Advertisement
ಹೊಸಕೋಟೆ ತಾಲೂಕಿನ ಕಟ್ಟಿಗೇನಹಳ್ಳಿಯ ಸೈಯದ್ ರಿಯಾಜ್ (49) ಮತ್ತು ಈತನ ಪುತ್ರ ಸೈಯದ್ ಷೇರ್ ಅಲಿ ಅಲಿಯಾಸ್ ಬಾಬಾ (28) ಬಂಧಿತರು. ಸರಿಯಾಗಿ ಒಂದು ದಶಕದಿಂದ (2008ರಿಂದ) ಅಕ್ರಮ ದಂಧೆಯಲ್ಲಿ ತೊಡಗಿರುವ ಆರೋಪಿಗಳು, ಕಟ್ಟಿಗೇನಹಳ್ಳಿಯಲ್ಲಿ ಕೋಟ್ಯಂತರ ರೂ. ಮೌಲ್ಯದ ಮನೆ ಹೊಂದಿದ್ದಾರೆ.
Related Articles
Advertisement
ಕಳ್ಳ ಸಾಗಣೆಗೆ ಫೋರ್ಡ್ ಐಕಾನ್: ಮಧ್ಯವರ್ತಿಗಳಿಂದ ಖರೀದಿಸಿದ ಶ್ರೀಗಂಧದ ತುಂಡುಗಳನ್ನು ಬೇರೆಡೆಗೆ ಸಾಗಿಸಲು ಆರೋಪಿಗಳು ಫೋರ್ಡ್ ಐಕಾನ್ ಕಾರನ್ನೇ ಬಳಸುತ್ತಿದ್ದರು. ವಿಶೇಷವೆಂದರೆ, ಒಎಲ್‌ಎಕ್ಸ್‌ನಲ್ಲಿ ಮಾರಾಟಕ್ಕಿರುವ ಫೋರ್ಡ್ ಐಕಾನ್ ಕಾರುಗಳನ್ನು ಹುಡುಕಿ, ಅಲ್ಲಿ ಪ್ರಕಟಿಸುವ ಕಾರಿನ ನಂಬರ್ ಪ್ಲೇಟನ್ನೇ ನಕಲಿ ಮಾಡುತ್ತಿದ್ದ ಅಪ್ಪ-ಮಗ, ಜಾಹಿರಾತಲ್ಲಿರುವ ಕಾರಿನ ಹೊರ ವಿನ್ಯಾಸ, ಬಣ್ಣವನ್ನೇ ತಮ್ಮ ಕಾರಿಗೂ ಮಾಡಿಸುತ್ತಿದ್ದರು. ಜತಗೆ ಈ ನಂಬರ್ ಪ್ಲೇಟ್‌ಗಳ ಮೇಲೆ ಜಯಕರ್ನಾಟಕ ಹಾಗೂ ಇತರೆ ಸಂಘಟನೆಗಳ ಹೆಸರು ಬರೆಸಿಕೊಂಡು ಕದ್ದ ಶ್ರೀಗಂಧದ ಮರದ ತುಂಡುಗಳನ್ನು ನಿರಾಯಾಸವಾಗಿ ಸಾಗಿಸುತ್ತಿದ್ದರು.
ಕಾರ್ಖಾನೆಗಳಿಗೆ ಮಾರಾಟ: ಪ್ರತಿ ಕೆ.ಜಿ.ಗೆ 2ರಿಂದ 3 ಸಾವಿರ ರೂ. ನೀಡಿ ಕಳ್ಳರಿಂದ ಶ್ರೀಗಂಧದ ಮರ ಖರೀದಿಸುತ್ತಿದ್ದ ಆರೋಪಿಗಳು, ಅವರುಗಳನ್ನು ಚಿಕ್ಕಮಗಳೂರು, ಶಿರಾ, ಆಂಧ್ರಪ್ರದೇಶ, ತಮಿಳುನಾಡಿನಲ್ಲಿರುವ ಶ್ರೀಗಂಧದ ಎಣ್ಣೆ ಮತ್ತು ಸೋಪು ಕಾರ್ಖಾನೆಗಳಿಗೆ ಕೆ.ಜಿ.ಗೆ 15ರಿಂದ 18 ಸಾವಿರ ರೂ.ಗೆ ಮಾರಾಟ ಮಾಡುತ್ತಿದ್ದರು. ಇತ್ತೀಚೆಗೆ ಕಂಪನಿಯೊಂದು 500 ಟನ್ ರಕ್ತಚಂದನ ಮರಕ್ಕೆ ಬೇಡಿಕೆ ಇಟ್ಟಿತ್ತು ಎಂದು ಪೊಲೀಸರು ಹೇಳಿದರು.
