Advertisement

ಅರಣ್ಯ ಉಳಿಸಿ,ಬೆಳೆಸುವುದು ಪುಣ್ಯದ ಕೆಲಸ : ಅರಣ್ಯ ಸಂಪತ್ತು ರಕ್ಷಣೆ ಹೊಣೆ ಎಲ್ಲರದ್ದು

11:00 AM Sep 12, 2020 | sudhir |

ಮೈಸೂರು: ನಾಡಿಲ್ಲದೆಕಾಡು ಇರುತ್ತದೆ. ಆದರೆಕಾಡಿಲ್ಲದೇ ನಾಡು ಇರಲಿಕ್ಕೆ ಸಾಧ್ಯವಿಲ್ಲ. ಕಾಡಿನಿಂದ ಹೊರ ಬಂದ ಮಾನವರು ನಾಡಿಗೆ ಪ್ರಾಮುಖ್ಯತೆ ಕೊಡುತ್ತಿರುವುದರಿಂದ ಅರಣ್ಯ ಸಂಪತ್ತು ಕ್ಷೀಣವಾಗುತ್ತಿದೆ ಎಂದು ಮೈಸೂರು ನಗರ ಪೊಲೀಸ್‌ ಆಯುಕ್ತ ಡಾ.ಚಂದ್ರಗುಪ್ತ ಬೇಸರ ವ್ಯಕ್ತಪಡಿಸಿದರು.

Advertisement

ಅಶೋಕಪುರಂನಲ್ಲಿರುವ ಅರಣ್ಯ ಭವನದ ಆವರಣದಲ್ಲಿರುವ ಲೇ.ವೆಂಕಟಸ್ವಾಮಿ ಉದ್ಯಾನವನದಲ್ಲಿ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನದ ಕಾರ್ಯಕ್ರಮದಲ್ಲಿ ಹುತಾತ್ಮರ ಸ್ಮಾರಕಕ್ಕೆ (1966ರಿಂದ 2020ರವರೆಗೆ ರಾಜ್ಯದ ವಿವಿಧೆಡೆ ಕರ್ತವ್ಯದ ವೇಳೆ ಹುತಾತ್ಮರಾದ 50 ಅರಣ್ಯ ಸಿಬ್ಬಂದಿಗಳ ಆತ್ಮಕ್ಕೆ ಶಾಂತಿಕೋರಿ) ಪುಷ್ಪ ನಮನ ಸಲ್ಲಿಸಿ ವಾತನಾಡಿದರು.

ಅರಣ್ಯ ಉಳಿಸಿ-ಬೆಳೆಸುವುದು ಪುಣ್ಯದ ಕೆಲಸವಾಗಿದೆ. ಕಾಡಿನಲ್ಲಿರುವ ಜೀವಿಗಳು, ವನ್ಯಮೃಗಗಳು ರಕ್ಷಿಸುವ ಮೂಲಕ ನಾವು ಜನರಲ್ಲಿ ಜಾಗೃತಿಮೂಡಿಸಬೇಕಿದೆ. ನಾನು ಮತ್ತು ಮಣಿಕಂಠನ್‌ ಅವರು ಆತ್ಮೀಯ ಸ್ನೇಹಿತರು. ಮನುಕುಲ ಉಳಿವು ಜೀವವೈವಿಧ್ಯತೆಯ ಉಳಿವಿಗೆ ಕೆಲಸ ಮಾಡಿದ ಅವರನ್ನು ನೆನೆಪಿಸಿಕೊಳ್ಳುವುದಕ್ಕೆ ಸೀಮಿತವಾಗದೆ ಅವರ ಧ್ಯೇಯಗಳನ್ನು ಪಾಲಿಸಬೇಕಾಗಿದೆ ಎಂದು ಸಲಹೆ ನೀಡಿದರು.

ಹುಲಿ ಯೋಜನೆ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜಗತ್‌ ರಾಮ್‌, ಕಳೆದ ವರ್ಷ ಹುತಾತ್ಮರಾದ ಶಿವಕುಮಾರ್‌, ಎಂ.ಮಹೇಶ್‌ ಸೇವೆ ಬಗ್ಗೆ ಗುಣಗಾನ ಮಾಡಿದರು.

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ.ಹೀರಾಲಾಲ್‌ ಅವರು ಕಳೆದ 54ವರ್ಷಗಳಲ್ಲಿ ಅರಣ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಹುತಾತ್ಮರಾದವರ ಹೆಸರನ್ನು ಹೇಳುವ ಮೂಲಕ ಸ್ಮರಿಸಿದರು. 1991ರ ನವೆಂಬರ್‌ 10ರಂದು ನರಹಂತಕ ವೀರಪ್ಪನ್‌ನ ನಯವಂಚನೆಯ ಚಕ್ರವ್ಯೂಹದಲ್ಲಿ ಸಿಲುಕಿ ವಿಧಿವಶರಾದ ಪಿ.ಶ್ರೀನಿವಾಸ್‌ ಅವರ ಕಾರ್ಯದಕ್ಷತೆ, ರಾಜೀವ್‌ಗಾಂಧಿ ರಾಷ್ಟ್ರೀಯ ಉದ್ಯಾನ ವನದ ಅರಣ್ಯಕ್ಕೆ ಕಾಡ್ಗಿಚ್ಚು ಸಂಭವಿಸಿದ ಸಂದರ್ಭದಲ್ಲಿ ಹಠಾತ್‌ ಕಾಡಾನೆ ದಾಳಿಗೆ ಸಿಲುಕಿ ಹುತಾತ್ಮರಾಗಿದ ವಿಚಾರವನ್ನು ಹೇಳಿದರು. ಇದಕ್ಕೂ ಮೊದಲು ಎಸ್‌.ಮಣಿಕಂಠನ್‌ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ನಂತರ ಪೆರೇಡ್‌ ಮುಖ್ಯಸ್ಥರಿಂದ ಗೌರವ ವಂದನೆ ಸಲ್ಲಿಸಿದ ಬಳಿಕ, ಕ್ರಮವಾಗಿ ಡಾ. ಚಂದ್ರಗುಪ್ತ, ಜಗತ್‌ರಾಮ್‌, ಟಿ.ಹೀರಾಲಾಲ್‌, ಅಜಿತ್‌ ಕುಲಕರ್ಣಿ, ಜೆ. ದೀಪಾ, ಡಾ.ಕೆ.ಸಿ.ಪ್ರಶಾಂತ್‌ ಕುಮಾರ್‌, ಎಂ.ಸಿ. ಅಲೆಗ್ಜಂದಾರ್ ‌ ಸೇರಿದಂತೆ ಹಿರಿಯ ಅಧಿಕಾರಿಗಳು ಹುತಾತ್ಮರಿಗೆ ಹೂಗುತ್ಛ ಸಮರ್ಪಿಸಿದರು.

