ಕಾರ್ಕಳ: ಹೆಚ್ಚುತ್ತಿರುವ ಕಳ್ಳತನ, ಸುಲಿಗೆ ಇತ್ಯಾದಿ ಅಪರಾಧ ಪ್ರಕರಣ ಕಡಿಮೆಗೊಳಿಸಲು ಪಣ ತೊಟ್ಟಿರುವ ಕಾರ್ಕಳ ಪೊಲೀಸರು ಹಳ್ಳಿಗಳ ಕಡೆಗೆ ಹೆಜ್ಜೆ ಹಾಕುತ್ತಿದ್ದು, ಪಂಚಾಯತ್ ಮಟ್ಟದಲ್ಲಿ ಸಾರ್ವಜನಿಕರಲ್ಲಿ ಸತತ ಜಾಗೃತಿ ಮೂಡಿಸಿ ಅಪರಾಧವನ್ನು ಹತೋಟಿಗೆ ತರುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ನಗರ ಹಾಗೂ ಗ್ರಾಮಾಂತರ ಠಾಣೆ ಸರಹದ್ದಿನ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಅಪರಾಧ ತಡೆ, ನಿಯಂತ್ರಣ ಕುರಿತು ಅರಿವು ಮೂಡಿಸುವ ಕೆಲಸವನ್ನು ಪೊಲೀಸರು ನಡೆಸುತ್ತಿದ್ದಾರೆ. ಅಪರಾಧ ತಡೆಗೆ ಜನ ಜನಜಾಗೃತಿ ಗೊಳ್ಳುವುದೇ ಹೆಚ್ಚು ಪರಿಣಾಮಕಾರಿ ಎಂದು ಅರಿತಿರುವ ಪೊಲೀಸರು ಈ ನಿಟ್ಟಿನಲ್ಲಿ ಗಟ್ಟಿ ಹೆಜ್ಜೆ ಇರಿಸಿದ್ದಾರೆ. ಪ್ರತಿ ಗ್ರಾ.ಪಂ.ಗಳಿಗೆ ತೆರಳಿ ಪಂಚಾಯತ್‌ನವರ ಸಹಕಾರ ಪಡೆದು ಸಭೆಗಳನ್ನು ನಡೆಸಿ ಜನರಲ್ಲಿ ಅಪರಾಧ ತಡೆಗಟ್ಟುವ ಕುರಿತು ಮಾಹಿತಿ ನೀಡುತ್ತಿದ್ದಾರೆ.
ತಾಲೂಕಿನ ಪ್ರತಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಜನಜಾಗೃತಿ ಮೂಡಿಸಲು ಪೊಲೀಸರು ನಿರ್ಧರಿಸಿದ್ದಾರೆ, ಹೇಗಾದರೂ ಮಾಡಿ ಅಪರಾಧ ಪ್ರಮಾಣಕ್ಕೆ ಕಡಿವಾಣ ಹಾಕಲೇಬೇಕು ಎಂದು ನಿರ್ಧಾರಕ್ಕೆ ಬಂದಿರುವ ಪೊಲೀಸರು ಸಾರ್ವಜನಿಕ ಸ್ಥಳಗಳಲ್ಲಿ ಕೂಡ ಗ್ರಾಮಸ್ಥರನ್ನು ಒಂದು ಕಡೆ ಸೇರಿಸಿ ಅಲ್ಲಿ ಕೂಡ ಅಪರಾಧ ತಡೆ ಮತ್ತು ಮುನ್ನೆಚ್ಚರಿಕೆ ವಹಿಸುವ ವಿಧಾನಗಳ ಕುರಿತು ಮಾಹಿತಿ ನೀಡುತ್ತಿದ್ದಾರೆ. ನಗರ, ಗ್ರಾಮಾಂತರ ಎರಡೂ ಠಾಣೆ ವ್ಯಾಪ್ತಿ ಯಲ್ಲೂ ಈ ಕಾರ್ಯಗಳು ಪೊಲೀಸರಿಂದ ಈಗ ನಡೆಯುತ್ತಿವೆ.
ನಾಗರಿಕರಲ್ಲಿ ಭೀತಿ ದೂರಗೊಳಿಸು ವುದು ಮತ್ತು ಕಳ್ಳತನ, ಅಪರಾಧ ಕೃತ್ಯಗಳು ನಡೆಯದಂತೆ ವಹಿಸಬೇಕಿರುವ ಮುನ್ನೆಚ್ಚರಿಕೆ ಕುರಿತು ತಿಳಿವಳಿಕೆ ಮೂಡಿಸ ಲಾಗುತ್ತಿದೆ. ಹಿರಿಯ ನಾಗರಿಕರು ಮತ್ತು ಒಂಟಿಯಾಗಿ ವಾಸ್ತವ್ಯ ಹೊಂದುವವರಲ್ಲಿ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದು ಗ್ರಾಮದಲ್ಲಿ ಕಾನೂನಿನ ಚೌಕಟ್ಟಿನೊಳಗೆ ಸಹಕರಿಸುವುದು ಇತ್ಯಾದಿ ಕುರಿತು ಕಾನೂನಿನ ಅರಿವು ಮೂಡಿಸುತ್ತಿದ್ದಾರೆ. ಪೊಲೀಸರು, ಬೀಟ್ ಪೊಲೀಸರು ಮಾತ್ರವಲ್ಲದೆ ಸ್ವತಃ ಪಿಎಸ್‌ಐಗಳೇ ಜನಜಾಗೃತಿ ಮೂಡಿಸುತ್ತಿದ್ದಾರೆ.