ಮನೆಯಲ್ಲೇ ವ್ಯವಹಾರ: ಕೋಟೆಯಂತೆ ಮನೆ ನಿರ್ಮಿಸಿಕೊಂಡಿರುವ ಆರೋಪಿ ರಿಯಾಜ್, ಮನೆಯಲ್ಲೇ ವ್ಯವಹಾರ ನಡೆಸುತ್ತಿದ್ದ. ಕಳವು ಮಾಡಿದ ಮರದ ತುಂಡು ತರುತ್ತಿದ್ದ ಕಳ್ಳರಿಗೆ ಮನೆಯಲ್ಲೇ ಹಣ ಕೊಡುತ್ತಿದ್ದರು. ಹೀಗಾಗಿ ಮನೆಯಲ್ಲಿ ಕನಿಷ್ಠ 20ರಿಂದ 30 ಲಕ್ಷ ರೂ. ನಗದು ಇಟ್ಟಿರುತ್ತಿದ್ದ. ಮರದ ತುಂಡುಗಳನ್ನು ಸಂಗ್ರಹಿಸಲು ಗೋದಾಮು ಕೂಡ ನಿರ್ಮಿಸಿಕೊಂಡಿದ್ದ.
ಕೋಕಾ ಕಾಯ್ದೆ ಅಡಿ ಪ್ರಕರಣ: ಬಂಧಿತ ಸೈಯದ್ ರಿಯಾಜ್, ಪುತ್ರ ಸೈಯದ್ ಷೇರ್ ಅಲಿ ಹಾಗೂ ಈ ಹಿಂದೆ ಬಂಧಿಸಿರುವ ಬಾಗಲೂರಿನ ಸಹೋದರರಾದ ಇಮಾªದ್‌ವುಲ್ಲಾ, ಸಹೋದರ ಮುಜಾಹಿಯಿದುಲ್ಲಾ, ತಮಿಳುನಾಡಿನ ಲಕ್ಷ್ಮಣ, ರಂಗನಾಥನ್ ಹಾಗೂ ರಾಮಸ್ವಾಮಿ ಹಾಗೂ ತಲೆಮರೆಸಿಕೊಂಡಿರುವ ಇಳಯರಾಜ ತಂಡದ ವಿರುದ್ಧ ಕೋಕಾ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಕೇಂದ್ರ ವಿಭಾಗದ ಪೊಲೀಸರು ಹೇಳಿದರು.
ಬಂಧನಕ್ಕೆ 200 ಶಸ್ತ್ರಸಜ್ಜಿತ ಪೊಲೀಸರು!: ಆರೋಪಿಗಳ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕಿದ್ದ ಪೊಲೀಸರು, ಇಪ್ಪತ್ತೈದು ದಿನಗಳ ಹಿಂದೆಯೇ ಅವರ ಚಲವಲನಗಳ ಮೇಲೆ ಕಣ್ಣಿಟ್ಟಿದ್ದರು. ಈ ಅವಧಿಯಲ್ಲಿ ನಾಲ್ಕು ಬಾರಿ ಬಂಧನಕ್ಕೆ ಯತ್ನಿಸಿದ್ದರಾದರೂ, ಊರ ಜನರ ನೆರವಿನಿಂದ ಆರೋಪಿಗಳು ತಪ್ಪಿಸಿಕೊಂಡಿದ್ದರು.
