Advertisement

ಕಾನೂನು ಬಾಹಿರ ಕೃತ್ಯಗಳ ಮಟ್ಟ ಹಾಕಲು ಮುಲಾಜಿಲ್ಲದೆ ಕ್ರಮ

12:52 PM Oct 24, 2020 | Suhan S |

ಹುಬ್ಬಳ್ಳಿ: ಅವಳಿ ನಗರದಲ್ಲಿ ಕ್ರಿಕೆಟ್‌ ಬೆಟ್ಟಿಂಗ್‌, ಬಡ್ಡಿ ಕುಳಗಳು, ಮಟ್ಕಾ ಬುಕ್ಕಿಗಳು, ಗಾಂಜಾ, ಮಾದಕದ್ರವ್ಯ ಹಾಗೂ ರೌಡಿಸಂ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳಿಗೆ ಮುಲಾಜಿಲ್ಲದೆ ಕಡಿವಾಣ ಹಾಕಲಾಗುವುದು ಎಂದು ಹು-ಧಾ ಮಹಾ ನಗರ ನೂತನ ಪೊಲೀಸ್‌ ಆಯುಕ್ತ ಲಾಭೂ ರಾಮ ಖಡಕ್‌ ಸಂದೇಶ ನೀಡಿದ್ದಾರೆ.

Advertisement

ಕಾನೂನು ಸುವ್ಯವಸ್ಥೆ, ಶಾಂತಿ, ಸುಗಮ ಸಂಚಾರ, ಅಕ್ರಮ-ಅಪರಾಧ ಕೃತ್ಯಗಳ ತಡೆ ನಿಟ್ಟಿನಲ್ಲಿ ತಮ್ಮದೇ ವಿಚಾರಧಾರೆಗಳ ಕುರಿತಾಗಿ “ಉದಯವಾಣಿ’ಯೊಂದಿಗೆ ಅವರು ಮಾತನಾಡಿದರು. ಬೆಂಗಳೂರು ನಂತರ ದೊಡ್ಡ ಶಹರ ಹುಬ್ಬಳ್ಳಿ-ಧಾರವಾಡವಾಗಿದೆ. ಇಲ್ಲಿ ಕ್ರಿಕೆಟ್‌ ಬೆಟ್ಟಿಂಗ್‌, ಬಡ್ಡಿ ದಂಧೆ ಸೇರಿದಂತೆ ಅಕ್ರಮ ಚಟುವಟಿಕೆಗಳನ್ನು ಮಟ್ಟಹಾಕಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಆ ನಿಟ್ಟಿನಲ್ಲಿ ಇಲಾಖೆ ಸಿಬ್ಬಂದಿ ಹಾಗೂ ಸಾರ್ವಜನಿಕರಿಂದ ಮಾಹಿತಿ ಪಡೆಯಲಾಗುವುದು. ಇಲಾಖೆಯ ಎಲ್ಲ ಅಧಿಕಾರಿಗಳು, ಸಿಬ್ಬಂದಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸಲಾಗುವುದು. ಅಕ್ರಮ ಹಾಗೂ ಕಾನೂನು ಬಾಹಿರ ಚಟುವಟಿಕೆಗಳಿಗೆ ಅಸ್ಪದ ಕೊಡ ದಂತೆ ಕಟ್ಟುನಿಟ್ಟಿನ ಕ್ರಮದ ನಿಟ್ಟಿ ನಲ್ಲಿ ಅಧಿಕಾರಿಗಳೊಂದಿಗ ಚರ್ಚಿಸುವೆ. ಘಟಕ ವ್ಯಾಪ್ತಿಯ ಎಲ್ಲ ಪೊಲೀಸ್‌ ಠಾಣೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯುವೆ. ಅವಳಿ ನಗರದಲ್ಲಿ ರೌಡಿಶೀಟರ್‌ಗಳು ಮತ್ತು ಬಡ್ಡಿ ಕುಳಗಳನ್ನು ಬೆಳೆಯಲು ಬಿಡಲ್ಲ. ಅಂಥವರು ಕಂಡುಬಂದರೆ ಮುಲಾಜಿಲ್ಲದೆ ಮಟ್ಟಹಾಕಲಾಗುವುದು. ರೌಡಿಗಳು, ಗೂಂಡಾ ಗಳು ಹಾಗೂ ಅಕ್ರಮ ದಂಧೆಕೋರರಿಂದ ಸಾರ್ವಜನಿಕರಿಗೆ ತೊಂದರೆ ಆಗದಂತೆ ನಿಗಾ ವಹಿಸಲಾಗುವುದು. ಪೊಲೀಸ್‌ ಇಲಾಖೆಯನ್ನು ಜನಸ್ನೇಹಿಯನ್ನಾಗಿ ಮಾಡಲಾಗುವುದು ಎಂದರು.

