ಗಂಗಾವತಿ: ಬಿಪಿನ್ ರಾವತ್ ವೃತ್ತ ನಾಮಕರಣ ಮತ್ತು ಉದ್ಘಾಟನೆಗೆ ಸಂಬಂಧಪಟ್ಟಂತೆ ನಗರಸಭೆಯ ತುರ್ತು ಸಭೆಗೆ ಪೊಲೀಸರನ್ನು ಆಹ್ವಾನಿಸಿದ್ದಕ್ಕೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಬುಧವಾರ ಮಂಥನ ಸಭಾಂಗಣದಲ್ಲಿ ನಡೆದಿದೆ.
ನಗರದಲ್ಲಿರುವ ವೃತ್ತಗಳು ಹಾಗೂ ವಾರ್ಡ್ ಗಳ ನಾಮಫಲಕಗಳ ತೆರವು ಹಾಗೂ ಸಕ್ರಮಗೊಳಿಸುವ ಕುರಿತು ಕರೆದ ಸಭೆಯಲ್ಲಿ ಪೊಲೀಸರನ್ನು ಕುಳ್ಳಿರಿಸಿದ್ದು ಆಕ್ರೋಶ ಕಾರಣವಾಗಿದೆ.
ಸದಸ್ಯರಾದ ಶಾಮೀದ್ ಮನಿಯಾರ್ ಹಾಗೂ ಸೋಮನಾಥ ಭಂಡಾರಿ ಸೇರಿ ಅನೇಕರು ಪೊಲೀಸರನ್ನು ಸಭೆಗೆ ಕರೆಸಿದ ಔಚಿತ್ಯದ ಬಗ್ಗೆ ಪೌರಾಯುಕ್ತರಲ್ಲಿ ಪ್ರಶ್ನೆ ಮಾಡಿದರು. ಸಾಮಾನ್ಯ ಸಭೆಗೆ ಪೊಲೀಸರು ಬರಬಾರದು ಇದರಿಂದ ಸದಸ್ಯರ ಹಕ್ಕು ಚ್ಯುತಿಯಾಗುತ್ತದೆ. ಪೌರಾಯುಕ್ತರು ಯಾಕೆ ಹೀಗೆ ಮಾಡಿದರು ಎಂದು ಪ್ರಶ್ನಿಸಿದರು.
ಈ ಮಧ್ಯೆ ಪೌರಾಯುಕ್ತ ಅರವಿಂದ ಜಮಖಂಡಿ ಮಾತನಾಡಿ, ಕೆಲವು ಮಾಹಿತಿಯನ್ನು ಪಡೆಯಲು ಪೊಲೀಸರು ಸಭೆಯಲ್ಲಿ ಹಾಜರಿದ್ದಾರೆ ಅವರ ಕರ್ತವ್ಯ ಶುರುಮಾಡುತ್ತಾರೆ ದಯವಿಟ್ಟು ಇದನ್ನ ಪ್ರಶ್ನಿಸಬಾರದು ಎಂದರು.
ನಂತರ ಬಿಪಿನ್ ರಾವತ್ ಹಾಗೂ ಇತರ ಅರ್ಥಗಳ ಬಗ್ಗೆ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರಿಂದ ಸಭೆಯಲ್ಲಿ ಗೊಂದಲದ ವಾತಾವರಣ ಮೂಡಿತು.