ಹುಬ್ಬಳ್ಳಿ: ಹಬ್ಬವನ್ನು ಶಾಂತಿ, ಸುವ್ಯವಸ್ಥೆಯಿಂದ ಆಚರಿಸಲು ಪೊಲೀಸ್ ಇಲಾಖೆ ಎಲ್ಲ ಸಹಕಾರ ನೀಡುತ್ತದೆ ಎಂದು ಡಿಸಿಪಿ ನಾಗೇಶ ಡಿ.ಎಲ್. ಹೇಳಿದರು.
ಕಾರವಾರ ರಸ್ತೆ ಹಳೆಯ ಸಿಎಆರ್ ಮೈದಾನದ ಭವನದಲ್ಲಿ ಹು-ಧಾ ಪೊಲೀಸ್ ಕಮಿಷನರೇಟ್‌ನ ಉತ್ತರ ಉಪವಿಭಾಗ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ರಂಜಾನ್ ಹಬ್ಬದ ಸೌಹಾರ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಂಜಾನ್ ಹಬ್ಬದ ನಿಮಿತ್ತ ಸೂಕ್ತ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗುತ್ತಿದೆ. ಯಾವುದೇ ತೊಂದರೆ ಆಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ನಿರ್ಭಯದಿಂದ ಅದ್ಧೂರಿಯಾಗಿ ಶಾಂತಿಯುತವಾಗಿ ಹಬ್ಬ ಆಚರಿಸಲು ಪೊಲೀಸ್ ಇಲಾಖೆ ಎಲ್ಲ ರೀತಿ ಸನ್ನದ್ಧವಾಗಿದೆ. ಆದರೆ ಶಬ್ಬೆಬಾರಾತ್ ವೇಳೆ ಕೆಲ ಯುವಕರು ಕರ್ಕಶ ಶಬ್ದದೊಂದಿಗೆ ಬೈಕ್ ವ್ಹೀಲಿಂಗ್ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದು, ಈ ಬಗ್ಗೆ ಸಮಾಜದ ಹಿರಿಯರು, ಮುಖಂಡರು ಅವರಿಗೆ ಬುದ್ಧಿವಾದ ಹೇಳಬೇಕು. ಹಬ್ಬದ ಸಂದರ್ಭಗಳಲ್ಲಿ ಪೊಲೀಸರು ಮಧ್ಯೆ ಪ್ರವೇಶಿಸುವುದು ಸರಿ ಎನಿಸುವುದಿಲ್ಲ ಎಂದರು. ಎಸಿಪಿ ಅನಿಲಕುಮಾರ ಭೂಮರಡ್ಡಿ ಮಾತನಾಡಿ, ಅವಳಿ ನಗರದ ಬಗ್ಗೆ ಹೊರಗಿನ ಜನರಲ್ಲಿ ಮೊದಲಿದ್ದ ಭಯದ ವಾತಾವರಣ ಸಂಪೂರ್ಣ ತಿಳಿಯಾಗಿದೆ. ಎಲ್ಲ ಸಮುದಾಯದವರು ಧಾರ್ಮಿಕ ಭಾವನೆಗಳಿಗೆ ಸ್ಪಂದಿಸಿ ಹಬ್ಬಗಳನ್ನು ಆಚರಿಸುತ್ತ ಬರುತ್ತಿದ್ದಾರೆ. ಸಹಬಾಳ್ವೆ ನಡೆದುಕೊಂಡು ಹೋಗುತ್ತಿದ್ದಾರೆ. ಶಾಂತಿ, ನೆಮ್ಮದಿಯ ನಗರ ಎಂಬುದನ್ನು ತೋರಿಸಿಕೊಟ್ಟಿದ್ದೀರಿ ಎಂದು ಹೇಳಿದರು.
ಪಾಲಿಕೆ ಸಹಾಯಕ ಆಯುಕ್ತ ಎಸ್.ಸಿ. ಬೇವೂರ, ಅಪರ ತಹಶೀಲ್ದಾರ್ ವಿಜಯಕುಮಾರ ಕಟಕೋಳ, ಮೊಹಮ್ಮದ ಯುಸೂಫ ಸವಣೂರ, ಉಸ್ಮಾನಗನಿ, ವಿಠಲ ಲದವಾ, ಶೇಷಪ್ಪ ಜಿತೂರಿ ಇನ್ನಿತರರು ಮಾತನಾಡಿದರು. ವಿವಿಧ ಸಮಾಜದ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.