Advertisement

ಕಾಂಗ್ರೆಸ್ ಶಾಸಕಿ ಸಂಬಂಧಿಗೆ ಪೊಲೀಸ್ ಆಯುಕ್ತರಿಂದ ಥಳಿತ ಆರೋಪ

01:31 PM Sep 02, 2021 | Team Udayavani |

ಕಲಬುರಗಿ: ಕಾಂಗ್ರೆಸ್ ಶಾಸಕಿ ಖನೀಜ್ ಫಾತೀಮಾ ಅವರನ್ನು ಕಳೆದ ರಾತ್ರಿ ಮನೆಗೆ ಬಿಡಲು ತೆರಳುತ್ತಿದ್ದಾಗ ನಗರ ಪೊಲೀಸ್ ಆಯುಕ್ತ ಡಾ.ವೈ.ಎಸ್.ರವಿಕುಮಾರ್ ಅವರು ಕಾರು ತಡೆದು ತಮಗೆ ಥಳಿಸಿದ್ದಾರೆ ಎಂದು ಶಾಸಕರ ಸಹೋದರ ಸಂಬಂಧಿ, ಕಾಂಗ್ರೆಸ್ ಮುಖಂಡ ಆದಿಲ್ ಸುಲೇಮಾನ್ ಆರೋಪಿಸಿದರು.

Advertisement

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಅತ್ತೆಯವರಾದ ಖನೀಜ್ ಫಾತೀಮಾ ಅವರನ್ನು ಮನೆಗೆ ಬಿಟ್ಟು ಬರಲು ಕಾರಿನಲ್ಲಿ ತೆರಳಲಾಗುತ್ತಿತ್ತು. ಈ ವೇಳೆ ಮಾರ್ಗ ಮಧ್ಯೆ ಹಫ್ತ್ ಗುಂಬಜ್ ಬಳಿ ಪೊಲೀಸ್ ಆಯಕ್ತರು ಕಾರು ತಡೆದು ಹಲ್ಲೆ ಮಾಡಿದರು ಎಂದು ದೂರಿದರು.

ಕಾರಿನಲ್ಲಿ ಶಾಸಕರು ಇದ್ದಾರೆ. ಅವರ ಅಳಿಯ ಎಂದು ಹೇಳಿದೆ. ಆದರೂ, ಪೊಲೀಸ್ ಆಯುಕ್ತ ರವಿ ಕುಮಾರ್ ಕೇಳಿಲ್ಲ. ಹೀಗಾಗಿ ಶಾಸಕರನ್ನು ಕಾರಿನಲ್ಲಿ ಮನೆಗೆ ಕಳುಹಿಸಲಾಯಿತು. ನಂತರ ನನ್ನನ್ನು ಹಿಡಿದು ಶಾಸಕರ ಹೆಸರು ಹೇಳಿದ ಮೇಲೂ ತಮಗೆ ಮನಬಂದಂತೆ ಥಳಿಸಿದರು. ಅಲ್ಲದೇ, ತಮ್ಮ ಪೊಲೀಸ್ ಸಿಬ್ಬಂದಿಗೆ ನನಗೆ ಹೊಡೆದು ಕಾಲು ಮುರಿಯುವಂತೆ ಹೇಳಿದರು. ಅವರು ಹೊಡೆಯಲು ಹಿಂದೆ-ಮುಂದೆ ನೋಡಿದಾಗ ಆಯುಕ್ತರೇ ಪೊಲೀಸರಿಗೂ ಥಳಿಸಿದರು ಎಂದರು.

ಶಾಸಕಿ ಖನೀಜ್ ಫಾತೀಮಾ ಮಾತನಾಡಿ, ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಬಿಜೆಪಿಯವರಿಗೆ ಸೋಲುವ ಭಯ ಕಾಡುತ್ತಿದೆ. ಹೀಗಾಗಿ ಪೊಲೀಸರ ಮೇಲೆ ಒತ್ತಡ ಹೇರಿ,‌ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ಮೇಲೆ ದೌರ್ಜನ್ಯ ಎಸಗಿಸುವ ಕೆಲಸವಾಗುತ್ತದೆ. ಚುನಾವಣೆ ಗೆಲ್ಲಲು ಬಿಜೆಪಿಯವರು ಏನಾಬೇಕಾದರೂ ಮಾಡುತ್ತಾರೆ ಎಂಬುದನ್ನು ಇದು ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ:ಕಚ್ಚಾ ತೈಲದ ಬೆಲೆಯ ಮೇಲೆ ಮಾತ್ರ ಪೆಟ್ರೋಲ್, ಡೀಸೆಲ್‌, ಗ್ಯಾಸ್ ಬೆಲೆ ನಿರ್ಧಾರವಾಗದು: ಸಿಎಂ

