ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಂದು ಆಕ್ಸಿಜನ್ ತುಂಬಿದ್ದ ಟ್ಯಾಂಕರ್ ನ್ನು ಪೊಲೀಸ್ ಬೆಂಗಾವಲಿನಲ್ಲಿ ಸುರಕ್ಷಿತವಾಗಿ ಆಸ್ಪತ್ರೆಗೆ ತಲುಪಿಸಲಾಯಿತು.
ಸಿಂಘು ಗಡಿಯಿಂದ ದೆಹಲಿಗೆ ತಲುಪಬೇಕಿದ್ದ ಆಕ್ಸಿಜನ್ ಟ್ಯಾಂಕರ್ ಇಂದು ಮುಂಜಾನೆ ( ಏಪ್ರಿಲ್ 21 ) ಕುಂದ್ಲಿ ಗಡಿಯಲ್ಲಿ ಸಿಲುಕಿಕೊಂಡಿತ್ತು. ಈ ವಿಚಾರ ತಿಳಿದ ದೆಹಲಿ ಪೊಲೀಸರು ಸುರಕ್ಷಿತವಾಗಿ ರೊಹಿನಿಯಲ್ಲಿರುವ ಜೈಪುರ್ ಗೋಲ್ಡನ್ ಆಸ್ಪತ್ರೆಗೆ ತಲುಪಿಸಿದ್ದಾರೆ.
ದೆಹಲಿಯಲ್ಲಿ ಕೋವಿಡ್ ವೈರಸ್ ಸಂಖ್ಯೆ ವೇಗವಾಗಿ ಹರಡುತ್ತಿದೆ. ಇತ್ತ ಆಸ್ಪತ್ರೆಗಳಲ್ಲಿ ಬೆಡ್ ಹಾಗೂ ಆಕ್ಸಿಜನ್ ಅಭಾವ ಕೂಡ ಎದುರಾಗಿದೆ. ಕಳೆದ ಎರಡು ದಿನಗಳ ಹಿಂದೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಮ್ಮ ಆತಂಕ ಹೊರಹಾಕಿದ್ದರು. ಕೂಡಲೇ ಆಕ್ಸಿಜನ್ ಪೂರೈಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು.
ದೆಹಲಿಯಲ್ಲಿ ಕೆಲವೇ ಕೆಲವು ಯೂನಿಟ್‍ನಷ್ಟು ಆಕ್ಸಿಜನ್ ಸಂಗ್ರಹ ಉಳಿದುಕೊಂಡಿದೆ ಎಂದು ಸಿಎಂ ಕೇಜ್ರಿವಾಲ್ ಹೇಳಿಕೊಂಡಿದ್ದರು. ಅದೇ ರೀತಿ ಆಸ್ಪತ್ರೆಗಳಲ್ಲಿ ಬೆಡ್ ಸಹ ಕೊರತೆ ಉಂಟಾಗಿದ್ದು, ಶಾಲೆ ಹಾಗೂ ಕ್ರೀಡಾಂಗಣಗಳನ್ನು ಕೋವಿಡ್ ಆರೈಕೆ ಕೇಂದ್ರಗಳನ್ನಾಗಿ ಪರಿವರ್ತಿಸುವುದಾಗಿ ಹೇಳಿಕೊಂಡಿದ್ದಾರೆ.
ಇನ್ನು ದೆಹಲಿಯಲ್ಲಿ ಕಳೆದ 24 ಗಂಟೆಗಳಲ್ಲಿ 25 ಸಾವಿರಕ್ಕೂ ಹೆಚ್ಚು ಮಂದಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಈಗಾಗಲೇ ರಾಜ್ಯದಲ್ಲಿ ಒಂದು ವಾರಗಳ ಕಾಲ ರಾತ್ರಿ ಲಾಕ್ ಡೌನ್ ಘೋಷಿಸಿ ಅಲ್ಲಿಯ ಸರ್ಕಾರ ಆದೇಶ ಹೊರಡಿಸಿದೆ.