Advertisement

ಸಾರ್ವಜನಿಕರು ಅನಗತ್ಯವಾಗಿ ಮನೆಯಿಂದ ಹೊರ ಬರಬೇಡಿ :ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಎಚ್ಚರಿಕೆ

09:38 PM May 09, 2021 | Team Udayavani |

ಬೆಂಗಳೂರು: ಈ ಬಾರಿ ಲಾಕ್‌ ಡೌನ್‌ ಪರಿಣಾಮಕಾರಿಯಾಗಿ ಯಶಸ್ವಿಗೊಳಿಸಲು ಪೊಲೀಸರು ಪಾಳಿ ಮಾದರಿಯಲ್ಲಿ ಕರ್ತವ್ಯ ನಿರ್ವಹಿಸಲಿದ್ದು, ಸಾರ್ವಜನಿಕರು ಅನಗತ್ಯವಾಗಿ ಹೊರಗಡೆ ಬಾರದೆ ಸಹಕಾರ ನೀಡಬೇಕು ಎಂದು ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಹೇಳಿದರು.

Advertisement

ಉದಯವಾಣಿ ಜತೆ ಮಾತನಾಡಿದ ಅವರು, ಕಳೆದ ವರ್ಷದ ಲಾಕ್‌ ಡೌನ್‌ ನಲ್ಲಿ ಸಂಪೂರ್ಣವಾಗಿ ಎಲ್ಲ ವ್ಯವಹಾರಗಳನ್ನು ಸಂಪೂರ್ಣವಾಗಿ ಬಂದ್‌ ಮಾಡಲಾಗಿತ್ತು. ಆದರೆ, ಈ ಬಾರಿ ಕೈಗಾರಿಕೆ, ವಿಮಾನ, ರೈಲುಗಳ ಓಡಾಟಕ್ಕೆ ಅವಕಾಶ ನೀಡಲಾಗಿದೆ. ಜತೆಗೆ ಕೆಲವೊಂದು ವಾಣಿಜ್ಯ ವಹಿವಾಟು ನಡೆಸಲು ಬೆಳಗ್ಗೆ 6 ಗಂಟೆಯಿಂದ 10 ಗಂಟೆವರೆಗೆ ಅವಕಾಶ ನೀಡಲಾಗಿದೆ. ಅದರಿಂದ ಈ ಬಾರಿ ಲಾಕ್‌ ಡೌನ್‌ ವಿಭಿನ್ನವಾಗಿದೆ. ಆದರೂ ಈ ಬಾರಿಯ ಲಾಕ್‌ ಡೌನ್‌ ಅನ್ನು ಯಶಸ್ವಿಯಾಗಿಸುವ ಹೊಣೆ ನಮ್ಮ ಮೇಲಿದೆ ಎಂದರು.

ಬೆಳಗ್ಗೆ 6ರಿಂದ 10 ಗಂಟೆವರೆಗೆ ಮಾತ್ರ ಸಾರ್ವಜನಿಕರು ಓಡಾಟ ನಡೆಸಬಹುದು. ಅನಂತರ ನಗರದ ಎಲ್ಲ ರಸ್ತೆಗಳಲ್ಲಿ ಪೊಲೀಸರು ನಿಯೋಜನೆಗೊಂಡು ಬ್ಯಾರಿಕೇಡ್‌ ಗಳನ್ನು ಹಾಕಿಕೊಂಡು ತಪಾಸಣೆ ನಡೆಸಲಿದ್ದಾರೆ ಎಂದರು.