Advertisement

ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ, ಈ ಚುನಾವಣೆಯಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಬಿಜೆಪಿ ಕೈಗೊಂಬೆಯಾಗಿ ಕೆಲಸ ಮಾಡುತ್ತಿದೆ. ಬಿಜೆಪಿಯವರು ಹೇಳಿದಂತೆ ಪೊಲೀಸರು ಕೇಳುತ್ತಿದ್ದಾರೆ. ಯಾವುದೇ ವ್ಯಕ್ತಿಗೆ ಹಲ್ಲೆ ಮಾಡುವ ಅಧಿಕಾರ ಪೊಲೀಸರಿಗೆ ಇಲ್ಲ. ಒಂದೊಮ್ಮೆ ನಿಯಮ ಉಲ್ಲಂಘಿಸಿದ್ದರೆ ಪ್ರಕರಣ ದಾಖಲಿಸಬೇಕಿತ್ತು ಎಂದರು.

ಮಾಜಿ ಸಚಿವ ದಿ.ಖಮರುಲ್ ಇಸ್ಲಾಂ ಮತ್ತು ಹಾಲಿ ಶಾಸಕಿ ಖನೀಜ್ ಫಾತೀಮಾ ಅವರ ಕುಟುಂಬ ಸದಸ್ಯರ ಮೇಲಿನ‌ ಈ ಹಲ್ಲೆ ಪ್ರಕರಣ ತಾರ್ಕಿಕ ಅಂತ್ಯ ಕಾಣಿಸುತ್ತೇವೆ. ಚುನಾವಣಾ ಆಯುಕ್ತರು, ಗೃಹ ಸಚಿವರಿಗೆ ಈ ಸಂಬಂಧ ಪಕ್ಷದಿಂದ ದೂರು ನೀಡುತ್ತೇವೆ. ಬಿಜೆಪಿಯವರು ಪಾಲಿಕೆ ಚುನಾವಣೆಯಲ್ಲಿ ತಮ್ಮ ಪಕ್ಷ ಸೋಲುವ ಭಯದಿಂದ ಹೀಗೆ ಮಾಡಿಸಿದ್ದಾರೆ. ಶುಕ್ರವಾರ ಚುನಾವಣೆ ಇದ್ದುದರಿಂದ ನಾವು ಪ್ರತಿಭಟನೆ ಮಾಡುತ್ತಿಲ್ಲ. ಸುಸೂತ್ರವಾಗಿ ಚುನಾವಣೆ ನಡೆಸುವುದಕ್ಕೆ ನಮ್ಮ ಸಹಕಾರ ಇರಲಿದೆ ಎಂದರು.

ಆರೋಪ ನಿರಾಕರಿಸಿದ ಪೊಲೀಸ್ ಆಯುಕ್ತರು: ಈ ಹಲ್ಲೆ ಪ್ರಕರಣ ಸಂಬಂಧ ತಮ್ಮ ವಿರುದ್ಧ ಕೇಳಿ ಬಂದ ಆರೋಪವನ್ನು ಪೊಲೀಸ್ ಆಯುಕ್ತ ಡಾ.ರವಿಕುಮಾರ್ ತಳ್ಳಿ ಹಾಕಿದ್ದಾರೆ‌‌. ಈ ಘಟನೆ ನಡೆದ ಸ್ಥಳಕ್ಕೆ ನಾನು ರಾತ್ರಿ ಹೋಗಿಯೇ ಇಲ್ಲ. ಈಗಾಗಲೇ ಚುನಾವಣೆ ಬಹಿರಂಗ ಪ್ರಚಾರ ಮುಕ್ತಾಯವಾಗಿದ್ದರಿಂದ ಪೊಲೀಸರು ಅವರಿಗೆ ಎಚ್ಚರಿಕೆ ನೀಡಿ ಕಳಿಸಿರಬಹುದು ಅಷ್ಟೇ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next