Advertisement

ಡ್ರಗ್ಸ್‌ ವಿರುದ್ಧ ಭರ್ಜರಿ ಸಮರ

11:37 AM Sep 08, 2020 | Suhan S |

ಸ್ಯಾಂಡಲ್‌ ವುಡ್‌ ಡ್ರಗ್ಸ್‌ ಪ್ರಕರಣದ ಬೆನ್ನಲ್ಲೇ ನಗರದಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿರುವ ಖಾಕಿ ಪಡೆ, ರಾಜಧಾನಿಯಲ್ಲಿ ಹಬ್ಬಿರುವ ಮಾದಕ ಜಾಲವನ್ನು ಅಲುಗಾಡಿಸಲು ಮುಂದಾಗಿದೆ. ಮಾದಕ ಜಾಲದಲ್ಲಿ ವಿದೇಶಿ ಪ್ರಜೆಗಳು, ಹೊರರಾಜ್ಯದವರು, ವಿದ್ಯಾರ್ಥಿಗಳು, ವಿವಿಧ ಪ್ರಕರಣಗಳ ಆರೋಪಿಗಳೂ ಸೇರಿದಂತೆ ಅನೇಕ ಮುಖಗಳು ಹೊರಬರುತ್ತಿವೆ. ನಾಲ್ಕು ದಿನದಲ್ಲಿ 6 ವಿದ್ಯಾರ್ಥಿಗಳು ಸೇರಿ 28 ಪೆಡ್ಲರ್‌ಗಳನ್ನು ವಶಕ್ಕೆ ಪಡೆದಿದ್ದಾರೆ. 2 ಕೋಟಿಗೂ ಅಧಿಕ ಮೌಲ್ಯದ ಎರಡೂವರೆ ಕ್ವಿಂಟಲ್‌ಗ‌ೂ ಹೆಚ್ಚು ಮಾದಕವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಇನ್ನೂ ತನಿಖೆ ಮುಂದುವರಿದಿದೆ.

Advertisement

ಬೆಂಗಳೂರು: ನಗರದ ಪೂರ್ವ ಮತ್ತು ಆಗ್ನೇಯವಿಭಾಗಗಳಲ್ಲಿ ನಾಲ್ಕು ದಿನಗಳಲ್ಲಿ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ 28 ಮಂದಿ ಡ್ರಗ್‌ ಪೆಡ್ಲರ್‌ ಗಳನ್ನು ಬಂಧಿಸಿ 2 ಕೋಟಿ ರೂ.ಗೂ ಅಧಿಕ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿ ದ್ದಾರೆ. ಬಂಧಿತರಲ್ಲಿ ಆರು ಕಾಲೇಜು ವಿದ್ಯಾರ್ಥಿಗಳು ಸೇರಿದ್ದಾರೆ.

