ಗುಂಡ್ಲುಪೇಟೆ (ಚಾಮರಾಜನಗರ): ಬಂಡೀಪುರ ಅಭಯಾರಣ್ಯದಲ್ಲಿ ಅರಣ್ಯ ಅಪರಾಧ ಪತ್ತೆಯ ನಂಬರ್ 1 ಆಗಿದ್ದ ರಾಣಾ ಶ್ವಾನ ಮಂಗಳವಾರ ಬೆಳಗ್ಗೆ ವಯೋ ಸಹಜ ಸಾವಿನಿಂದ ಮೃತಪಟ್ಟಿದೆ.
ಜರ್ಮನ್ ಶಫರ್ಡ್ ತಳಿಯ 9 ವರ್ಷ ವಯಸ್ಸಿನ ರಾಣಾ ಕಳೆದ ಒಂದು ವಾರದಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿತ್ತು. ಸೋಮವಾರ ಆರೋಗ್ಯ ಸಮಸ್ಯೆ ಹೆಚ್ಚಾದ್ದರಿಂದ ಗುಂಡ್ಲುಪೇಟೆ ಪಟ್ಟಣದ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದರು. ಸೋಮವಾರ ರಾತ್ರಿಯಿಂದ ವಾಂತಿ ಭೇದಿ ಆಗಿ ಬೆಳಗ್ಗೆ ಮೃತ ಪಟ್ಟಿದೆ ಎಂದು ತಿಳಿದು ಬಂದಿದೆ.
ಬಂಡೀಪುರ ಸಫಾರಿ ಕೌಂಟರ್ ಸಮೀಪ ರಾಣಾ ಪಾರ್ಥಿವ ಶರೀರ ಇರಿಸಲಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರ ಅಂತಿನ ದರ್ಶನದ ನಂತರ ಗೌರವ ಸಮರ್ಪಿಸಿ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ ಎಂದು ಅರಣ್ಯ ಇಲಾಖೆ ಮೂಲಗಳು ಮಾಹಿತಿ ನೀಡಿವೆ.
ಈ ಶ್ವಾನ ಮಧ್ಯಪ್ರದೇಶದ ಭೋಪಾಲ್‌ನಲ್ಲಿರುವ ಪೊಲೀಸ್ 23ನೇ ಬೆಟಾಲಿಯನ್‌ನಲ್ಲಿ 9 ತಿಂಗಳು ತರಬೇತಿ ಪಡೆದು, 2014ರಲ್ಲಿ ಅರಣ್ಯ ಅಪರಾಧ ಪತ್ತೆಗಾಗಿ ಬಂಡೀಪುರಕ್ಕೆ ನಿಯೋಜನೆಗೊಂಡಿತ್ತು. ಹುಲಿ ಕೊಂದವರು, ಮರ ಕಡಿದವರು, ಹುಲಿ ಸೆರೆ ಕಾರ್ಯಾಚರಣೆಯಲ್ಲೂ ರಾಣಾ ಪರಾಕ್ರಮ ತೋರಿದ್ದ. ತನ್ನನ ಸಾಹಸಗಳಿಂದಲೇ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿದ್ದ ಶ್ವಾನ ಇದೀಗ ಅಸುನೀಗಿದೆ. ಈ ಕಾರಣದಿಂದ ಬಂಡೀಪುರದಲ್ಲಿ ನೀರವ ಮೌನ ಆವರಿಸಿದೆ.
ಇದನ್ನೂ ಓದಿ : ಸ್ಫೋಟ ರಹಿತ ಕಾರ್ಯಾಚರಣೆ… ಝವಾಹಿರಿ ಹತ್ಯೆಗೈಯಲು CIA ಬಳಕೆ ಮಾಡಿದ ಶಸ್ತ್ರಾಸ್ತ್ರ ಯಾವುದು?