Advertisement

ಅರಣ್ಯ ಸಂಪತ್ತು ರಕ್ಷೆ ಹೊಣೆ ಎಲ್ಲರದ್ದು
ಹುಣಸೂರು: ಅರಣ್ಯ ಹಾಗೂ ವನ್ಯಜೀವಿ ಸಂಪತ್ತನ್ನು ರಕ್ಷಿಸುವ ಕೆಲಸ ಕೇವಲ ಅರಣ್ಯ ಇಲಾಖೆ ಮಾತ್ರವಲ್ಲ, ಪ್ರತಿಯೊಬ್ಬರ ಹೊಣೆಯಾಗಿದೆ ಎಂದು ನ್ಯಾಯಾಧೀಶ ಬಿ.ಮಧುಸೂದನ್‌ ತಿಳಿಸಿದರು. ನಾಗರಹೊಳೆ ಉದ್ಯಾನದ ಹುಣಸೂರು ಕಚೇರಿ ಆವರಣದಲ್ಲಿ ನಡೆದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯಲ್ಲಿ ಹುತಾತ್ಮರ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಡೆಹ್ರಾಡೂನ್‌ನಲ್ಲಿರುವ ಇಂದಿರಾಗಾಂಧಿ ನ್ಯಾಷನಲ್‌ ಫಾರೆಸ್ಟ್‌ ಅಕಾಡೆಮಿಯಲ್ಲಿ ದೇಶದ ಅರಣ್ಯ ಸಂಪತ್ತಿನ ಕುರಿತು ಅತ್ಯುತ್ತಮ ಮಾಹಿತಿ ಇದ್ದು, ಒಮ್ಮೆಯಾದರೂ ಎಲ್ಲರೂ ಅಲ್ಲಿಗೆ ಭೇಟಿ ನೀಡಿ ಮಾಹಿತಿ ಪಡೆಯಬೇಕೆಂದರು.

ಉದ್ಯಾನವನದ ಡಿಸಿಎಫ್‌ ಡಿ.ಮಹೇಶ್‌ಕುಮಾರ್‌ ಮಾತನಾಡಿ, ಕೊರೊನಾ ನಡುವೆಯೂ ಇಲಾಖೆ ಸಿಬ್ಬಂದಿ
ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಅರಣ್ಯ ಸಂಪತ್ತನ್ನು ಉಳಿಸುವ ನಿಟ್ಟಿನಲ್ಲಿ ನಾಗರಹೊಳೆ ಯಲ್ಲಿ ಆನೆದಾಳಿಗೆ ಸಿಲುಕಿ ಹುತಾತ್ಮರಾದ ಮಣಿಕಂಠನ್‌ ನಮಗೆ ಸ್ಫೂರ್ತಿಯಾಗಿದ್ದಾರೆ ಎಂದು ಸ್ಮರಿಸಿದರು. ಎಸಿಎಫ್‌ ಸತೀಶ್‌ ಮಾತನಾಡಿ, ವನ್ಯಜೀವಿ ಮತ್ತು ಅರಣ್ಯ ಸಂರಕ್ಷಣೆಗೆ ಪ್ರಾಣತ್ಯಾಗ ಮಾಡಿದ ಅಧಿಕಾರಿ ಗಳು ಹಾಗೂ ಸಿಬ್ಬಂದಿಯನ್ನು ಸ್ಮರಿಸಲು ಈ ದಿನವನ್ನು ಆಚರಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಎಸಿ ಬಿ.ಎನ್‌.ವೀಣಾ, ತಹಶೀಲ್ದಾರ್‌ ಐ.ಇ.ಬಸವರಾಜು, ಡಿವೈಎಸ್ಪಿ ಕೆ.ಎಸ್‌.ಸುಂದರರಾಜ್‌, ಎಸಿಎಫ್‌ಗಳಾದ ಸತೀಶ್‌, ಪೌಲ್‌ಆಂಟನಿ, ಆರ್‌ಎಫ್‌ ಒಗಳಾದ ಕಿರಣ್‌ಕುಮಾರ್‌, ರವೀಂದ್ರ, ಅಮಿತ್‌ಗೌಡ, ಸಂದೀಪ್‌, ಗಿರೀಶ್‌ ಚೌಗುಲೆ ಇತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next