ಮಹಾನಗರ: ಪೊಲೀಸ್ ಇಲಾಖೆಯು ಶಾಸಕರು ಮತ್ತು ಸಚಿವರ ಕೈಗೊಂಬೆಯಾಗುತ್ತಿದ್ದು, ಇದಕ್ಕೆ ಸಚಿವರಾದ ವಿನಯ್ ಕುಲಕರ್ಣಿ ಮತ್ತು ಕೆ.ಜೆ. ಜಾರ್ಜ್ ಅವರ ಕಾರ್ಯ ವೈಖರಿಯೇ ಸಾಕ್ಷಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಅವರು ಆರೋಪಿಸಿದರು.
ಕೆ.ಜೆ. ಜಾರ್ಜ್ ಮತ್ತು ವಿನಯ್ ಕುಲಕರ್ಣಿ ರಾಜೀನಾಮೆಗೆ ಆಗ್ರಹಿಸಿ ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ದೇಶ ಸಮೃದ್ಧಿಯತ್ತ ಹೋಗಬೇಕಿದೆ. ಹೀಗಿರುವಾಗ ರಾಜ್ಯದಲ್ಲಿ ಸಂಸ್ಕೃತಿ ಹದಗೆಟ್ಟಿದೆ. ಕಾಂಗ್ರೆಸ್ ಸರಕಾರ ಭ್ರಷ್ಟಾಚಾರದಲ್ಲಿ ಮೊದಲನೇ ಸ್ಥಾನದಲ್ಲಿದ್ದು, ಆತ್ಮ ಹತ್ಯೆ, ಸಾಲ, ಸಾಲು ಸಾಲು ಹತ್ಯೆಗಳು ನಡೆಯುತ್ತಿವೆ. ಎಂ.ಎಂ. ಕಲ್ಬುರ್ಗಿ, ಗೌರಿ ಲಂಕೇಶ್ ಮುಂತಾದವರ ಹಂತಕರನ್ನು ಪತ್ತೆಹಚ್ಚಲು ರಾಜ್ಯ ಸರಕಾರಕ್ಕೆ ಸಾಧ್ಯವಾಗಲಿಲ್ಲ ಎಂದು ತಿಳಿಸಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಇದೇ ಕಾರಣಕ್ಕೆ ಸಾಲು ಸಾಲು ಕೊಲೆಯಾಗುತ್ತಿದೆ. ಇಷ್ಟಿದ್ದರೂ, ಮುಖ್ಯಮಂತ್ರಿ ನಿದ್ದೆಯಿಂದ ಏಳುತ್ತಿಲ್ಲ. ಆರೋಪ ಹೊತ್ತಿರುವ ಕಾಂಗ್ರೆಸ್ ಸಚಿವ, ಶಾಸಕರ ಪರ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.
ಮಾಜಿ ಶಾಸಕ ಯೋಗೀಶ್ ಭಟ್ ಮಾತನಾಡಿ, ರಾಜ್ಯದಲ್ಲಿ ಸಾಲು ಸಾಲು ಕೊಲೆ ನಡೆಯುತ್ತಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಲೆಗಾರರನ್ನು ಬೆಂಬಲಿಸುತ್ತಿದ್ದಾರೆ. ಸಚಿವ ವಿನಯ್ ಕುಲಕರ್ಣಿ ಅವರಿಗೆ ತಮ್ಮ ಮಾತಿನ ಮೇಲೆಯೇ ಹಿಡಿತವಿಲ್ಲ. ಒಂದೊಂದು ಸಂದರ್ಶನದಲ್ಲಿ ವ್ಯತ್ಯಸ್ತ ಹೇಳಿಕೆ ನೀಡುತ್ತಿ ದ್ದಾರೆ ಎಂದು ಆರೋಪಿಸಿದರು.
ರಾಜ್ಯದ ಕಾಂಗ್ರೆಸ್ ಸರಕಾರದ ಕೊನೆಯ ದಿನಗಳನ್ನು ಎದುರು ನೋಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಆ ಪಕ್ಷದ ಕೊನೆಯ ಮುಖ್ಯಮಂತ್ರಿ. ತಮ್ಮ ಅವಧಿಯಲ್ಲಿ ಅನೇಕ ಪೊಲೀಸ್ ಅಧಿಕಾರಿಗಳಿಗೆ ಒತ್ತಡ ನೀಡುವ ಮೂಲಕ ಆತ್ಮಹತ್ಯೆಗೆ ಶರಣಾಗುವಂತೆ ಮಾಡುತ್ತಿದ್ದಾರೆ ಎಂದರು.
ಮಾಜಿ ಶಾಸಕ ಜಯರಾಮ್ ಶೆಟ್ಟಿ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಪೂಜಾ ಪೈ, ಬಿಜೆಪಿ ಮುಖಂಡ ರವಿಶಂಕರ ಮಿಜಾರು ಸಹಿತ ಹಲವಾರು ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.