Advertisement

ರೌಡಿಶೀಟರ್‌ ಮನೆಗಳ ಮೇಲೆ ಪೊಲೀಸರ ದಾಳಿ

10:22 AM Aug 09, 2020 | Suhan S |

ನೆಲಮಂಗಲ: ಮದ್ಯ ಮತ್ತು ಮಾದಕ ದ್ರವ್ಯ ವ್ಯಸನಿಗಳಿಂದ ಯುವಕನ ಹತ್ಯೆಯಾದ ಬೆನ್ನಲ್ಲೇ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನೇತೃತ್ವದಲ್ಲಿ ರೌಡಿಶೀಟರ್‌ ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದು ಖಡಕ್‌ ಎಚ್ಚರಿಕೆ ನೀಡಿದ್ದಾರೆ.

Advertisement

ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಕ್ರೀಡಾಂಗಣದಲ್ಲಿ ನಡೆದ ರೌಡಿಶೀಟರ್‌ಗಳ ಪರೇಡ್‌ನ‌ಲ್ಲಿ ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಡಿ.ಚೆನ್ನಣ್ಣನವರ್‌ ಮಾಹಿತಿ ಪಡೆದು ಕೆಲವರಿಗೆ ಉತ್ತಮ ಜೀವನ ನಡೆಸುವಂತೆ ಬುದ್ಧಿ ಹೇಳಿ ಅಪರಾಧ ಪ್ರಕರಣದಲ್ಲಿ ಮುಂದು ವರಿದವರಿಗೆ ಗೂಂಡಾ ಕಾಯ್ದೆ ಅಥವಾ ಗಡಿಪಾರು ಮಾಡುವ ಎಚ್ಚರಿಕೆ ನೀಡಿದರು.

ಜೀವನ ಮಾಡಲು ಬಿಡಿ: ಒಂದೇ ಪ್ರಕರಣ, ಹತ್ತಾರು ವರ್ಷಗಳಿಂದ ಯಾವುದೇ ಪ್ರಕರಣಗಳಲ್ಲಿ ಭಾಗಿಯಾಗಿಲ್ಲದ ಹಾಗೂ ಸಮಾಜಮುಖೀಯಾಗಿ ಕೆಲಸ ಮಾಡುತ್ತಿರುವ ವ್ಯಕ್ತಿಗಳ ಮೇಲೆ ರೌಡಿಶೀಟರ್‌ ಅವಶ್ಯಕತೆಯಿಲ್ಲ. ಅವರಿಗೆ ಒಂದು ಅವಕಾಶ ಕೊಟ್ಟು ಜೀವನ ಮಾಡಲು ಬಿಡಿ, ಮತ್ತೆ ಹಳೇ ಚಾಳಿ ಮುಂದುವರಿಸಿದರೆ ಪೊಲೀಸರ ಮಾತಿನಲ್ಲಿ ತಿಳಿಸಿ ಎಂದು ಸಲಹೆ ನೀಡಿದರು.

ರಾತ್ರೋ ರಾತ್ರಿ ದಾಳಿ: ನೆಲಮಂಗಲ ಉಪವಿಭಾಗ ವ್ಯಾಪ್ತಿಯ ನೆಲಮಂಗಲ ಗ್ರಾಮಾಂತರ, ಟೌನ್‌, ಮಾದನಾಯಕನಹಳ್ಳಿ, ತ್ಯಾಮಗೊಂಡ್ಲು, ಸೋಂಪುರ ಭಾಗದ ರೌಡಿಶೀಟರ್‌ ಮನೆಗಳ ಮೇಲೆ ಶುಕ್ರವಾರ ರಾತ್ರಿ ಪೊಲೀಸರ ವಿವಿಧ ತಂಡಗಳ ಮೂಲಕ ದಾಳಿ ಮಾಡಿ ವಶಕ್ಕೆ ಪಡೆದು ಶನಿವಾರ 100ಕ್ಕೂ ಹೆಚ್ಚು ಜನರನ್ನು ರೌಡಿ ಪರೇಡ್‌ನ‌ಲ್ಲಿ ಎಸ್ಪಿ ಎದುರು ಪೊಲೀಸರು ಹಾಜರು ಪಡಿಸಿದ್ದರು. ಕೆಲವರು ಎಸ್ಕೇಪ್‌: ಪೊಲೀಸರು ದಾಳಿ ಮಾಡುವ ವಿಚಾರ ತಿಳಿದು ಕೆಲವು ರೌಡಿಶೀಟರ್‌ಗಳು ಎಸ್ಕೇಪ್‌ ಆಗಿದ್ದು, ಅಂತವರನ್ನು ವಶಕ್ಕೆ ಪಡೆದು ಕ್ರಮ ಕೈಗೊಳ್ಳುವಂತೆ ಎಸ್ಪಿ ಪೊಲೀಸರಿಗೆ ಆದೇಶ ನೀಡಿದ್ದಾರೆ.

