ಚನ್ನಪಟ್ಟಣ: ತಾಲೂಕಿನ ಅಕ್ಕೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಮರಳು ಸಾಗಣೆ ರಾಜರೋಷವಾಗಿ ನಡೆಯುತ್ತಿದ್ದರೂ ತಾಲೂಕು ಆಡಳಿತ ಹಾಗೂ ಅಕ್ಕೂರು ಪೊಲೀಸರು ನಿಯಂತ್ರಣ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ.
ಅಕ್ಕೂರು ಪೊಲೀಸ್ ಠಾಣೆ ವ್ಯಾಪ್ತಿಯ ವಿವಿಧ ಭಾಗಗಳಲ್ಲಿ ನಿರಂತರವಾಗಿ ಅಕ್ರಮ ಮರಳು ಸಾಗಣೆ ಎಗ್ಗಿಲ್ಲದೆ ಸಾಗಿದೆ. ಎತ್ತಿನ ಗಾಡಿ, ಟ್ರ್ಯಾಕ್ಟರ್, ಲಾರಿ ಹಾಗೂ ಟಿಪ್ಪರ್‌ಗಳಲ್ಲಿ ಅಕ್ರಮ ಮರಳು ಸಾಗಣೆ ಮಾಡಲು ಸಮಯ ನಿಗದಿ ಮಾಡಿಕೊಂಡಿರುವ ಮರಳು ದಂಧೆಕೋರರು, ಕಿಂಚಿತ್ತೂ ಭಯವಿಲ್ಲದೆ ನೀರು ಕುಡಿದಷ್ಟೆ ಸುಲಭವಾಗಿ ಅಕ್ರಮ ಮರಳು ಸಾಗಣೆಯಲ್ಲಿ ನಿರತರರಾಗಿದ್ದಾರೆ.
ಸಾಗಣೆ ಮಾಡಲು ಸಮಯ ನಿಗದಿ: ರಾತ್ರಿ 10ರಿಂದ ರಾತ್ರಿ 12ರವರಗೆ ಲಾರಿ ಹಾಗೂ ಟಿಪ್ಪರ್‌ಗಳಲ್ಲಿ ಮರಳು ಸಾಗಣೆಕೆ ನಡೆಸಿದರೆ, ಮುಂಜಾನೆ 1ರಿಂದ ಮುಂಜಾನೆ 5ರವರೆಗೆ ಟ್ರ್ಯಾಕ್ಟರ್‌ಗಳಲ್ಲಿ ಮರಳು ಸಾಗಣೆ ನಡೆಯತ್ತದೆ. ಮುಂಜಾನೆ 5ರಿಂದ ಮುಂಜಾನೆ 9ರವರೆಗೆ ಎತ್ತಿನ ಗಾಡಿಗಳಲ್ಲಿ ಮರಳು ಸಾಗಣೆ ಮುಂದುವರಿಯುತ್ತದೆ.
ಪೊಲೀಸರಿಗೆ ದಂಧೆಕೋರರು ಬೆದರಿಕೆ: ಅಕ್ಕೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಶಿಂಷಾನದಿ ಹಾಗೂ ಕಣ್ವಾನದಿ ಸರಸಹದ್ದುಗಳಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಸಾಗಣೆಯನ್ನು ನಿಯಂತ್ರಣ ಮಾಡಲು ಪೊಲೀಸರು ಮರಳು ಜಾಡುಗಳನ್ನು ಬಗೆದು ಟ್ರ್ಯಾಕ್ಟರ್‌ಗಳು ಹಾಗೂ ಎತ್ತಿನ ಗಾಡಿಗಳು ತೆರಳದಂತೆ ನಿರ್ಬಂದ ಹಾಕಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೆಲ ತಿಂಗಳಿಂದ ಅಕ್ಕೂರು ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಮರಳು ಸಾಗಣೆ ತಡೆಯುವವರು ಯಾರು ಇಲ್ಲದಂತಾಗಿದೆ. ಠಾಣೆ ವ್ಯಾಪ್ತಿಯ ಇಗ್ಗಲೂರು ಶಿಂಷಾನದಿ ಸರಹದ್ದಿನಲ್ಲಿ ಟ್ರ್ಯಾಕ್ಟರ್ ಹಾಗೂ ಟಿಪ್ಪರ್‌ನಲ್ಲಿ ನಡೆಯುತ್ತಿದ್ದ ಮರಳು ಸಾಗಣೆ ತಡೆಯಲು ಹೋದ ಪೊಲೀಸ್ ಪೇದೆಯೊರ್ವರಿಗೆ ಮರಳು ದಂಧೆಕೋರರು ಬೆದರಿಕೆ ಹಾಕಿದ ಘಟನೆ ಕೂಡ ನಡೆದಿದೆ.
