Advertisement

ಪೊಲೀಸ್‌ ಇಲಾಖೆ ಕಣ್ಗಾವಲು ವೈಫ‌ಲ್ಯ

07:29 AM Jun 28, 2019 | Suhan S |

ಬೆಂಗಳೂರು: ಐಸಿಸ್‌ ಸೇರಿದಂತೆ ಇನ್ನಿತರೆ ಉಗ್ರಗಾಮಿ ಸಂಘಟನೆಗಳ ಟಾರ್ಗೆಟ್ ಲಿಸ್ಟ್‌ ನಲ್ಲಿ ರಾಜಧಾನಿ ಬೆಂಗಳೂರು ಕೂಡ ಒಂದಾಗಿದೆ ಎಂದು ಕೇಂದ್ರಗುಪ್ತಚರ ವಿಭಾಗ ಸೇರಿದಂತೆ ತನಿಖಾ ಸಂಸ್ಥೆಗಳು ಹಲವು ಬಾರಿ ಎಚ್ಚರಿಕೆ ನೀಡಿದರೂ, ರಾಜ್ಯ ಪೊಲೀಸ್‌ ಇಲಾಖೆ ಮಾತ್ರ ಎಚ್ಚೆತ್ತುಕೊಳ್ಳದಿರುವುದು ಮತ್ತೂಮ್ಮೆ ಸಾಬೀತಾಗಿದೆ.

Advertisement

ಜಮಾತ್‌ ಉಲ್ ಮುಜಾಯಿದ್ದೀನ್‌ (ಜೆಎಂಬಿ) ಉಗ್ರ ಹಬೀಬುರ್‌ ರೆಹಮಾನ್‌ ಬಂಧನ ಪ್ರಕರಣ ಇದಕ್ಕೆ ಉದಾಹರಣೆ. ಹಲವು ವರ್ಷಗಳಿಂದ ರಾಜ್ಯದಲ್ಲಿಯೇ ಆಶ್ರಯ ಪಡೆದುಕೊಂಡಿದ್ದ ಶಂಕಿತ ಉಗ್ರ ಹಬೀಬುರ್‌, ವಾಸದ ಬಗ್ಗೆ ರಾಜ್ಯದ ಆಂತರಿಕ ಭದ್ರತಾ ವಿಭಾಗ (ಐಎಸ್‌ಡಿ), ರಾಜ್ಯ ಗುಪ್ತಚರ ದಳದ ಭಯೋತ್ಪಾದಕ ನಿಗ್ರಹ ಘಟಕ (ಎಟಿಎಸ್‌) ಗಳಿಗೆ ಮಾಹಿತಿ ಇಲ್ಲದಿರುವುದು ಎರಡೂ ಸಂಸ್ಥೆಗಳ ಕಾರ್ಯವೈಖರಿಯ ವೈಫ‌ಲ್ಯವನ್ನು ಎತ್ತಿ ತೋರಿಸಿದೆ.

ಉಗ್ರ ಚಟುವಟಿಕೆಗಳ ಮೇಲೆ ನಿಗಾವಹಿಸ ಲೆಂದೇ 2009ರಲ್ಲಿ ರಚನೆಯಾಗಿರುವ ರಾಜ್ಯ ಎಟಿಎಸ್‌ ಘಟಕ, ಇದುವರೆಗೂ ಭಯೋತ್ಪಾ ದನೆಗೆ ಸಂಬಂಧಿಸಿದ ಒಂದೇ ಒಂದು ಪ್ರಕರಣವನ್ನೂ ಭೇದಿಸಿಲ್ಲ ಅಥವಾ ಶಂಕಿತನನ್ನೂ ಬಂಧಿಸಿಲ್ಲ ಎಂಬುದು ಅಚ್ಚರಿಯ ಸಂಗತಿ.

ಐಎಸ್‌ಡಿಯಲ್ಲಿ ಕಾರ್ಯನಿರ್ವಹಿಸುವುದು ಎಂದರೆ ವರ್ಗಾವಣೆ ಶಿಕ್ಷೆ ಎಂಬ ಇಲಾಖೆಯೊಳಗಿನ ಮಾತುಗಳು, ಅಧಿಕಾರಿಗಳ ನಡುವಿನ ಸಮನ್ವಯ ಕೊರತೆಯೇ ರಾಜ್ಯದಲ್ಲಿ ಉಗ್ರ ಚಟುವಟಿಕೆಗಳ ಜಾಡು ಪತ್ತೆಹಚ್ಚುವಲ್ಲಿನ ವೈಫ‌ಲ್ಯಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

2016ರಲ್ಲಿ ರಾಷ್ಟ್ರೀಯ ತನಿಖಾ ದಳ ಹೈದರಾಬಾದ್‌ ಹಾಗೂ ಮಹಾರಾಷ್ಟ್ರ ಎಟಿಎಸ್‌ ಅಧಿಕಾರಿಗಳು ತುಮಕೂರು ಹಾಗೂ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆ ಕಾರ್ಯಾಚರಣೆ ನಡೆಸಿ ಆಲ್ಖೈದಾ, ಐಸಿಸ್‌ ಪರ ಅನುಕಂಪವುಳ್ಳ ಆರು ಮಂದಿ ಶಂಕಿತರನ್ನು ಬಂಧಿಸಿದಾಗಲೂ ಐಎಸ್‌ಡಿಗೆ ಮಾಹಿತಿ ಇರಲಿಲ್ಲ ಎಂದು ನಿವೃತ್ತ ಅಧಿಕಾರಿಯೊಬ್ಬರು ಹೇಳುತ್ತಾರೆ.

Advertisement

ಬಂಧನದ ಬಳಿಕವೂ ಜಾಗೃತವಾಗಲಿಲ್ಲ: 2018ರ ಆಗಸ್ಟ್‌ನಲ್ಲಿ ಜೆಎಂಬಿ ಉಗ್ರ ಕೌಸರ್‌ನನ್ನು ರಾಮನಗರದಲ್ಲಿ ಎನ್‌ಐಎ ಅಧಿಕಾರಿಗಳು ಬಂಧಿಸಿದ್ದರು. ಆತನ ಮತ್ತೂಬ್ಬ ಸಹಚರ ಆದಿಲ್ ಎಂಬಾತನನ್ನು ಕಂಟೋನ್ಮೆಂಟ್ ರೈಲು ನಿಲ್ದಾಣದಲ್ಲಿ ಬಂಧಿಸಿದ್ದರು. ಈ ಪ್ರಕರಣ ನಡೆದು ಹತ್ತು ತಿಂಗಳ ಬಳಿಕ ಜೆಎಂಬಿಯ ಮತ್ತೂಬ್ಬ ಉಗ್ರ ಹಬೀಬುರ್‌ ದೊಡ್ಡಬಳ್ಳಾಪುರದಲ್ಲಿ ಬಂಧಿತನಾಗಿದ್ದಾನೆ. ಆದರೆ, ಕೌಸರ್‌ ಬಂಧನದ ಬಳಿಕ ಐಎಸ್‌ಡಿ ಹಾಗೂ ಎಟಿಎಸ್‌ ಘಟಕಗಳು, ಈ ಪ್ರಕರಣದ ಬಗ್ಗೆ ತನಿಖೆ ಮುಂದುವರಿಸದಿರುವುದು ಗೊತ್ತಾಗುತ್ತದೆ ಎಂದು ಅಧಿಕಾರಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

 

● ಮಂಜುನಾಥ ಲಘುಮೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next