ಅಪ್ಪನಂತೆ ರೈತನಾಗು ಎಂದ ಎಸ್ಪಿ: ರೌಡಿ ಪರೇಡ್‌ನ‌ಲ್ಲಿ ಮಾದನಾಯಕನಹಳ್ಳಿ ಠಾಣೆ ವ್ಯಾಪ್ತಿಯ ರೌಡಿಶೀಟರ್‌ನೊಬ್ಬ ನಾನು ವ್ಯವಸಾಯ ಮಾಡುತಿದ್ದೇನೆ ಸರ್‌ ಎಂದಾಗ ತಕ್ಷಣ ಎಸ್ಪಿ ಬೇಸಾಯದ ಬಗ್ಗೆ ಅನೇಕ ಪ್ರಶ್ನೆಗಳನ್ನು ಕೇಳಿದರು. ಉತ್ತರಿಸಲಾಗದ ರೌಡಿಶೀಟರ್‌ ನನ್ನ ತಂದೆ ಜತೆ ಕೆಲಸ ಮಾಡುತ್ತೇನೆ ಎಂದ ತಕ್ಷಣ ಅಪ್ಪ ರೈತನಾದರೆ ನೀನು ರೌಡಿ ಆಗಿದ್ದೀ ಯಾ, ನಿಮ್ಮಪ್ಪನಂತೆ ರೈತನಾಗು ಉತ್ತಮ ಜೀವನ ಮಾಡು ಎಂದು ಸಲಹೆ ನೀಡಿದರು.

Advertisement

ವಾಹನ ಸವಾರರಿಗೆ ದಂಡ: ನಗರಕ್ಕೆ ಎಸ್ಪಿ ಭೇಟಿ ನೀಡಿದ ಬೆನ್ನಲ್ಲೇ ಮಾಸ್ಕ್, ಹೆಲ್ಮೆಟ್‌ ಧರಿಸದ ಹಾಗೂ ಪರವಾನಗಿ ಇಲ್ಲದ ನೂರಾರು ವಾಹನಗಳನ್ನು ಎಸ್ಪಿ ನೇತೃತ್ವದಲ್ಲಿ ವಶಕ್ಕೆ ಪಡೆದು ಪರಿಶೀಲನೆ ನಡೆಸಿ ದಂಡ ವಿಧಿಸಿದರು. ಈ ಸಂದರ್ಭದಲ್ಲಿ ಡಿವೈಎಸ್‌ಪಿ ಮೋಹನ್‌ಕುಮಾರ್‌, ವೃತ್ತ ನಿರೀಕ್ಷಕ ಶಿವಣ್ಣ, ವೀರೇಂದ್ರಪ್ರಸಾದ್‌, ಸತ್ಯನಾರಾಯಣ್‌, ಸಬ್‌ ಇನ್‌ಸ್ಪೆಕ್ಟರ್‌ ಡಿ.ಆರ್‌ ಮಂಜುನಾಥ್‌, ಅಂಜನ್‌ಕುಮಾರ್‌, ವಸಂತ್‌ಕುಮಾರ್‌, ವರಣ್‌, ಚಿಕ್ಕನರಸಯ್ಯ ಮತ್ತಿತರರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next