ಪಾಳಿ ಮಾದರಿಯಲ್ಲಿ ಕರ್ತವ್ಯ
ಕೆಎಸ್‌ಆರ್‌ಪಿ, ಸಿಎಆರ್‌ ಸೇರಿ ಸುಮಾರು 16 ಸಾವಿರ ಮಂದಿ ಪೊಲೀಸರನ್ನು ನಿಯೋಜಿಸಿಕೊಳ್ಳಲಾಗಿದೆ. ಬೆಂಗಳೂರು ಪ್ರವೇಶ ದ್ವಾರದಲ್ಲಿ ಚೆಕ್‌ ಪೋಸ್‌ಗಳನ್ನು ಹಾಕಿಕೊಳ್ಳಲಾಗಿದೆ. ನಗರ ಪ್ರವೇಶಿಸುವ ಪ್ರತಿಯೊಬ್ಬರು ತಪಾಸಣೆಗೆ ಒಳಗಾಗಲೇ ಬೇಕು. ಇದರೊಂದಿಗೆ ನಗರದಲ್ಲಿ ಪ್ರತಿ ಹಂತದಲ್ಲೂ ಪೊಲೀಸರು ವಾಹನಗಳ ತಪಾಸಣೆ ನಡೆಸಲಿದ್ದಾರೆ. ಬೇರೆ ಜಿಲ್ಲೆಗಳು, ರಾಜ್ಯಗಳ ಪ್ರವಾಸ ಸಂಪೂರ್ಣವಾಗಿ ರದ್ದು ಮಾಡಲಾಗಿದೆ. ಹೀಗಾಗಿ ಬೆಂಗಳೂರಿನಿಂದ ಹೊರಗಡೆ ಹೋಗುವುದು, ಒಳಗಡೆ ಬರುವ ಪ್ರಶ್ನೆಯೇ ಇಲ್ಲ. ಅದಕ್ಕೆ ಆಸ್ಪದವೂ ಇಲ್ಲ. ಒಂದು ವೇಳೆ ಅನಿವಾರ್ಯತೆ ಇದ್ದರೇ ಸೂಕ್ತ ದಾಖಲೆ ತೋರಿಸಿ ಒಳಗಡೆ ಬರಬಹುದು. ಅದು ಹೊರತು ಪಡಿಸಿ ಬೇರೆ ಯಾವುದೇ ಕಾರಣಗಳನ್ನು ನೀಡಿದರೂ ವಿನಾಯಿತಿ ಇರುವುದಿಲ್ಲ ಎಂದು ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಹೇಳಿದರು.

ಇದನ್ನೂ ಓದಿ :ಅಗತ್ಯ ವಸ್ತು ಖರೀದಿಗೆ ವಾಹನ ಬಳಸದೆ ಕಾಲ್ನಡಿಗೆಯಲ್ಲಿ ಬನ್ನಿ: ಕಾರವಾರ ಜಿಲ್ಲಾಧಿಕಾರಿ ಸೂಚನೆ

Advertisement

ಅಷ್ಟು ಮಾತ್ರವಲ್ಲ ಅನಗತ್ಯವಾಗಿ ಓಡಾಡುವವರನ್ನು ಬಂಧಿಸಲಾಗುತ್ತದೆ. ಅವರ ವಾಹನ ಜಪ್ತಿ ಮಾಡಲಾಗುತ್ತದೆ. ಆ ವಾಹನಗಳ ವಿರುದ್ಧ ಈ ಹಿಂದೆ ಯಾವುದಾದರೂ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಇದ್ದರೇ ಅವುಗಳನ್ನು ಈ ಸಂದರ್ಭದಲ್ಲಿಯೇ ದಂಡ ಕಟ್ಟಿ ಕೋರ್ಟ್‌ ಮೂಲಕ ಲಾಕ್‌ ಡೌನ್‌ ಅವಧಿ ಮುಗಿದ ಬಳಿಕ ಬಿಡಿಸಿಕೊಳ್ಳಬೇಕಾಗುತ್ತದೆ. ಹೀಗಾಗಿ ಅನಗತ್ಯವಾಗಿ ಯಾರು ಹೊರಗಡೆ ಬರಬೇಡಿ ಎಂದು ಎಚ್ಚರಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next