ಪೂರ್ವ ವಿಭಾಗ ಪೊಲೀಸರು 11 ಮಂದಿಯನ್ನು ಬಂಧಿಸಿ, 90 ಲಕ್ಷ ರೂ. ಮೌಲ್ಯದ ಡ್ರಗ್ಸ್‌ ಜಪ್ತಿ ಮಾಡಿದ್ದಾರೆ. ಆಗ್ನೇಯ ವಿಭಾಗ ಪೊಲೀಸರು 17 ಮಂದಿಯನ್ನು ಬಂಧಿಸಿ 1.20 ಕೋಟಿ ರೂ. ಮೌಲ್ಯದ ಮಾದಕ ವಸ್ತು ಹಾಗೂ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಹೆಡ್‌ ಕಾನ್‌ಸ್ಟೇಬಲ್‌ ಪುತ್ರನ ಬಂಧನ: ವಿದ್ಯಾರ್ಥಿಗಳು ಹಾಗೂ ಯುವಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಕೆಎಸ್‌ಆರ್‌ಪಿ ಪೊಲೀಸ್‌ ಹೆಡ್‌ಕಾನ್ ಸ್ಟೇ ಬಲ್‌ ಸೇರಿ ಇಬ್ಬರನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ. ಎಲೆಕ್ಟ್ರಾನಿಕ್‌ ಸಿಟಿ ನಿವಾಸಿ ಹೆಡ್‌ ಕಾನ್‌ ಸ್ಟೇಬಲ್‌ ಪುತ್ರ ವಿಶ್ವಾಸ್‌ (26)  ಮತ್ತು ಕೋಲಾರ ಜಿಲ್ಲೆಯ ಅಂಬರೀಶ್‌(36) ಬಂಧಿತರು. ಅವರಿಂದ 49 ಲಕ್ಷ ರೂ. ಮೌಲ್ಯದ 165 ಕೆ.ಜಿ. ಗಾಂಜಾ ಜಪ್ತಿ ಮಾಡಲಾಗಿದೆ. ವಿಶ್ವಾಸ್‌ ವಿರುದ್ಧ ನಗರದ ಆರೇಳು ಠಾಣೆ ವ್ಯಾಪ್ತಿಯಲ್ಲಿ ಸುಲಿಗೆ, ದರೋಡೆ ಪ್ರಕರಣಗಳು ದಾಖಲಾಗಿವೆ.

ಕಬಾಬ್‌ ಅಂಗಡಿಯಲ್ಲಿ ಕೆಲಸ ಮಾಡುವ ವಿಶ್ವಾಸ್‌ ನೆರೆ ರಾಜ್ಯದ ಗಾಂಜಾ ಪೆಡ್ಲರ್‌ ಗಳ ಜತೆ ಸೇರಿಕೊಂಡು ರಾತ್ರಿ ವೇಳೆಯಲ್ಲಿ ಗಾಂಜಾ ತರಿಸುತ್ತಿದ್ದ. ನಿರ್ಜನ ಪ್ರದೇಶದಲ್ಲಿ ಅಂಬರೀಶ್‌ ತರುತ್ತಿದ್ದ ಗಾಂಜಾವನ್ನು ಮತ್ತೂಂದು ಕಾರಿಗೆ ತುಂಬಿಕೊಂಡು ದಕ್ಷಿಣ ಮತ್ತು ಆಗ್ನೇಯ ವಿಭಾಗದಲ್ಲಿ ಪೂರೈಕೆ ಮಾಡುತ್ತಿದ್ದ. ಇತ್ತೀಚೆಗೆ ಆಂಧ್ರಪ್ರದೇಶದಿಂದ ಬಂದ ಗಾಂಜಾವನ್ನು ಹುಸ್ಕೂರು ರಸ್ತೆಯ ನಿರ್ಜನ ಪ್ರದೇಶದಲ್ಲಿ ಕಾರಿಗೆ ಲೋಡ್‌ ಮಾಡುವಾಗ ಇಬ್ಬರು ಸಿಕ್ಕಿಬಿದ್ದಿದ್ದಾರೆ ಎಂದು ಆಯುಕ್ತರು ತಿಳಿಸಿದರು.

Advertisement

ರೈತ ಸೇರಿ ಇಬ್ಬರ ಬಂಧನ; ಆನೇಕಲ್‌ ಮತ್ತು ತಮಿಳುನಾಡಿನಿಂದ ಗಾಂಜಾ ಖರೀದಿಸಿ ನಗರದಲ್ಲಿ ಮಾರಾಟ ಮಾಡುತ್ತಿದ್ದ ಆನೇಕಲ್‌ನ ಶ್ಯಾಮ್‌ ಕುಮಾರ್‌(24) ಮತ್ತು ವೆಂಕಟಸ್ವಾಮಿ (25) ಬಂಧಿತರು. ಅವರಿಂದ 1,37 ಲಕ್ಷ ರೂ. ಮೌಲ್ಯದ ನಾಲ್ಕೂವರೆ ಕೆ.ಜಿ. ಗಾಂಜಾ ವಶಕ್ಕೆ ಪಡೆಯಲಾಗಿದೆ. ವೃತ್ತಿಯಲ್ಲಿ ರೈತನಾಗಿರುವ ಶ್ಯಾಮ್‌ ಆನೇಕಲ್‌ನ ಸುತ್ತ-ಮುತ್ತ ಅರಣ್ಯಪ್ರದೇಶದಲ್ಲಿ ಬೆಳೆಯುತ್ತಿದ್ದ ಗಾಂಜಾವನ್ನು ಬಸ್‌ನಲ್ಲಿ ತಂದು ಮಾರುತ್ತಿದ್ದ. ಇನ್ನು ಗ್ಲಾಸ್‌ ಫಿಟ್ಟಿಂಗ್‌ ನೌಕರ ವೆಂಕಟಸ್ವಾಮಿ ಆಂಧ್ರದಿಂದ ಗಾಂಜಾ ತಂದು ಮಾರುತ್ತಿದ್ದ ಎಂದು ಪೊಲೀಸರು ಹೇಳಿದರು.