ಈ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ 1 ಗಂಟೆಗೆ ವೈಟ್‌ಫೀಲ್ಡ್ ವಲಯ ಮತ್ತು ಕೇಂದ್ರ ವಲಯದ 100 ಮಂದಿ ಸಿಬ್ಬಂದಿ ಹಾಗೂ 3 ಕೆಎಸ್‌ಆರ್‌ಪಿ ತುಕಡಿ ಸೇರಿ 200ಕ್ಕೂ ಹೆಚ್ಚು ಮಂದಿ ಶಸ್ತ್ರಸಜ್ಜಿತ ಪೊಲೀಸರನ್ನು ಆರೋಪಿಗಳ ಮನೆ ಮತ್ತು ಕಟ್ಟಿಗೇನಹಳ್ಳಿ ಸುತ್ತ ನಿಯೋಜಿಸಲಾಗಿತ್ತು. ಶನಿವಾರ ಮುಂಜಾನೆ 3ರಿಂದ 5 ಗಂಟೆ ಅವಧಿಯಲ್ಲಿ ಆರೋಪಿಗಳ ಮನೆ ಮೇಲೆ ದಾಳಿ ನಡೆಸಿ, ಬಂಧಿಸಲಾಯಿತು.
ಮನೆಯೊಂದು; ನಾಲ್ಕು ಬಾಗಿಲು!: ದಶಕದಿಂದ ಕಳ್ಳದಂಧೆಯಲ್ಲಿ ತೊಡಗಿರುವ ಸೈಯದ್ ರಿಯಾಜ್, ಕೋಟ್ಯಂತರ ರೂ. ವೆಚ್ಚ ಮಾಡಿ ಮನೆ ಕಟ್ಟಿಸಿದ್ದು, ಯಾವ ಬ್ಯಾಂಕ್ ಅಥವಾ ಜ್ಯುವೆಲ್ಲರಿ ಮಳಿಗೆಯ ಲಾಕರ್‌ಗೂ ಕಮ್ಮಿ ಇರದಂತೆ ಮನೆಯನ್ನು ಭದ್ರ ಮಾಡಿಕೊಂಡಿದ್ದಾನೆ. ದಾಳಿ ವೇಳೆ ಮನೆಗೆ ನಾಲ್ಕು ಹಂತದಲ್ಲಿ ಬಾಗಿಲುಗಳು ಇರುವುದನ್ನು ಕಂಡು ಪೊಲೀಸರೇ ಬೆರಗಾಗಿದ್ದಾರೆ.
ಮೊದಲು ಮರದ ಬಾಗಿಲು, ನಂತರ ಗ್ರಿಲ್ ಗೇಟ್, ಆಮೇಲೆ ಲಾಕರ್ ಮಾದರಿಯ ಉಕ್ಕಿನ ಬಾಗಿಲು ಕೊನೆಯಲ್ಲಿ ಸೈಡ್ ಶೆಟರ್ ನಿರ್ಮಿಸಲಾಗಿತ್ತು. ಈ ಬಾಗಿಲುಗಳನ್ನು ತೆರೆಯಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಕಡೆಗೆ ಹಗ್ಗ ಹಾಗೂ ಇತರೆ ಉಪಕರಣಗಳನ್ನು ಬಳಸಿ ಮನೆಯ ಮೇಲ್ಚಾವಣಿ ಮೂಲಕ ಮನೆ ಪ್ರವೇಶಿಸಿದ್ದು, ಮೊದಲು ಸೈಯದ್ ರಿಯಾಜ್ ಸಿಕ್ಕಿದ್ದಾನೆ. ಬಳಿಕ ಕೊಣೆಯಲ್ಲಿ ಅವಿತು ಕುಳಿತಿದ್ದ ಸೈಯದ್ ಷೇರ್ ಅಲಿಯನ್ನು ಬಂಧಿಸಲಾಗಿದೆ.
