Advertisement

ರಾಜ್ಯದಲ್ಲೂ ಪೊಲೀಸ್‌ ಇಲಾಖೆ ಕಟ್ಟೆಚ್ಚರ

09:18 AM Apr 23, 2019 | Team Udayavani |

ಬೆಂಗಳೂರು: ಶ್ರೀಲಂಕಾದಲ್ಲಿ ಸರಣಿ ಬಾಂಬ್‌ ಸ್ಫೋಟ ದುರಂತದ ಬೆನ್ನಲ್ಲೇ ಕೇಂದ್ರ ಗೃಹ ಇಲಾಖೆ ಎಚ್ಚೆತ್ತುಕೊಂಡಿದ್ದು, ತಮಿಳುನಾಡು, ಕೇರಳ, ಆಂಧ್ರ ಪ್ರದೇಶ, ಕರ್ನಾಟಕ ಸೇರಿ ದಕ್ಷಿಣ ಭಾರತ ರಾಜ್ಯಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಆಯಾ ರಾಜ್ಯಗಳಿಗೆ ಸೂಚನೆ ನೀಡಿದೆ.

Advertisement

ಕೇಂದ್ರ ಗೃಹ ಇಲಾಖೆ ಹಾಗೂ ಕೇಂದ್ರ ಗುಪ್ತಚರ ಇಲಾಖೆ ಸೂಚನೆ ಬೆನ್ನಲ್ಲೇ ರಾಜ್ಯ ಪೊಲೀಸ್‌ ಇಲಾಖೆ ಕೂಡ ಮುಂಜಾಗ್ರತಾ ಕ್ರಮವಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ರಾಜ್ಯದ ಕರಾವಳಿ ತೀರ ಪ್ರದೇಶ, ಬೆಂಗಳೂರು, ಮೈಸೂರು, ಪ್ರೇಕ್ಷಣೀಯ ಸ್ಥಳಗಳು, ಪಾರಂಪರಿಕ ಸ್ಥಳಗಳು, ಅತಿಹೆಚ್ಚು ಜನ ಸೇರುವ ಸ್ಥಳಗಳಲ್ಲಿ ಹೆಚ್ಚಿನ ಭದ್ರತೆ ವಹಿಸುವಂತೆ ಅಧೀನ ಅಧಿಕಾರಿಗಳಿಗೆ ಇಲಾಖೆ ಸೂಚನೆ ರವಾನಿಸಿದೆ.

ಪ್ರಮುಖವಾಗಿ ರಾಜ್ಯದ ಗಡಿಭಾಗಗಳು, ವಿಮಾನ ನಿಲ್ದಾಣಗಳು, ರಾಯಭಾರಿ ಕಚೇರಿಗಳಲ್ಲಿ ಹೆಚ್ಚಿನ ನಿಗಾವಹಿಸಬೇಕು. ರೈಲ್ವೆ ನಿಲ್ದಾಣ ಹಾಗೂ ವಿಮಾನ ನಿಲ್ದಾಣಗಳಲ್ಲಿ ಅಪರಿಚಿತರ ಮೇಲೆ ಕಣ್ಣಿಟ್ಟಿರಬೇಕು. ಅನುಮಾನ ಬಂದರೆ ಕೂಡಲೇ ವಶಕ್ಕೆ ಪಡೆದು ವಿಚಾರಣೆ ನಡೆಸಬೇಕು. ಈಗಿರುವ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಿ ಅಗತ್ಯವಿದ್ದರೆ ಮತ್ತಷ್ಟು ಭದ್ರತೆ ಬಿಗಿಗೊಳಿಸುವಂತೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ.

ಈ ಕುರಿತು ಉದಯವಾಣಿ ಜತೆ ಮಾತನಾಡಿದ ಕಾನೂನು ಸುವ್ಯವಸ್ಥೆ ಎಡಿಜಿಪಿ ಕಮಲ್‌ಪಂಥ್‌, ರಾಜ್ಯದಲ್ಲಿ ಅತ್ಯಂತ ಭದ್ರತೆ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಈಗಾಗಲೇ ಪಾಲಿಸಲಾಗುತ್ತಿದೆ. ಶ್ರೀಲಂಕಾದಲ್ಲಿ ಸರಣಿ ಬಾಂಬ್‌ ಸ್ಫೋಟ ಘಟನೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪ್ರಮುಖ ಸ್ಥಳಗಳು, ಜನನಿಬಿಡ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ, ನಿಗಾ ವಹಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next