Advertisement

ಚೆಂಡೆ ಬಡಿಯುತ್ತ ಬಂದು ತಂಡದಿಂದ ಪ್ರಶ್ನೆ: ಚಕಮಕಿ, ದೂರು ದಾಖಲು

11:48 AM Mar 19, 2024 | Team Udayavani |

ಪುತ್ತೂರು: ಶಾಸಕ ಅಶೋಕ್‌ ಕುಮಾರ್‌ ರೈ 1,400 ಕೋ.ರೂ. ಅನುದಾನ ತಂದಿರುವ ಬಗ್ಗೆ ಬಿಜೆಪಿ ಕಾರ್ಯಕರ್ತನೋರ್ವ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿರುವ ವಿಚಾರದಲ್ಲಿ ಶಾಸಕರ ಅಭಿಮಾನಿಗಳ ತಂಡವು ಅನುದಾನದ ವಿವರದ ಬ್ಯಾನರ್‌ ಸಹಿತ ಚೆಂಡೆ ಬಡಿಯುತ್ತ ಆತನ ಮನೆ ಬಾಗಿಲಿಗೆ ತೆರಳಿದ ವೇಳೆ ಮಾತಿನ ಚಕಮಕಿ ಉಂಟಾದ ಘಟನೆ ರವಿವಾರ ಸಂಜೆ ಸಂಭವಿಸಿದೆ.

Advertisement

ಬಿಜೆಪಿ ಸಾಮಾಜಿಕ ಜಾಲತಾಣದ ಜಿಲ್ಲಾ ಪ್ರಕೋಷ್ಠದ ಸದಸ್ಯ ತಾರಿಗುಡ್ಡೆಯ ಜಯಾನಂದ ಕೆ. ಅವರ ಮನೆಗೆ ಪುತ್ತೂರು ಶಾಸಕರ ಅಭಿಮಾನಿ ಬಳಗ ತೆರಳಿದ್ದು, ಕಾಮಗಾರಿಗಳ ವಿವರಣೆ ನೀಡಿದ ವೇಳೆ ಮಾತಿನ ಚಕಮಕಿ ನಡೆದಿದೆ. ಈ ಬಗ್ಗೆ ಜಯಾನಂದ ಅವರು ನಗರ ಪೊಲೀಸರಿಗೆ ದೂರು ನೀಡಿದ್ದು, ದಾಖಲಾಗಿದೆ.

ಏನಿದು ಘಟನೆ? ಪುತ್ತೂರು ಕ್ಷೇತ್ರಕ್ಕೆ ಶಾಸಕ ಅಶೋಕ್‌ ಕುಮಾರ್‌ ರೈ 1,400 ಕೋಟಿ ರೂ.ಅನುದಾನ ತಂದಿರುವ ಬಗ್ಗೆ ಜಯಾನಂದ ಅವರು ಅನುದಾನದ ಮೂಲದ ಬಗ್ಗೆ ಸಾಮಾಜಿಕ ಜಾಲತಾಣ ಫೇಸ್‌ ಬುಕ್‌ನಲ್ಲಿ ಪ್ರಶ್ನಿಸಿದ್ದರು. ಈ ಬಗ್ಗೆ ಶಾಸಕರ ಅಭಿಮಾನಿ ತಂಡ ಜಯಾನಂದರ ಮನೆಗೆ ರವಿವಾರ ಸಂಜೆ ಬ್ಯಾಂಡ್‌, ವಾದ್ಯ ಸಹಿತ ತೆರಳಿತ್ತು. ಶಾಸಕರು ತಂದ ಅನುದಾನ, ನಡೆದ ಕಾಮಗಾರಿಗಳ ಬ್ಯಾನರ್‌ ಪ್ರದರ್ಶಿಸಿ ಮಾಹಿತಿ ನೀಡಲಾರಂಭಿಸಿದ ವೇಳೆ ಪರಸ್ಪರ ಮಾತಿನ ಚಕಮಕಿ ನಡೆಯಿತು. ಶಾಸಕರು ತಂದ ಅನುದಾನ, ಕಾಮಗಾರಿ ಕುರಿತು ಮಾಹಿತಿ ನೀಡಿದ ವಾರಿಯರ್ಸ್‌ ತಂಡ ಬಳಿಕ ಅಲ್ಲಿಂದ ನಿರ್ಗಮಿಸಿತು. ಈ ಘಟನೆಯ ಬಗ್ಗೆ ವೀಡಿಯೋ ಚಿತ್ರೀಕರಣ ನಡೆಸಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.

