ಮೈಸೂರು: ಝಗಮಗಿಸುವ ವಿದ್ಯುದ್ದೀಪಾಲಂಕಾರ ದಿಂದ ಇಂದ್ರಲೋಕದಂತೆ ಕಂಗೊಳಿಸುತ್ತಿದ್ದ ಮೈಸೂರು ಅರಮನೆ ಗುರುವಾರ ಪೊಲೀಸರ ವಾದ್ಯಗೋಷ್ಠಿಯಲ್ಲಿ ಮಿಂದೆತ್ತಿತು. ವರುಣನ ಸಿಂಚನದ ಜತೆಗೆ ಅಲೆ ಅಲೆಯಾಗಿ ತೇಲಿಬಂದ ಪೊಲೀಸ್ ವಾದ್ಯವೃಂದದ ಶಾಸ್ತ್ರೀಯ ಹಾಗೂ ಪಾಶ್ಚಿಮಾತ್ಯ ವಾದ್ಯ ಸಂಗೀತ ಸುಧೆ ಕೇಳುಗರಿಗೆ ಮುದ ನೀಡಿತು.
ಇಷ್ಟು ದಿನ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆಯಾಗುತ್ತಿದ್ದ ಅರಮನೆ ಆವರಣ ಸೋಮವಾರ ಸಂಜೆ ಆರಕ್ಷಕರ ವಿಶೇಷ ನಾದಸ್ವರದಿಂದ ತುಂಬಿತ್ತು. ಶುಶ್ರಾವ್ಯ ವಾದ್ಯಗೋಷ್ಠಿ ಆಲಿಸಿದ ಸಾರ್ವಜನಿಕರು ಪೊಲೀಸರ ವಿಶೇಷ ವಾದ್ಯಗೋಷ್ಠಿಗೆ ತಲೆದೂಗಿದರು.
ಇದನ್ನೂ ಓದಿ:–
ಮನುಷ್ಯನನ್ನು ಮೃಗವಾಗಿಸಿದೆ ಜಾತಿ
ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಅರಮನೆ ಆವರಣದಲ್ಲಿ ಆಯೋಜಿಸಿರುವ ಸಾಂಸ್ಕೃತಿಕ ಕಾರ್ಯಕ್ರಮದ 5ನೇ ದಿನವಾದ ಸೋಮವಾರ ಪೊಲೀಸ್ ಬ್ಯಾಂಡ್ ವಾದ್ಯಮೇಳದಲ್ಲಿ ಪೊಲೀಸ್ ವಾದ್ಯವೃಂದ ಶಿಸ್ತುಬದ್ಧವಾಗಿ ನುಡಿಸಿ ಜನಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾಯಿತು. ಕರ್ನಾಟಕ ವಾದ್ಯವೃದ ನುಡಿಸಿದ ಸ್ವಾಮಿ ನಿನ್ನೇ ಕೋರಿ, ಮಹಾಗಣಪತಿಂ, ಗಾನಮೂರ್ತಿ, ಶ್ರೀ ಚಾಮುಂಡೇಶ್ವರಿ ಭಜರೆ, ಸರಸಿಜನಾಭ, ಶ್ರೀ ಕಾಂತೀಮತಿ ಸಂಗೀತ ವಾದನಕ್ಕೆ ಪ್ರೇಕ್ಷಕರು ಪರವಶರಾದರು.
ಆಂಗ್ಲ ವಾದ್ಯವೃಂದವರು ಜೇಮ್ Õಬಾಂಡ್, ಪೈರಟ್ಸ್ ಆಫ್ ದಿ ಕೆರಿಬಿಯನ್, ಲ್ಯಾಟಿನ್ ಟಾಪ್ ಸೀರೀಸ್, ಬೆಲ್ಲಾಬಾವ್, ವೆಲ್ ವೆಸ್ಟ್ ಥೀಮ್ಸ್, ಅಬೈಡ್ ವಿತ್ ಮಿ ಸೇರಿದಂತೆ ಮುಂತಾದ ಗೀತೆಗಳನ್ನು ನುಡಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಇದೇ ಸಂದರ್ಭದಲ್ಲಿ ಸುಪ್ರಸಿದ್ಧ ಸಂಗೀತಗಳನ್ನು ಪ್ರಸ್ತುತ ಪಡಿಸಿದ ಕರ್ನಾಟಕ ಹಾಗೂ ಆಂಗ್ಲ ವಾದ್ಯವೃಂದವರಿಗೆ ಅತಿಥಿ ಗಣ್ಯರಿಂದ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್, ಡಿಸಿಪಿ ಪ್ರದೀಪ್ ಗುಂಟಿ ಇತರರಿದ್ದರು.