ಬಾಕಿ ಪ್ರಕರಣಗಳ ತನಿಖೆ: ಅವಳಿ ನಗರದಲ್ಲಿ ನಡೆದ ಸರ್ವೇಶಕುಮಾರ ಶೂಟೌಟ್‌ ಪ್ರಕರಣ, ವಿಜಯನಗರ ಮತ್ತು ವಿಶ್ವೇಶ್ವರನಗರದಲ್ಲಿ ನಡೆದ ಬಣವಿ ಅವರ ಹತ್ಯೆ, ಕಾಮತ್‌ ಅವರ ಮನೆಯಲ್ಲಿ ನಡೆದ ದರೋಡೆ ಪ್ರಕರಣಗಳು ಸೇರಿದಂತೆ ಇನ್ನಿತರೆ ಬಾಕಿ ಉಳಿದಿರುವ ಗಂಭೀರ ಪ್ರಕರಣಗಳನ್ನು ಪರಿಶೀಲಿಸಿ, ತನಿಖೆ ಮುಂದುವರಿಸಿ ಆರೋಪಿಗಳ ಪತ್ತೆಗೆ ಪ್ರಯತ್ನಿಸಲಾಗುವುದು ಎಂದು ಹೇಳಿದರು.

ಸುಧಾರಣೆಗೂ ಒತ್ತು: ಅವಳಿ ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಉತ್ತಮಗೊಳಿಸಲು ಹಾಗೂ ಅಪರಾಧ ಪ್ರಕರಣಗಳನ್ನು ಹತೋಟಿಗೆ ತರಲು ಪ್ರಯತ್ನಿಸಲಾಗುವುದು. ಜೊತೆಗೆ ಸಂಚಾರ ವ್ಯವಸ್ಥೆ ಸುಧಾರಣೆಗೂ ಒತ್ತು ಕೊಡುವೆ. ಆ ನಿಟ್ಟಿನಲ್ಲಿ ಅವಶ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.

ರಾಜ್ಯದಲ್ಲಿ ಕಾರ್ಯಾನುಭವ :  ಮೂಲತಃ ರಾಜಸ್ತಾನ ಬಾರ್ಮರ ಜಿಲ್ಲೆಯ ವರಾದ ಲಾಭೂ ರಾಮ ಅವರು 2004ರ ಬ್ಯಾಚ್‌ನ ಐಪಿಎಸ್‌ ಅಧಿಕಾರಿಯಾಗಿದ್ದು, ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ, ಮಂಗಳೂರು, ಬೆಂಗಳೂರು, ಚಿತ್ರದುರ್ಗದಲ್ಲಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದು, ಖಡಕ್‌ ಅಧಿಕಾರಿ ಎಂದೇ ಹೆಸರಾಗಿದ್ದಾರೆ.

Advertisement

 

-ಶಿವಶಂಕರ ಕಂಠಿ

Advertisement

Udayavani is now on Telegram. Click here to join our channel and stay updated with the latest news.

Next