ತುಮಕೂರು: ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾದ ದಿನದಿಂದ ಮಂಗಳವಾರದವರೆಗೂ ತುಮಕೂರು ಹಾಗೂ ಸಿದ್ಧಗಂಗಾ ಮಠದಲ್ಲಿ ಅಚ್ಚುಕಟ್ಟಾಗಿ ಬಿಗಿ ಬಂದೋಬಸ್ತ್ ಕಲ್ಪಿಸುವಲ್ಲಿ ಪೊಲೀಸ್ ಇಲಾಖೆ ಯಶಸ್ವಿಯಾಗಿದೆ.
ಜ.21ರಂದು ಮಧ್ಯಾಹ್ನದಿಂದಲೇ ಶ್ರೀಗಳ ಆಶೀರ್ವಾದ ಪಡೆಯಲು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದರು. ಹೀಗಾಗಿ, ಎಡಿಜಿಪಿ ಕಮಲ್‌ಪಂಥ್, ಕೇಂದ್ರ ವಲಯ ಐಜಿಪಿ ದಯಾನಂದ್ ಖುದ್ದು ಸ್ಥಳದಲ್ಲಿ ಹಾಜರಿದ್ದು, ಬಂದೋಬಸ್ತ್ ಕುರಿತು ರೂಪುರೇಷೆ ಸಿದ್ಧಪಡಿಸಿದ್ದರು.
ಹತ್ತು ಮಂದಿ ಎಸ್ಪಿಗಳು, 3,500 ಮಂದಿ ಪೊಲೀಸರು, 30 ಕೆಎಸ್‌ಆರ್‌ಪಿ ತುಕಡಿ, 30 ಸಿಎಆರ್ ತುಕಡಿಗಳು ಬಂದೋಬಸ್ತ್ನ ಕಾರ್ಯ ನಿರ್ವಹಿಸಿದರು. ಮಠದ ತುಂಬೆಲ್ಲಾ ಪೊಲೀಸರ ದಂಡೇ ನೆರೆದಿತ್ತು. ಲಕ್ಷಾಂತರ ಭಕ್ತರಿಗೆ ಶ್ರೀಗಳ ದರ್ಶನಕ್ಕೆ ಅವಕಾಶ ಕಲ್ಪಿಸಿ, ಯಾವುದೇ ಗದ್ದಲಕ್ಕೆ ಅವಕಾಶ ನೀಡದಂತೆ ಕರ್ತವ್ಯ ನಿಭಾಯಿಸುವಲ್ಲಿ ಪೊಲೀಸರು ಯಶಸ್ವಿಯಾದರು.
ಶ್ರೀಗಳ ದರ್ಶನಕ್ಕೆ ಆಗಮಿಸಿದ ಸಾರ್ವಜನಿಕರು ಹಾಗೂ ವಿವಿಐಪಿಗಳಿಗೆ ಪ್ರತ್ಯೇಕ ಸಾಲು ನಿರ್ಮಿಸಲಾಗಿತ್ತು. ಸುಮಾರು ಮೂರು ಕಿಲೋ ಮೀಟರ್ ಉದ್ದದ ಸಾಲಿನಲ್ಲಿ ನಿಂತು ಸಾರ್ವಜನಿಕರು ಶ್ರೀಗಳ ದರ್ಶನ ಪಡೆದರು. ಸಾಲಿನುದ್ದಕ್ಕೂ ಬ್ಯಾರಿಕೇಡ್‌ಗಳ ಪಕ್ಕ ಹೆಜ್ಜೆ, ಹೆಜ್ಜೆಗೂ ಪೊಲೀಸರು ಕಾವಲಿದ್ದು, ಭಕ್ತರನ್ನು ನಿಯಂತ್ರಿಸುತ್ತಿದ್ದರು. ತುಮಕೂರು ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಸೇರಿ ಹೊರವಲಯದ ಭಾಗಗಳಲ್ಲಿ ಪೊಲೀಸರು ಬ್ಯಾರಿಕೇಡ್ ನಿರ್ಮಿಸಿ, ಬಂದೋಬಸ್ತ್ನ ಕಾರ್ಯ ನಿರ್ವಹಿಸಿದರು.
ಪೊಲೀಸರಿಗೆ ಸಿಎಂ ಶ್ಲಾಘನೆ
ಎರಡು ದಿನಗಳ ಕಾಲ ಸಿದ್ಧಗಂಗಾ ಮಠದಲ್ಲಿ ಸೂಕ್ತ ಬಿಗಿ ಬಂದೋಬಸ್ತ್ ಏರ್ಪಡಿಸುವಲ್ಲಿ ಯಶಸ್ವಿಯಾದ ಪೊಲೀಸ್ ಇಲಾಖೆ ಸಿಬ್ಬಂದಿ ಕಾರ್ಯವನ್ನು ಶ್ಲಾಘಿಸಿರುವ ಸಿಎಂ ಎಚ್.ಡಿ ಕುಮಾರಸ್ವಾಮಿ, ಲಕ್ಷಾಂತರ ಜನರ ನಡುವೆಯೂ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ ಪೊಲೀಸರ ಕಾರ್ಯಕ್ಕೆ ಧನ್ಯವಾದ ಎಂದರು. ಜತೆಗೆ, ಔರಾದ್‌ಕರ್ ವರದಿ ಜಾರಿಗೊಳಿಸುವ ಕಾರ್ಯ ಮಾಡಲಾಗುತ್ತದೆ ಎಂದು ಮಠದ ಆವರಣದಲ್ಲಿ ಸುದ್ದಿಗಾರರಿಗೆ ತಿಳಿಸಿದರು.