ಕೂಲಿ ಕಾರ್ಮಿಕರ ಬಂಧನ: ಕೋರಮಂಗಲದ ಪಾಸ್‌ ಪೋರ್ಟ್‌ ಕಚೇರಿ ಸಮೀಪದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಸಹೋದರರನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ. ದೇವರಬೀಸನಹಳ್ಳಿಯ ರಾಜು ಪ್ರಮಾಣಿಕ್‌(30) ಮತ್ತು ನಾರಾಯಣ ಪ್ರಮಾಣಿಕ್‌ (34) ಬಂಧಿತರು. ಪರಿಮಲ್‌ ಮಿಶ್ರಾ ಎಂಬಾತ ತಲೆ ಮರೆಸಿಕೊಂಡಿದ್ದಾನೆ. ಅವರಿಂದ 1,50 ಲಕ್ಷ ರೂ. ಮೌಲ್ಯದ ಐದು ಕೆ.ಜಿ. ಗಾಂಜಾ ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು.

ವಿದ್ಯಾರ್ಥಿ ಸೇರಿ ಇಬ್ಬರ ಬಂಧನ: ಮೋಜಿನ ಜೀವನಕ್ಕಾಗಿ ವಿದೇಶಗಳಿಂದ ಎಂಡಿಎಂಎ ಮತ್ತು ಕೋಕೇನ್‌ ತಂದು ಕಾಲೇಜು ವಿದ್ಯಾರ್ಥಿಗಳು ಮತ್ತು ಟೆಕ್ಕಿಗಳಿಗೆ ಮಾರಾಟ ಮಾಡುತ್ತಿದ್ದ ವಿದ್ಯಾರ್ಥಿ ಸೇರಿ ಇಬ್ಬರನ್ನು ಸುದ್ದಗುಂಟೆಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಕೇರಳ ಮೂಲದ ವಿದ್ಯಾರ್ಥಿ ಮೊಹಮ್ಮದ್‌ ಯಾಕೂಬ್‌ (24) ಮತ್ತು ಸ್ನೇಹಿತ ಹರಿಕಷ್ಣನ್‌ (23) ಬಂಧಿತರು. ಅವರಿಂದ 10 ಲಕ್ಷ ರೂ. ಮೌಲ್ಯದ 482 ಗ್ರಾಂ ಎಂಡಿಎಂಎ ಮಾತ್ರೆಗಳು ಮತ್ತು 4 ಗ್ರಾಂ ಕೊಕೇನ್‌ ಜಪ್ತಿ ಮಾಡಲಾಗಿದೆ.

ಯಾಕೂಬ್‌ ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿದ್ದಾನೆ. ಮೋಜಿನ ಜೀವನಕ್ಕಾಗಿ ಆರೋಪಿಗಳು ಮಾದಕ ವಸ್ತು ತಂದು ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದರು.