ಮರಳು ಸಾಗಣೆ ಅಪಘಾತಕ್ಕೆ ಕಾರಣ: ಮುಂಜಾನೆ ಈ ಭಾಗದಲ್ಲಿ ಕೆಲವು ಅಪಘಾತಗಳು ಸಂಭವಿಸಲು ಟ್ರ್ಯಾಕ್ಟರ್‌ನಲ್ಲಿ ಮರಳು ಸಾಗಣೆಯೇ ಕಾರಣ ಎಂದು ಪೊಲೀಸರ ಅಭಿಪ್ರಾಯವಾಗಿದೆ. ಮುಂಜಾನೆ ಸಮಯದಲ್ಲಿ ಅಕ್ರಮ ಮರಳು ಸಾಗಣೆ ನಡೆಸುವವರು ಪೊಲೀಸರ ಭಯದಿಂದ ಇಷ್ಟ ಬಂದ ರೀತಿಯಲ್ಲಿ ಮರಳು ಸಾಗಣೆ ನಡೆಸುವುದೇ ಅಪಘಾತಗಳು ಸಂಭವಿಸಲು ಕಾರಣವಾಗಿದೆ.
ಅಪ್ರಾಪ್ತರು ಹಾಗೂ ಯಾವುದೇ ರೀತಿಯ ಪರವಾನಗಿ ಹೊಂದದವರು ಟ್ರ್ಯಾಕ್ಟರ್ ಚಾಲನೆ ಮಾಡುವುದರಿಂದ ಇಂತಹ ಅವಘಡಗಳಿಗೆ ಕಾರಣವಾಗಿದ್ದು, ಭಯದ ಚಾಲನೆಯಲ್ಲಿ ಅತಿವೇಗವಾಗಿ ಹೋಗುವುದರಿಂದ ಇಂದೆ ಮುಂದೆ ಚಲಿಸುವ ವಾಹನಗಳ ಗಮನವೇ ಇಲ್ಲದೆ ಅಪಘಾತಗಳು ಸಂಭವಿಸುತ್ತಿವೆ. ಅಕ್ರಮ ಮರಳು ಸಾಗಣೆ ಅಬ್ಬರಿಸಲು ತಾಲೂಕು ಆಡಳಿತದ ಕೆಲ ಗ್ರಾಮಲೆಕ್ಕಿಗರ ಸಹಕಾರ ಒಂದಡೆಯಾದರೆ, ಪೊಲೀಸರೂ ಕೂಡ ಸಹಕಾರ ನೀಡಿರುವುದರಿಂದ ಅಕ್ರಮ ಮರಳು ಸಾಗಣೆಗೆ ಹಾಸಿಗೆ ಹಾಸಿಕೊಟ್ಟಂತಾ ಗಿದೆ ಎನ್ನುತ್ತಾರೆ ಗ್ರಾಮೀಣರು. ಇನ್ನಾದರೂ ಎಚ್ಚತ್ತು ಮರಳು ದಂಧೆಯನ್ನು ನಿಯಂತ್ರಿಸಬೇಕಿದೆ.