ಮಂಗಳೂರು: ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳ ಸೋಗಿನಲ್ಲಿ ಶುಕ್ರವಾರ ರಾತ್ರಿ ಮಂಗಳೂರಿನಲ್ಲಿ ಸಿಕ್ಕಿಬಿದ್ದ ಎಂಟು ಜನರು ನಗರದ ಪಂಪ್ ವೆಲ್ ಬಳಿ ದರೋಡೆ ಮಾಡಲು ಸಂಚು ನಡೆಸಿದ್ದರು ಮಾಹಿತಿ ಹೊರಬಿದ್ದಿದೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ನಗರ ಪೊಲೀಸ್ ಆಯುಕ್ತ ಡಾ. ಹರ್ಷ, ನಗರದ ಪಂಪ್ ವೆಲ್ ಬಳಿ ಅನುಮಾನಾಸ್ಪದ ಕಾರು ಪತ್ತೆಯಾಗಿತ್ತು. ಖಚಿತ ಮಾಹಿತಿ ಮೇರೆಗೆ ತಪಾಸಣೆ ನಡೆಸಿದಾಗ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಒಟ್ಟು 8 ಜನರನ್ನು ಬಂಧಿಸಲಾಗಿದೆ.
ಆರೋಪಿಗಳಿಂದ 20 ಲಕ್ಷದ ಎರಡು ಕಾರುಗಳು ಮತ್ತು 10 ಮೊಬೈಲ್ ಫೋನುಗಳು, ಒಂದು ರಿವಾಲ್ವಾರ್, 8 ಗುಂಡುಗಳು, ಏರ್ ಗನ್ ವಶಕ್ಕೆ ಪಡೆಯಲಾಗಿದೆ.
ಬಂಧಿತರನ್ನು ಸ್ಯಾಮ್ ಪೀಟರ್, ಮದನ್, ಸುನಿಲ್ ರಾಜ್, ಕೋದಂಡರಾಮ, ಟಿ.ಕೆ.ಬೋಪಣ್ಣ, ಚಿನ್ನಪ್ಪ, ಚೆರಿಯನ್ ಮತ್ತು ಅಬ್ದುಲ್ ಲತೀಫ್ ಎಂದು ಗುರುತಿಸಲಾಗಿದೆ.
ಈ ತಂಡದ ನಟೋರಿಯಸ್ ಲೀಡರ್ ಕೇರಳ ಮೂಲದ ಸ್ಯಾಮ್ ಪೀಟರ್ ಎಂದು ಗುರುತಿಸಲಾಗಿದ್ದು, ಕೊಲ್ಕತ್ತಾ, ಭುವನೇಶ್ವರ ಸೇರಿ ಹಲವೆಡೆ ಈತನಿಗೆ ಸಂಪರ್ಕವಿದೆ ಎಂದು ವರದಿಯಾಗಿದೆ. ಸರ್ಕಾರಿ ಅಧಿಕಾರಿಗಳ ರೀತಿಯಲ್ಲಿ ಇವರಿಗೆ 5 ಗನ್ ಮ್ಯಾನ್ ರೀತಿ ಇದ್ದರು. ಇವರಿಗೆ ನೆರವು ನೀಡಿದ ಲತೀಫ್ ಮತ್ತು ಚೆರಿಯನ್ ಎಂಬ ಮಂಗಳೂರು ನಿವಾಸಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಯುಕ್ತರು ಮಾಹಿತಿ ನೀಡಿದರು.
ನಂಬರ್ ಪ್ಲೇಟ್ ಇಲ್ಲದ ಪೂರ್ಣ ಕಪ್ಪು ಟೆಂಟ್ ಹಾಕಲಾಗಿದ್ದ ಕಾರಿನಿಂದ ಶುಕ್ರವಾರ ರಾತ್ರಿ ಆರೋಪಿಗಳನ್ನು ಬಂಧಿಸಲಾಗಿತ್ತು. ಕಾರಿನ ಮುಂಭಾಗದಲ್ಲಿ ಎಂದು ಬರೆಯಲಾಗಿತ್ತು. ಕಾರಿನಲ್ಲಿ ಚಾಲಕ ಸೇರಿ ಸಫಾರಿ ವಸ್ತ್ರದಲ್ಲಿದ್ದವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸ್ಯಾಮ್ ಪೀಟರ್ ಎಂಬಾತ ಹೊಟೇಲ್ ನಲ್ಲಿದ್ದಾನೆ ಎಂಬ ಮಾಹಿತಿ ನೀಡಿದ್ದರು. ಹೊಟೇಲಿಗೆ ದಾಳಿ ನಡೆಸಿದ ಪೊಲೀಸರು ಅಲ್ಲಿ ತಂಡ ಲೀಡರ್ ಸ್ಯಾಮ್ ಪೀಟರ್, ಮತ್ತು ಆತನಿಗೆ ಸಹಾಯ ಮಾಡುತ್ತಿದ್ದ ಮಂಗಳೂರಿನ ಮೊಹಿದ್ದೀನ್ ಮತ್ತು ಅಬ್ದುಲ್ ಲತೀಫ್ ಎಂಬವರನ್ನು ವಶಕ್ಕೆ ಪಡೆದಿದ್ದರು.