ಪುತ್ತಿಲ ಭೇಟಿ

ಘಟನೆಯ ಬೆನ್ನಲ್ಲೇ ಜಯಾನಂದ ಅವರ ಮನೆಗೆ ಬಿಜೆಪಿ ಮುಖಂಡ ಅರುಣ್‌ ಕುಮಾರ್‌ ಪುತ್ತಿಲ, ಪಿ.ಜಿ. ಜಗನ್ನಿವಾಸ್‌ ರಾವ್‌ ಸಹಿತ ಬಿಜೆಪಿ ಪ್ರಮುಖರು ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.

Advertisement

ಶಾಸಕರ ಬೆಂಬಲಿತ ತಂಡವೊಂದು ನುಗ್ಗಿ ದಾಂಧಲೆ ನಡೆಸಿರುವುದು ಖಂಡನೀಯ. ಘಟನೆಯ ಬಗ್ಗೆ ವೀಡಿಯೋ ದಾಖಲೆ ಇದೆ. ಎಲ್ಲರ ವಿರುದ್ಧ ಪ್ರಕರಣ ದಾಖಲಾಗಬೇಕು ಎಂದು ಪೋಲೀಸ್‌ ಅಧಿಕಾರಿಗಳಲ್ಲಿ ಪುತ್ತಿಲ ಆಗ್ರಹಿಸಿದ್ದಾರೆ. ಇಂತಹ ಗೊಡ್ಡು ಬೆದರಿಕೆಗಳಿಗೆ ಬಿಜೆಪಿ ಕಾರ್ಯಕರ್ತರು ಹೆದರು ವುದಿಲ್ಲ. ಪೋಲಿಸರು ಪ್ರಭಾವಗಳಿಗೆ ಮಣಿಯದೇ ಗಂಭೀರವಾಗಿ ಪರಿಗಣಿಸಿ ಕಾಂಗ್ರೆಸ್‌ ಗೂಂಡಾಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದ.ಕ. ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ| ಬೃಜೇಶ್‌ ಚೌಟ ತಿಳಿಸಿದ್ದಾರೆ.

ಪುತ್ತೂರು ಕ್ಷೇತ್ರಕ್ಕೆ 1,400 ಕೋ.ರೂ. ಅನುದಾನ ತಂದಿರುವ ಬಗ್ಗೆ ಈಗಾಗಲೇ ಅಂಕಿ-ಅಂಶ ಸಹಿತ ಮಾಹಿತಿ ನೀಡಿದ್ದೇನೆ. ಕೆಲವರು ಸಾಮಾಜಿಕ ಜಾಲತಾಣದ ಮೂಲಕ ನಿಂದಿಸುವ ಸಂದೇಶ ರವಾನಿಸಿದ್ದಾರೆ. ಹೀಗಾಗಿ ಪಕ್ಷದ ಅಭಿಮಾನಿಗಳು ಬ್ಯಾನರ್‌ ಸಹಿತ ಮನೆಗೆ ತೆರಳಿ ಮಾಹಿತಿ ನೀಡಿದ್ದಾರೆ. ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಘಟನೆ ನಡೆದಿದ್ದರೆ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ. – ಅಶೋಕ್‌ ಕುಮಾರ್‌ ರೈ, ಶಾಸಕ, ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next