ಬೆಳಗಾವಿ: ಹಲವು ವರ್ಷಗಳಿಂದ ಜಿಲ್ಲೆಯಲ್ಲಿಯ ಅಪರಾಧ ಪ್ರಕರಣಗಳನ್ನು ಭೇದಿಸಿ ಪೊಲೀಸ್ ಇಲಾಖೆಗೆ ನೆರವಾಗಿದ್ದ ಶ್ವಾನ ರ್‍ಯಾಂಬೋ ಶನಿವಾರ ಮೃತಪಟ್ಟಿದ್ದು, ನಗರ ಪೊಲೀಸ್ ಆಯುಕ್ತರ ಕಚೇರಿಯಿಂದ ಸರ್ಕಾರಿ ಗೌರವದೊಂದಿಗೆ ಅಂತಿಮ ನಮನ ಸಲ್ಲಿಸಲಾಯಿತು.
ನಗರ ಪೊಲೀಸ್ ಆಯುಕ್ತರ ಕಚೇರಿಯ ಅಪರಾಧ ಪತ್ತೆ ವಿಭಾಗದಲ್ಲಿದ್ದ ಈ 11 ವರ್ಷ 9 ತಿಂಗಳ ವಯಸ್ಸಿನ ಶ್ವಾನ ರ್‍ಯಾಂಬೋ ಪಾರ್ಥಿವ ಶರೀರಕ್ಕೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗ ಡಿಸಿಪಿ ಡಾ. ವಿಕ್ರಮ ಆಮ್ಟೆ ಪುಷ್ಪ ನಮನ ಸಲ್ಲಿಸಿ ಗೌರವ ವಂದನೆ ಸಲ್ಲಿಸಿದರು. ಪೊಲೀಸ್ ಆಯುಕ್ತರ ಕಚೇರಿ ಆವರಣದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
ಶ್ವಾನ ರ್‍ಯಾಂಬೋ ಹಿನ್ನೆಲೆ: ಜರ್ಮನ್ ಶೆಫರ್ಡ್ ತಳಿಯ ರ್‍ಯಾಂಬೋ 2009ರ ಅಕ್ಟೋಬರ್ 2 ರಂದು ಜನಿಸಿತ್ತು. ಬೆಂಗಳೂರಿನ ಆಡುಗೋಡಿಯಲ್ಲಿರುವ ಕರ್ನಾಟಕ ರಾಜ್ಯ ಪೊಲೀಸ್ ಶ್ವಾನದಳ ತರಬೇತಿ ಕೇಂದ್ರದಲ್ಲಿ ತರಬೇತಿ ನೀಡಲಾಗಿತ್ತು. ರಾಜ್ಯದಲ್ಲಿ ಅತಿ ಹಿರಿಯ ಪೊಲೀಸ್ ಶ್ವಾನವಾಗಿದ್ದ ರ್‍ಯಾಂಬೋ ಬೆಳಗಾವಿಯಲ್ಲಿ 2010 ರಿಂದ 2011ರವರೆಗೆ ತರಬೇತಿ ಪೂರೈಸಿತ್ತು. ನಂತರ ಬೆಳಗಾವಿಯ ಶ್ವಾನ ದಳ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿತ್ತು.
ಬೆಳಗಾವಿ ನಗರಕ್ಕೆ ಪೊಲೀಸ್ ಆಯುಕ್ತರ ಕಚೇರಿ ಆರಂಭವಾದಾಗ ರ್‍ಯಾಂಬೋ ಎಸ್‌ಪಿ ಕಚೇರಿಯಿಂದ ವರ್ಗಗೊಂಡು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಸೇರಿಕೊಂಡಿತ್ತು. ಅನೇಕ ಅಪರಾಧ ಪ್ರಕರಣಗಳಲ್ಲಿ ಪ್ರಮುಖ ಸುಳಿವು ನೀಡುವಲ್ಲಿ ರ್‍ಯಾಂಬೋ ಸೇವೆ ಮಹತ್ವದ್ದಾಗಿದೆ ಎಂದು ಡಿಸಿಪಿ ಡಾ. ವಿಕ್ರಮ ಆಮ್ಟೆ ತಿಳಿಸಿದರು. ಎಂಟೇ ಗಂಟೆಯಲ್ಲಿ ಆರೋಪಿ ಸೆರೆಯಾಗಿದ್ದ: 2016-17, 2017-18ರ ಸಾಲಿನಲ್ಲಿ ನಡೆದ ವಲಯ ಮಟ್ಟದ ಪೊಲೀಸ್ ಕರ್ತವ್ಯ ಕೂಟದ ಅಪರಾಧ ವಿಭಾಗದಲ್ಲಿ ಎರಡನೇ ಸ್ಥಾನ ಪಡೆದಿತ್ತು. ರಾಜ್ಯ ಮಟ್ಟದ ಪೊಲೀಸ್ ಕರ್ತವ್ಯ ಕೂಟದಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿತ್ತು.
2015 ಆಗಸ್ಟ್ 16ರಂದು ಬೆಳಗಾವಿಯ ಕುವೆಂಪು ನಗರದ ತಾಯಿ ಹಾಗೂ ಇಬ್ಬರು ಮಕ್ಕಳ ಹತ್ಯೆ ಆರೋಪಿಯನ್ನು ರ್‍ಯಾಂಬೋ ಪತ್ತೆ ಹಚ್ಚಿತ್ತು. ರ್‍ಯಾಂಬೋ ನೀಡಿದ ಸುಳಿವಿನಿಂದಲೇ ಕೇವಲ ಎಂಟೇ ಗಂಟೆಯಲ್ಲಿ ಆರೋಪಿ ಬಂ ಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು ಎಂದು ಹೇಳಿದರು. ನಗರ ವ್ಯಾಪ್ತಿಯ ಮಾಳಮಾರುತಿ, ಎಪಿಎಂಸಿ, ಕ್ಯಾಂಪ್, ಟಿಳಕವಾಡಿ, ಮಾರೀಹಾಳ, ಉದ್ಯಮಬಾಗ ಹಾಗೂ ಕಾಕತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಅನೇಕ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳನ್ನು ಸುಳಿವು ನೀಡಿದ್ದ ರ್‍ಯಾಂಬೋ ತನಿಖಾ ಧಿಕಾರಿಗಳಿಗೆ ಸಹಾಯ ಮಾಡಿದೆ ಎಂದು ಡಿಸಿಪಿ ಡಾ. ವಿಕ್ರಮ ಆಮ್ಟೆ ತಿಳಿಸಿದರು.