ಭರ್ತಿಗೆ 2022ರ ಮಾರ್ಚ್‌ವರೆಗೆ 4 ಹಂತಗಳಲ್ಲಿ ನೇಮಕಾತಿ ನಡೆಸಲು ತೀರ್ಮಾನಿಸಲಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಅಲ್ಲದೆ, ಮೊದಲ ಹಂತದಲ್ಲಿ 300 ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು. ನೇಮಕಾತಿ ಪ್ರಕ್ರಿಯೆ 2019ರ ಡಿಸೆಂಬರ್‌ಗೆ ಪೂರ್ಣಗೊಳಿಸಲಾಗುವುದು. ಪೊಲೀಸ್ ಹುದ್ದೆಗೆ ನೇಮಕಾತಿಗೊಂಡವರಿಗೆ ಸದ್ಯ ಏಕಕಾಲಕ್ಕೆ ಗರಿಷ್ಠ 6 ಸಾವಿರ ಮಂದಿಗೆ ತರಬೇತಿ ಕೊಡುವ ಸಾಮರ್ಥಯ ಹೊಂದಿದೆ. 16 ಸಾವಿರ ಹುದ್ದೆ ಭರ್ತಿಗೆ ಏಕಕಾಲಕ್ಕೆ ಕ್ರಮ ಕೈಗೊಂಡರೆ ತರಬೇತಿ, ನಿಯೋಜನೆಗೆ ಕಷ್ಟ ಎಂದು ನ್ಯಾಯಪೀಠಕ್ಕೆ ಮನವರಿಕೆ ಮಾಡಿಕೊಟ್ಟರು.
ಅದೇ ರೀತಿ ಪೊಲೀಸ್ ನೇಮಕಾತಿ ಪ್ರಕ್ರಿಯೆ ಅನುಸರಿಸಬೇಕು. ಹೀಗಾಗಿ ಎಲ್ಲಾ ಖಾಲಿ ಹುದ್ದೆಗಳನ್ನು 2019ರ ಡಿಸೆಂಬರ್ ವೇಳೆಗೆ ಭರ್ತಿ ಮಾಡಬೇಕು ಎಂದು ಈ ಹಿಂದೆ ನ್ಯಾಯಾಲಯ ನೀಡಿರುವ ಆದೇಶ ಮಾರ್ಪಾಡು ಮಾಡಬೇಕು ಎಂದು ಸರ್ಕಾರದ ಪರ ವಕೀಲರು ಕೋರಿದರು.
ಈ ಪ್ರಮಾಣಪತ್ರ ದಾಖಲಿಸಿಕೊಂಡ ನ್ಯಾಯಪೀಠ, ಸರ್ಕಾರ ಹಾಕಿಕೊಂಡಿರುವ ವೇಳಾಪಟ್ಟಿ ಪ್ರಕಾರ ಕಾಲ ಮಿತಿಯೊಳಗೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸ ಬೇಕು. ಜೊತೆಗೆ, ಮಂಜೂರಾದ ಪೊಲೀಸ್ ಹುದ್ದೆಗಳೆಷ್ಟು, ಪೊಲೀಸ್ ಹುದ್ದೆಯಿಂದ ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಎಷ್ಟು ಮಂದಿ ಬಡ್ತಿ ಹೊಂದಿದ್ದಾರೆ. ಈವರೆಗೆ ಆಗಿರುವ ನೇಮಕಾತಿ ಎಷ್ಟು ಇತ್ಯಾದಿಗಳ ಬಗ್ಗೆ ಸಮಗ್ರ ಮಾಹಿತಿ ನೀಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿ ವಿಚಾರಣೆ ಅ.9ಕ್ಕೆ ಮುಂದೂಡಿತು.