ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ 26 ವಿಧಾನಸಭಾ ಕ್ಷೇತ್ರಗಳಲ್ಲಿ ಪೊಲೀಸ್ ಬಿಗಿ ಭದ್ರತೆ ನಿಯೋಜಿಸಿದ್ದು, ಸಾರ್ವ ಜನಿಕರು ಮುಕ್ತ, ನಿರ್ಭೀತಿಯಿಂದ ಮತ ಚಲಾಯಿಸಬಹುದು ಎಂದು ನಗರ ಪೊಲೀಸ್ ಆಯುಕ್ತ ಟಿ. ಸುನಿಲ್
ಕುಮಾರ್ ಹೇಳಿದ್ದಾರೆ.
ಶುಕ್ರವಾರ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, 26 ವಿಧಾನಸಭಾ ಕ್ಷೇತ್ರಗಳಲ್ಲಿ 7,056 ಮತಗಟ್ಟೆಗಳಿದ್ದು, ಈ ಪೈಕಿ 1,469 ಮತಕೇಂದ್ರಗಳನ್ನು ಸೂಕ್ಷ್ಮ, ಅತೀ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ.
ಇನ್ನುಳಿಂದತೆ 6,008 ಮತಗಟ್ಟೆಗಳು ಸಾಮಾನ್ಯ ಮತಕೇಂದ್ರಗಳಾಗಿವೆ. ಈ ಹಿನ್ನೆಲೆಯಲ್ಲಿ 10,500 ನಗರ ಪೊಲೀಸರು, 44 ಕಂಪೆನಿಗಳ ಕೇಂದ್ರೀಯ ಮೀಸಲು ಪಡೆಯ 4,500 ಮಂದಿ ಸಿಬ್ಬಂದಿ, 35 ಕೆಎಸ್‌ಆರ್‌ಪಿ ತುಕಡಿ, 550 ಸೆಕ್ಟರ್ ಮೊಬೈಲ್(ಪಿಎಸ್‌ಐ), 150 ಸೂಪರ್ ವೈಸರಿ ಮೊಬೈಲ್(ಪಿಐ), 50 ಎಸಿಪಿ ಮೊಬೈಲ್ ಪಾರ್ಟಿ, ಮತಕ್ಷೇತ್ರದ ಉಸ್ತುವಾರಿಗೆ 18 ಡಿಸಿಪಿಗಳು, ಒಬ್ಬರು ಜಂಟಿ ಪೊಲೀಸ್ ಆಯುಕ್ತರು, ನಾಲ್ವರು ಅಪರ ಪೊಲೀಸ್ ಆಯುಕ್ತರು ಭದ್ರತೆಯ ಉಸ್ತುವಾರಿ ವಹಿಸಲಿದ್ದಾರೆ. ಒಟ್ಟಾರೆ ಶೇ.60ರಷ್ಟು ಮತಗಟ್ಟೆಗಳಿಗೆ ಕೇಂದ್ರೀಯ ಮೀಸಲು ಪಡೆಗಳ ಬಂದೋಬಸ್ತ್ ನಿಯೋಜಿಸಲಾಗಿದೆ ಎಂದರು.
ಪ್ರತಿ 15ರಿಂದ 20 ಮತಗಟ್ಟಿಗಳಿಗೆ ಒಂದು ಸೆಕ್ಟರ್ ಎಂದು ಗುರುತಿಸಿ, ಸೆಕ್ಟರ್ ಮೊಬೈಲ್‌ಗಳಿಗೆ ಪಿಎಸ್‌ಐ ಮಟ್ಟದ
ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಪ್ರತಿ 4 ಸೆಕ್ಟರ್ ಮೊಬೈಲ್‌ಗಳ ಮೇಲ್ವಿಚಾರಣೆಗೆ ಒಬ್ಬರು ಪೊಲೀಸ್
ಇನ್‌ಸ್ಪೆಕ್ಟರ್‌ರನ್ನು ಸೂಪರವೈಸರಿ ಮೊಬೈಲ್ ಆಗಿ ನೇಮಿಸಲಾಗಿದೆ ಎಂದು ತಿಳಿಸಿದರು. ಸಿಸಿಬಿ ಡಿಸಿಪಿ ರಾಮ್‌ನಿವಾಸ್ ಸೆಪಟ್ ಉಪಸ್ಥಿತರಿದ್ದರು.