ಅಯ್ಯಪ್ಪನಗರ, ಹಿರ್ಗಾನ ಗ್ರಾ.ಪಂ. ಕುಕ್ಕುಂದೂರು ಗ್ರಾ.ಪಂ ನಕ್ರೆ ಮುಂತಾದ ಕಡೆ ಪೊಲೀಸರು ಜಾಗೃತಿ ನಡೆಸಿದ್ದು , ನಾಗರಿಕರಿಂದಲೂ ಉತ್ತಮ ಸ್ಪಂದನೆ ದೊರಕುತ್ತಿದೆ. ಪೊಲೀಸರು ಮತ್ತು ಸಾರ್ವಜನಿಕರು ಜನಸ್ನೇಹಿಯಾಗಿ ಅಪರಾಧ ತಡೆಗೆ ಕೆಲಸ ನಿರ್ವಹಿಸಿದಲ್ಲಿ ಸಮಾಜದಲ್ಲಿ ಕಾನೂನು ಸುವ್ಯವಸ್ಥೆಗಳು ಸರಿದಾರಿಗೆ ಬರುತ್ತದೆ. ಈ ನಿಟ್ಟಿ ನಲ್ಲಿ ಈ ವಾತಾವರಣ ಉತ್ತಮ ಬೆಳವಣಿಗೆಯಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಠಾಣೆಗಳ ವ್ಯಾಪ್ತಿಯಲ್ಲಿ ಅಪರಾಧ ಪ್ರಕರಣಗಳು ನಿಯಂತ್ರಣಕ್ಕೆ ಬರುವು ದಲ್ಲದೆ ಅಪರಾಧ ಕೃತ್ಯಗಳಲ್ಲಿ ತೊಡಗಿಸಿ ಕೊಳ್ಳುವ ಕಿಡಿಗೇಡಿಗಳಿಗೂ ಎಚ್ಚರಿಕೆಯ ಸಂದೇಶ ರವಾನಿಸಿದಂತಾಗುತ್ತದೆ.
ಇತ್ತೀಚೆಗೆ ಕಾರ್ಕಳ ತಾಲೂಕಿನಲ್ಲಿ ಕಳ್ಳತನ ಸಹಿತ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿರುವುದು ನಾಗರಿಕರಲ್ಲಿ ಆತಂಕ ಉಂಟು ಮಾಡಿದೆ. ಕೊರೊನೋತ್ತರ ಬಳಿಕ ನಗರ ಮತ್ತು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಅಪರಾಧ ಪ್ರಕರಣ ಹೆಚ್ಚಿರುವುದು ನಾಗರಿಕರು, ಪೊಲೀಸರ ಸಹಿತ ಎಲ್ಲರಲ್ಲೂ ಆತಂಕ ಹುಟ್ಟಿಸಿದೆ. ಪೊಲೀಸರಿಗೆ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕುವುದು, ಪ್ರಕರಣ ಭೇದಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ.
ಪಂಚಾಯತ್ ಮಟ್ಟದಲ್ಲಿ ಜಾಗೃತಿ ಚುರುಕು
ರಾತ್ರಿ ಹಗಲು ಎರಡೂ ಹೊತ್ತಿನಲ್ಲಿ ಕಳ್ಳತನ ಇತ್ಯಾದಿ ಪ್ರಕರಣಗಳು ತಾಲೂಕಿನಲ್ಲಿ ಹೆಚ್ಚುತ್ತಿರುವುದನ್ನು ತಡೆಗಟ್ಟಲು ಸಾರ್ವಜನಿಕರು, ಜನಪ್ರತಿನಿಧಿಗಳ ಸಹಕಾರ ಅಗತ್ಯ. ಅದಕ್ಕೆಂದು ಪಂಚಾಯತ್ ಮಟ್ಟದಲ್ಲಿ ಈ ಜಾಗೃತಿಯನ್ನು ಚುರುಕುಗೊಳಿಸಿದ್ದೇವೆ. ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸುವಲ್ಲಿ ಪೊಲೀಸರು, ನಾಗರಿಕರೂ ಜತೆಯಾಗಿ ಕಾರ್ಯವೆಸಗಿದಾಗ ಅಪರಾಧ ಕೃತ್ಯವನ್ನು ಮಟ್ಟ ಹಾಕಲು ಸಾಧ್ಯ.
-ತೇಜಸ್ವಿ, ನಗರ ಠಾಣೆ ಸಬ್‌ಇನ್ಸ್‌ಪೆಕ್ಟರ್
-ಮಧು ಬಿ., ನಗರ ಠಾಣೆ ಸಬ್‌ಇನ್ಸ್‌ಪೆಕ್ಟರ್