ಬೆಂಗಳೂರು: ವೀಸಾ ಶುಲ್ಕ ಪಾವತಿಸುವಂತೆ ಸೂಚಿಸಿದ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಲಸೆ ವಿಭಾಗದ ಅಧಿಕಾರಿ(ಇಮಿಗ್ರೇಷನ್) ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ದಕ್ಷಿಣ ಕೊರಿಯಾ ಸ್ವಿಗ್ವಾನ್ ಪಾರ್ಕ್ ಎಂಬಾತನನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸಿಗ್ವಾನ್ ಪಾರ್ಕ್ ಬಂಧಿತ ಆರೋಪಿ. ಈ ಕುರಿತು ವಿಮಾನ ನಿಲ್ದಾಣದ ವಲಸೆ ಅಧಿಕಾರಿ ವೈ.ಎಸ್.ಸೈನಿ ಎಂಬುವರು ಹಲ್ಲೆಗೊಳಗಾಗಿದ್ದು, ಅವರು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬ್ರೆಜಿಲ್‌ನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಮಂಗಳವಾರ ಸಂಜೆ 7.30ಕ್ಕೆ ಬಂದಿದ್ದ ಸಿಗ್ವಾನ್ ಪಾರ್ಕ್, ನಿಲ್ದಾಣದಿಂದ ಹೊರಗೆ ಬರುತ್ತಿದ್ದ. ಆತನನ್ನು ತಡೆದಿದ್ದ ವಲಸೆ ಅಧಿಕಾರಿ ವೈ.ಎಸ್.ಸೈನಿ ಪರಿಶೀಲನೆ ನಡೆಸಿದ್ದರು. ವೀಸಾ ಮೇಲೆ ಬಂದರೆ ಶುಲ್ಕ ಕಟ್ಟಬೇಕು. ಅದರಂತೆ ನಿಗದಿತ ಶುಲ್ಕ ಪಾವತಿಸಿ ವೀಸಾ ತೆಗೆದುಕೊಂಡು ಹೊರಗೆ ಹೋಗುವಂತೆ ಆರೋಪಿಗೆ ಸೂಚಿಸಿದ್ದಾರೆ.
ಈ ವೇಳೆ ಆರೋಪಿ, ಶುಲ್ಕ ಪಾವತಿಗಾಗಿ ಕ್ರೆಡಿಟ್ ಕಾರ್ಡ್ ಕೊಟ್ಟಿದ್ದ. ಸ್ವೆ„ಪಿಂಗ್ ಯಂತ್ರದಲ್ಲಿ ಕಾರ್ಡ್ ಕೆಲಸ ಮಾಡಿಲ್ಲ. ಹೀಗಾಗಿ ಆರೋಪಿ, ನಿಲ್ದಾಣದಿಂದ ಹೊರಗೆ ಹೋಗಿ ಎಟಿಎಂ ಕೇಂದ್ರದಿಂದ ಹಣ ತರುವುದಾಗಿ ಅಧಿಕಾರಿ ಬಳಿ ಕೇಳಿಕೊಂಡಿದ್ದಾನೆ.
ಇದಕ್ಕೆ ಒಪ್ಪದ ಅಧಿಕಾರಿ, ರಾತ್ರಿ 11 ಗಂಟೆವರೆಗೂ ಆರೋಪಿಯನ್ನು ಹೊರಗೆ ಬಿಟ್ಟಿಲ್ಲ. ಇದಕ್ಕೆ ಕೋಪಗೊಂಡು ಆರೋಪಿ, ಸೈನಿ ಅವರ ಮೇಲೆ ಹಲ್ಲೆ ನಡೆಸಿದ್ದ. ಇದರಿಂದಾಗಿ ಸೈನಿ ಅವರ ಕಣ್ಣಿಗೆ ಗಾಯವಾಗಿದೆ. ಕೂಡಲೇ ಇತರೆ ಅಧಿಕಾರಿಗಳು ಆರೋಪಿಯನ್ನು ವಶಕ್ಕೆ ಪಡೆದುಕೊಂಡು, ಸೈನಿ ಅವರನ್ನು ನಿಲ್ದಾಣದ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಪೊಲೀಸರು ಹೇಳಿದರು.