ಕಾಂಗೋ ಪ್ರಜೆ ಸೇರಿ ಮೂವರ ಸೆರೆ : ವಿದ್ಯಾಭ್ಯಾಸಕ್ಕೆಂದು ಕಾಂಗೋ ದೇಶದಿಂದ ನಗರಕ್ಕೆ ಬಂದು ನೈಜಿರಿಯಾ ಪ್ರಜೆಗಳ ಜತೆ ಸೇರಿಕೊಂಡು ಡ್ರಗ್ಸ್‌ ದಂಧೆ ನಡೆಸುತ್ತಿದ್ದ ಕಾಂಗೋ ಪ್ರಜೆ ಸೇರಿ ಮೂವರನ್ನು ಎಲೆಕ್ಟ್ರಾನಿಕ್‌ ಸಿಟಿ ಪೊಲೀಸರು ಬಂಧಿಸಿದ್ದಾರೆ. ಜಿನ್ಯೋನ್‌ ಎಂಗೋನ್‌ ಕೊಲೆಂಗೊ(30) ಬಂಧಿತ ಕಾಂಗೋ ಪ್ರಜೆ. ಪಶ್ಚಿಮ ಬಂಗಾಳದ ರೌಪ್‌ ಆಲಿ ಮಂಡಲ್‌ (35) ಮತ್ತು ಆಂಧ್ರ ಮೂಲದ ಶ್ರೀನಿವಾಸಲು(37) ಬಂಧಿತರು. ಆರು ವರ್ಷಗಳ ಹಿಂದೆ ವಿದ್ಯಾಭ್ಯಾಸ ವೀಸಾದಡಿ ಬೆಂಗಳೂರಿಗೆ ಬಂದಿದ್ದ ಕೊಲೆಂಗೊ, ಬಿಬಿಎ ವ್ಯಾಸಂಗ ಮಾಡುತ್ತಿದ್ದಾನೆ. ಕೊತ್ತ ನೂರು ಬಂಡೆ ಬಳಿ ವಾಸವಾಗಿದ್ದ. ನೈಜಿರಿಯಾ ಪ್ರಜೆಗಳ ಜತೆ ಸೇರಿಕೊಂಡು ಡಾರ್ಕ್‌ವೆಬ್‌ ಸೈಟ್‌ ಮೂಲಕ ಎಂಟಿಎಂಎ ತರಿಸಿ ಇತರೆ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ. ಆರೋಪಿಯ ವೀಸಾ ಅವಧಿ ಮುಗಿದಿದ್ದು, ನವೀಕರಣ ಮಾಡಿಕೊಂಡಿಲ್ಲ. ಈತನಿಂದ 20 ಸಾವಿರ ರೂ. ಮೌಲ್ಯದ 10 ಎಂಡಿಎಂಎ ವಶಕ್ಕೆ ಪಡೆಯಲಾಗಿದೆ. ಪಶ್ಚಿಮ ಬಂಗಾಳದಿಂದ ಉದ್ಯೋಗ ಅರಿಸಿ ಕುಟಂಬ ಸಮೇತ ನಗರದಲ್ಲಿ ಚಿಂದಿ ಆಯುವ ಕೆಲಸ ಮಾಡುತ್ತ ಜತೆಗೆ ತಮಿಳುನಾಡು ಮೂಲದ ಸಾಧುಗಳಿಂದ ಗಾಂಜಾ ತರಿಸಿ ಮಾರಾಟ ಮಾಡುತ್ತಿದ್ದ ರೌಪ್‌ ಆಲಿ ಮಂಡಲ್‌, ಚಿಂದಿ ಆಯುವ ಜಾಗದಲ್ಲೇ ಗ್ರಾಹಕರಿಗೆ ಗಾಂಜಾ ಪೂರೈಕೆ ಮಾಡುತ್ತಿದ್ದ ಈತನಿಂದ 60 ಸಾವಿರ ರೂ. ಮೌಲ್ಯದ ಎರಡು ಕೆ.ಜಿ. ಗಾಂಜಾ, 1 ಮೊಬೈಲ್‌ ಜಪ್ತಿ ಮಾಡಲಾಗಿದೆ. ವೆಲ್ಲೂರಿನಿಂದಗಾಂಜಾ ತಂದು ಮಾರಾಟ ಮಾಡುತ್ತಿದ್ದ ಶ್ರೀನಿವಾಸಲು ಅನ್ನು ಬಂಧಿಸಿ,ಆರು ಕೆ.ಜಿ.ಗಾಂಜಾ ವಶಕ್ಕೆ ಪಡೆಯಲಾಗಿದೆ