ವ್ಯವಹಾರದ ಲೆಕ್ಕವಿದ್ದ ಡೈರಿ ಪತ್ತೆ: ಸೈಯದ್ ರಿಯಾಜ್ 2008ರಿಂದ ತನ್ನ ಅಕ್ರಮ ದಂಧೆ ಕುರಿತ ಲೆಕ್ಕ ಬರೆದಿರುವ ಡೈರಿ ಪೊಲೀಸರಿಗೆ ದೊರೆತಿದೆ. ಯಾರಿಂದ ಎಷ್ಟು ಕೆ.ಜಿ ಶ್ರೀಗಂಧದ ಮರ ಖರೀದಿಸಲಾಗಿದೆ, ಎಷ್ಟು ಹಣ ಕೊಡಲಾಗಿದೆ, ಬಾಕಿ ಎಷ್ಟು ಎಂಬೆಲ್ಲ ಮಾಹಿತಿ ಆ ಡೈರಿಯಲ್ಲಿದೆ. ಈ ಹಿಂದೆ ಬಂಧನಕ್ಕೊಳಗಾಗಿದ್ದ ಬಾಗಲೂರಿನ ಸಹೋದರನ ಹೆಸರನ್ನು ಕೂಡ ರಿಯಾಜ್ ಡೈರಿಯಲ್ಲಿ ಬರೆದಿದ್ದಾನೆ.
ಮನೆ ಮುಂದೇ ಮದುವೆಯಾದ: ಸೈಯದ್ ಷೇರ್ ಅಲಿಯ ಮದುವೆ ಡಿ.23ರಂದು ನಿಶ್ಚಯವಾಗಿತ್ತು. ಈ ಮಾಹಿತಿ ಸಂಗ್ರಹಿಸಿದ್ದ ಕಬ್ಬನ್‌ಪಾರ್ಕ್ ಪೊಲೀಸರು, ಡಿ.20ರಂದು ಹೊಸಕೋಟೆ ಮುಖ್ಯರಸ್ತೆಯಲ್ಲಿ ಮದುವೆಗೆ ಚಿನ್ನಾಭರಣ ಖರೀದಿಸಲು ಹೋಗುತ್ತಿದ್ದ ಆರೋಪಿಗಳ ಕಾರನ್ನು ಹಿಂಬಾಲಿಸಿದ್ದರು.
ಆದರೆ, ಎಚ್ಚೆತ್ತ ತಂದೆ-ಮಗ, ಸಿನಿಮಿಯ ಮಾದರಿಯಲ್ಲಿ ಪೊಲೀಸರ ಕಾರನ್ನು ಹಳ್ಳಕ್ಕೆ ತಳ್ಳಿ ತಲೆಮರೆಸಿಕೊಂಡಿದ್ದರು. ಬಳಿಕ ಪೊಲೀಸರು ಯಾವುದೇ ಕ್ಷಣದಲ್ಲೂ ದಾಳಿ ಮಾಡಬಹುದು ಎಂದು ಭಾವಿಸಿ, ಗುಂಡಿಬಂಡೆಯ ಕಲ್ಯಾಣ ಮಂಟಪದಲ್ಲಿ ನಿಶ್ಚಯವಾಗಿದ್ದ ಮದುವೆಯನ್ನು ಮನೆ ಮುಂದೆಯೇ ನೆರವೇರಿಸಿದ್ದರು ಎಂದು ಹೇಳಲಾಗಿದೆ.
ಊರು ತುಂಬಾ ಕಳ್ಳರೇ!: ಹೊಸಕೋಟೆ ತಾಲೂಕಿನ ಕಟ್ಟಿಗೇನಹಳ್ಳಿಯಲ್ಲಿ ವಾಸವಿರುವ ಬಹುತೇಕರು ಶ್ರೀಗಂಧದ ಮರ, ರಕ್ತಚಂದನ ಮರ, ಮರಳು ದಂಧೆ ಸೇರಿ ಇತರೆ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಹೀಗಾಗಿ ಈ ಗ್ರಾಮಕ್ಕೆ ಪೊಲೀಸರು ಪ್ರವೇಶಿಸುತ್ತಿದ್ದಂತೆ ಮಹಿಳೆಯರು ಮತ್ತು ಮಕ್ಕಳು ಪೊಲೀಸ್ ವಾಹನಕ್ಕೆ ಅಡ್ಡ ಮಲಗಿ, ಕಲ್ಲು ತೂರಾಡಿ ಕಾರ್ಯಾಚರಣೆಗೆ ಅಡ್ಡಿ ಪಡಿಸುತ್ತಾರೆ.
