Advertisement

ಪೊಲೀಸ್‌ ವೇಷದಲ್ಲಿ ಹಣ ವಸೂಲಿ; ಇಬ್ಬರ ಬಂಧನ

05:43 PM Oct 02, 2021 | Team Udayavani |

ಕೊಪ್ಪಳ: ಕೊಪ್ಪಳದ ಹೊರ ವಲಯದಲ್ಲಿ ಪೊಲೀಸ್‌ ವೇಷದಲ್ಲಿ ರಸ್ತೆಯಲ್ಲಿ ಸುತ್ತಾಡುವ ವಾಹನ ಸವಾರರನ್ನು ತಡೆದು ನಾವು ಪೊಲೀಸರು ದಾಖಲೆ ತೋರಿಸು, ಇಲ್ಲದಿದ್ದರೆ ದಂಡ ಕಟ್ಟು ಎಂದು ಒತ್ತಾಯಪೂರ್ವಕವಾಗಿ ಜನರಿಂದ ಹಣ ಕೀಳುತ್ತಿದ್ದ ಇಬ್ಬರನ್ನು ಕೊಪ್ಪಳ ಪೊಲೀಸರು ಪತ್ತೆ ಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಬಂಧಿತರನ್ನು ಗದಗ ಜಿಲ್ಲೆಯ ಸಂಜಯ ಕೊಪ್ಪದ ಹಾಗೂ ಸಂಜು ಚಲವಾದಿ ಎಂದು ಗುರುತಿಸಲಾಗಿದೆ. ಕೊಪ್ಪಳ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಭೀಮಪ್ಪ ಹುಗ್ಗಿ ಎಂಬಾತ ವ್ಯಕ್ತಿ ತನ್ನ ಸ್ನೇಹಿತರ ಜೊತೆಯಲ್ಲಿ ಮುನಿರಾಬಾದ್‌ ಡ್ಯಾಂ ನೋಡಲು ತೆರಳುತ್ತಿದ್ದ ವೇಳೆ ಕೊಪ್ಪಳ ಹೊರ ವಲಯದ ಆರ್‌ಟಿಒ ಕಚೇರಿ ಬಳಿ ಸಂಜಯ ಹಾಗೂ ಸಂಜು ಎಂಬಾತರು ವಾಹನ ತಡೆದು ನಿಮ್ಮ ವಾಹನಗಳ ದಾಖಲೆ ತೋರಿಸಿ ಎಂದು ಗದರಿಸಿದ್ದಾರೆ. ಇಲ್ಲದಿದ್ದರೆ ದಂಡ ಕಟ್ಟಿ ಎಂದಿದ್ದಾರೆ. ಅವರ ಬಳಿಯಿದ್ದ ಹಣ ಒತ್ತಾಯಪೂರ್ವಕವಾಗಿ ಕಿತ್ತುಕೊಂಡಿದ್ದಾರೆ. ಅಲ್ಲದೇ ಪೊಲೀಸ್‌ ಠಾಣೆಗೆ ಎಳೆದೊಯ್ಯುವ ಕುರಿತು ಬೆದರಿಕೆ ಹಾಕಿದ್ದಾರೆ. ಅಲ್ಲದೇ, ಅವರ ಬಳಿಯಿದ್ದ ಎಟಿಎಂ ಕಿತ್ತುಕೊಂಡು ಪಿನ್‌ ಪಡೆದು ಕೊಪ್ಪಳದಲ್ಲಿ ಎಟಿಎಂನಿಂದ ಹಣವನ್ನೂ ಡ್ರಾ ಮಾಡಿದ್ದಾರೆ. ಪರ್ಸ್‌ನಲ್ಲಿದ್ದ ಸಾವಿರ ರೂ. ಹಣ ಕಿತ್ತುಕೊಂಡಿದ್ದಾರೆ. ಇವರ ವರ್ತನೆಗೆ ಭೀಮಪ್ಪ ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದರು.

ಪ್ರಕರಣ ದಾಖಲಾದ ಬೆನ್ನಲ್ಲೇ ಎಚ್ಚೆತ್ತುಕೊಂಡ ಪೊಲೀಸ್‌ ಇಲಾಖೆ ಎಸ್‌ಪಿ ಟಿ. ಶ್ರೀಧರ್‌ ಹಾಗೂ ಕೊಪ್ಪಳ ಡಿಎಸ್ಪಿ ಮಾರ್ಗದರ್ಶನದಲ್ಲಿ ಸಿಪಿಐ ವಿಶ್ವನಾಥ ಹಿರೇಗೌಡರ, ಪಿಎಸ್‌ಐ ಲಕ್ಕಪ್ಪ ಅಗ್ನಿ ಸಿಬ್ಬಂದಿಗಳ ತಂಡ ರಚಿಸಿ ಆರೋಪಿಗಳ ಪತ್ತೆಗೆ ಜಾಲ ಬೀಸಿ ನಗರದ ಹೊರ ವಲಯದಲ್ಲಿ ಸುತ್ತಾಡುವ ಯುವಕರ ಮೇಲೆ ಕಣ್ಣಿಟ್ಟು ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದ ಸಂಜಯ ಹಾಗೂ ಸಂಜು ಎನ್ನುವ ಖದೀಮರನ್ನು ವಶಕ್ಕೆ ಪಡೆದು ಬಂಧಿತರಿಂದ ದ್ವಿಚಕ್ರ ವಾಹನ ವಶಕ್ಕೆ ಪಡೆಯಲಾಗಿದೆ. ತನಿಖೆ ಪ್ರಗತಿಯಲ್ಲಿದೆ. ಅಲ್ಲದೇ, ಇಬ್ಬರ ವಿರುದ್ದ ಗದಗ ನಗರ, ಗ್ರಾಮೀಣ, ಅಣ್ಣಿಗೇರಿ, ಹುಬ್ಬಳ್ಳಿ, ಕೇಶ್ವಾಪುರ ಪೊಲೀಸ್‌ ಠಾಣೆಯಲ್ಲೂ ಪ್ರಕರಣ ದಾಖಲಾಗಿದೆ. ಈ ಇಬ್ಬರು ವಸೂಲಿಗಾರರ ಪತ್ತೆ ಮಾಡುವಲ್ಲಿ ಯಶಸ್ವಿಯಾದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್‌ ಇಲಾಖೆ ಅಧಿ ಕಾರಿಗಳ ಕಾರ್ಯಕ್ಷಮತೆಗೆ ಮೆಚ್ಚುಗೆ ವ್ಯಕ್ತಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next