ಹೈಡ್ರೋ ಗಾಂಜಾ ಬೆಳೆಯುತ್ತಿದ್ದ ವಿದ್ಯಾರ್ಥಿಗಳು : ತಿಲಕನಗರ ಪೊಲೀಸರ ಕಾರ್ಯಾ ಚರಣೆ ಯಲ್ಲಿ ಮಾದಕ ವ್ಯಸನಿ ವಿದ್ಯಾರ್ಥಿಯೊಬ್ಬನನ್ನು ವಿಚಾರಣೆ ನಡೆಸಿದಾಗ ಅದೇ ಕಾಲೇಜಿನ ವಿದ್ಯಾರ್ಥಿಗಳೇ ಡ್ರಗ್‌ ಪೆಡ್ಲರ್‌ಗಳೆಂಬುದು ಗೊತ್ತಾಗಿತ್ತು. ಕೂಡಲೇ ಕಾರ್ಯಾಚರಣೆ ನಡೆಸಿದ

ಪೊಲೀಸರು ಜೆ.ಪಿ.ನಗರ ನಿವಾಸಿ ಬಿ.ಇ.ವಿದ್ಯಾರ್ಥಿ ಅತಿಥ್ಯ ವೋರಾ ಅಲಿಯಾಸ್‌ ಗುಜ್ಜು(23), ಜಯನಗರ ನಿವಾಸಿ ಬಿ.ಇ.ವಿದ್ಯಾರ್ಥಿ ಪ್ರಶಾಂತ್‌ (21), ಬಿ.ಕಾಂ ವಿದ್ಯಾರ್ಥಿ ಪುನೀತ್‌ (22), ಬಿಎಸ್‌ಕೆ ಲೇಔಟ್‌ ಬಿಸಿಎ ವಿದ್ಯಾರ್ಥಿ ನಚಿಕೇತ್‌(19) ಮತ್ತು ಬಿಎಂಎಸ್‌ ವಿದ್ಯಾರ್ಥಿ ನಾಗರಾಜ್‌ ರಾವ್‌(21) ಬಂಧಿಸಿ, ಅವರಿಂದ ನಾಲ್ಕು ಲಕ್ಷ ರೂ. ಮೌಲ್ಯದ 1 ಕೆ.ಜಿ. 500 ಗ್ರಾಂಗಾಂಜಾ, 25 ಗ್ರಾಂ ಹೈಡ್ರೋ ಗಾಂಜಾ, ಗಾಂಜಾ ಗಿಡಗಳು, ಐದು ಎಂಡಿಎಂಎ ಮಾತ್ರೆಗಳು, ಎಲ್‌ಎಸ್‌ಡಿ ಸ್ಟ್ರೀಪ್ಸ್‌ ಮತ್ತು ಎರಡು ವಾಹನಗಳು ಜಪ್ತಿ ಮಾಡಿದ್ದಾರೆ.