ಈ ಹಿನ್ನೆಲೆಯಲ್ಲಿ ಶುಕ್ರವಾರ ಕಾರ್ಯಚರಣೆ ವೇಳೆ ಆರೋಪಿಗಳ ಮನೆ ಅಕ್ಕ-ಪಕ್ಕದ ಮನೆಗಳ ಬಳಿ ಶಸ್ತ್ರಸಜ್ಜಿತ ಪೊಲೀಸರನ್ನು ನಿಯೋಜಿಸಲಾಗಿತ್ತು. ಒಂದೊಮ್ಮೆ ಯಾರಾದರೂ ಕಲ್ಲು ತೂರಾಟ ಮಾಡಿದರೆ ಅವರ ಮೇಲೆ “ಕನಿಷ್ಠ ಬಲ’ ಪ್ರಯೋಗಿಸಲು ಸೂಚನೆ ನೀಡಲಾಗಿತ್ತು. ಆದರೆ, ಪೊಲೀಸರ ಬಳಿಯಿದ್ದ ಶಸ್ತ್ರಾಸ್ತ್ರ ಕಂಡು ಸಾರ್ವಜನಿಕರು ಮನೆಯಿಂದ ಹೊರಗೇ ಬರಲಿಲ್ಲ. ಹೀಗಾಗಿ ಕಾರ್ಯಾಚರಣೆಗೆ ಅಡ್ಡಿಯಾಗಲಿಲ್ಲ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಅಪ್ಪ ಮಗನ ಬಗ್ಗೆ ಬಾಯ್ಬಿಟ್ಟ ಬಂಧಿತರು: ನಗರದಲ್ಲಿರುವ ಸಚಿವರ ನಿವಾಸಗಳ ಆವರಣಗಳಲ್ಲಿ ಶ್ರೀಗಂಧದ ಮರಗಳನ್ನು ಕಡಿದು ಕಳ್ಳಸಾಗಣೆ ಮಾಡುತ್ತಿದ್ದ ಹಾಗೂ ಇತ್ತೀಚೆಗೆ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ನಿವಾಸದ ಆವರಣದಲ್ಲಿ ಗಂಧದಮರ ಕಳವು ಮಾಡಿದ್ದ ಬಾಗಲೂರಿನ ಮುಜಾಹಿದ್ದೀನುಲ್ಲಾನ ಕಾಲಿಗೆ ಗುಂಡು ಹಾರಿಸುವ ಮೂಲಕ ಕಬ್ಬನ್‌ಪಾರ್ಕ್ ಪೊಲೀಸರು ಡಿ.11ರಂದು ಬಂಧಿಸಿದ್ದರು.
ಈತ ನೀಡಿದ ಮಾಹಿತಿ ಆಧರಿಸಿ ಕೃತ್ಯಕ್ಕೆ ಸಹಕಾರ ನೀಡಿದ ಮುಜಾಹಿದ್ದೀನ್‌ನ ಸಹೋದರ ಇಮಾªದ್‌ವುಲ್ಲಾ ಹಾಗೂ ತಮಿಳುನಾಡಿನ ಸೇಲಂ ಜಿಲ್ಲೆಯ ಲಕ್ಷ್ಮಣ ಅಲಿಯಾಸ್ ಕುಳ್ಳಿಯಾ, ರಂಗನಾಥನ್, ರಾಮಸ್ವಾಮಿಯನ್ನು ಬಂಧಿಸಲಾಗಿತ್ತು. ಈ ಆರೋಪಿಗಳು ವಿಚಾರಣೆ ವೇಳೆ ಅಪ್ಪ-ಮಗನ ಅಕ್ರಮ ದಂಧೆ ಬಗ್ಗೆ ಬಾಯಿಬಿಟ್ಟಿದ್ದರು.