ಈ ಪೈಕಿ ಅತಿಥ್ಯ ವೋರಾ ಗುಜರಾತ್‌ ಮೂಲದವನಾಗಿದ್ದು, ನೆರೆ ರಾಜ್ಯದಿಂದ ಗಾಂಜಾ ಗಿಡಗಳನ್ನು ತರಿಸಿ, ಹೂವಿನ ಕುಂಡಗಳಲ್ಲಿ ಹಾಕಿ ಹೈಡ್ರೋ ಗಾಂಜಾ ಬೆಳೆಯುತ್ತಿದ್ದ, ಇನ್ನು ಇತರೆ ಆರೋಪಿ  ಗಳು ಡಾರ್ಕ್‌ನೆಟ್‌ ವೆಬ್‌ಸೈಟ್‌ ಮೂ ಲಕ ವಿದೇಶಗಳಿಂದ ಎಂಡಿಎಂಎ ಮತ್ತು ಎಲ್‌ಎಲ್‌ಡಿಗಳನ್ನು ತಂದು ತಮ್ಮ ಕಿರಿಯ ಮತ್ತು ಹಿರಿಯ ವಿದ್ಯಾರ್ಥಿಗಳಿಗೆ ಅಧಿಕ ಬೆಲೆಗೆ ಮಾರುತ್ತಿದ್ದರು ಎಂದು ಪೊಲೀಸರು ಹೇಳಿದರು.

ಏನಿದು ಹೈಡ್ರೋ ಗಾಂಜಾ? :  ಎಂಜಿನಿಯರಿಂಗ್‌ ವಿದ್ಯಾರ್ಥಿಯಾಗಿರುವ ಅತಿಥ್ಯ, ಹೂಕುಂಡದಲ್ಲಿ ಹೈಡ್ರೋ ಗಾಂಜಾ ಬೆಳೆಯುವುದನ್ನು ಯುಟ್ಯೂಬ್‌ನಲ್ಲಿ ನೋಡಿ ಕಲಿತುಕೊಂಡಿದ್ದಾನೆ. ಮನೆಯ ಆವರಣದಲ್ಲಿ ನಾಲ್ಕೈದು ಹೂ ಕುಂಡ ಸಂಗ್ರಹಿಸಿ ಗಾಂಜಾ ಬೆಳೆಯುತ್ತಿದ್ದ. ವಿದೇಶದಿಂದ ಖರೀದಿಸಿದ್ದ ಗಾಂಜಾ ಬೀಜಗಳನ್ನು ಹೂ ಕುಂಡಗಳಲ್ಲಿ ಹಾಕಿ ಅದಕ್ಕೆ ಸುತ್ತಲು ಪರದೆಯಲ್ಲಿ ಸುತ್ತಿದ್ದಾನೆ. ಅನಂತರ ಅದಕ್ಕೆ ಬೇಕಾದ ಸೂರ್ಯನ ಬೆಳಕಿನ ಬದಲಿಗೆ ಕೃತಕ ಎಲ್‌ ಇಡಿ ಲೈಟ್‌ ವ್ಯವಸ್ಥೆ ಮಾಡಿಕೊಂಡಿದ್ದ. ಮೂರು ತಿಂಗಳಲ್ಲಿ ಗಾಂಜಾ ಬೆಳೆದು ಪರಿಚಿತ ಗಿರಾಕಿಗಳಿಗೆ ಪೂರೈಕೆ ಮಾಡುತ್ತಿದ್ದ. ಈ ಮಾದರಿಯಲ್ಲಿ ಗಾಂಜಾಬೆಳೆಯಲು ಹೆಚ್ಚು ರಾಸಾಯನಿಕ ಗೊಬ್ಬರ ಅಗತ್ಯವಿದೆ. ಸುಮಾರು ಎರಡು ತಿಂಗಳಿಗೆ ಹೈಡ್ರೋ ಗಾಂಜಾ ಗಿಡ ನಾಲ್ಕೈದು ಅಡಿಗಳ ಎತ್ತರಕ್ಕೆ ಬೆಳೆಯುತ್ತದೆ. ದೇಶೀಯ ಗಾಂಜಾಗಿಂತ ಹೈಡ್ರೋ ಗಾಂಜಾ ಹೆಚ್ಚು ನಶೆ. ಮಾರುಕಟ್ಟೆಯಲ್ಲಿ ಪ್ರತಿ ಗ್ರಾಂಗೆ 2-3 ಸಾವಿರ ರೂ. ಇದೆ. ಅದನ್ನು ಎರಡು ತಿಂಗಳಲ್ಲೇ ಬೆಳೆದು ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next