ವಿಟ್ಲ ಪೊಲೀಸ್ ಠಾಣೆ : ಆಶ್ರಿತ ಸಭಾಭವನ ಉದ್ಘಾಟನೆ
ವಿಟ್ಲ : ಪುತ್ತೂರಿನಲ್ಲಿ ಪೊಲೀಸ್ ಸಿಬಂದಿಗಳಿಗೆ ವಸತಿಗೆ ಬೇಕಾದ ವ್ಯವಸ್ಥೆ ಈಗಾಗಲೇ ಆಗಿದೆ. ವಿಟ್ಲ ಹಾಗೂ ಉಪ್ಪಿನಂಗಡಿ ಭಾಗಕ್ಕೆ ಪಿಎಸ್‌ಐ ಹಾಗೂ ಸಿಬಂದಿಗಳ ವಸತಿಗೆ ಬೇಕಾದ ವ್ಯವಸ್ಥೆಗೆ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು.
ಅವರು ಫೆ.24ರಂದು ವಿಟ್ಲ ಆರಕ್ಷಕ ಠಾಣೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಸಂಘದ ವತಿಯಿಂದ 4 ಲ.ರೂ. ಹಾಗೂ ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್‌ನ 25 ಲ.ರೂ. ವೆಚ್ಚದಲ್ಲಿ ನಿರ್ಮಾಣವಾದ ಆಶ್ರಿತ ಸಭಾಭವನ ಉದ್ಘಾಟನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಕ್ಷಣೆಗಾಗಿ ಪೊಲೀಸರು ರಾತ್ರಿ ಹಗಲು ಸೇವೆ ಸಲ್ಲಿಸುತ್ತಾರೆ. ಅವರ ಸೇವೆ ಶ್ಲಾಘನೀಯ. ಜನರಿಗೆ ಮತ್ತಷ್ಟು ಉತ್ತಮ ಸೇವೆ ದೊರೆಯಲಿ. ಅಂತೆಯೇ ಪೊಲೀಸರ ಜೀವನವೂ ಉತ್ತಮವಾಗಿ ಇರಲಿ ಎಂದರು.
ವಿಟ್ಲ ಅರಮನೆಯ ವಿ. ಜನಾರ್ದನ ವರ್ಮ ಅರಸರು ಸಭಾಭವನವನ್ನು ಉದ್ಘಾಟಿಸಿದರು. ಬಂಟ್ವಾಳ ಪೊಲೀಸ್ ಸಹಾಯಕ ಅಧೀಕ್ಷಕ ರವೀಶ್ ಸಿ. ಆರ್. , ಹಿರಿಯ ಉದ್ಯಮಿ ಕೆ. ವೆಂಕಟೇಶ್ ಭಟ್, ವಿ. ಕೂಸಪ್ಪ ನಾಯ್ಕ, ಮಹಮ್ಮದ್ ಜೋಗಿಮಠ, ಹಾಜಿ ವಿ. ಎಸ್. ಅಬ್ಟಾಸ್ ಒಕ್ಕೆತ್ತೂರು, ಎಡ್ವರ್ಡ್ ರೇಗೋ ಕಲ್ಲಕಟ್ಟ ಅವರನ್ನು ಸಮ್ಮಾನಿಸಲಾಯಿತು. ಗುತ್ತಿಗೆದಾರ ಆರ್.ಎಸ್. ಲಕ್ಷ್ಮಣ ಅವರನ್ನು ಗೌರವಿಸಲಾಯಿತು. ವಿಟ್ಲ ವಾಣಿಜ್ಯ ಮತ್ತು ಕೈಗಾರಿಕೆ ಸಂಘದ ಅಜೀವ ಸದಸ್ಯತನದ ಪ್ರಮಾಣ ಪತ್ರ ವಿತರಿಸಲಾಯಿತು.
ಸಂಘದ ಜತೆಕಾರ್ಯದರ್ಶಿ ಬಾಬು ಕೊಪ್ಪಳ, ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ, ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಲ್. ಎನ್. ಕೂಡೂರು, ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಅರುಣ ಎಂ. ಮತ್ತಿತರರು ಉಪಸ್ಥಿತರಿದ್ದರು.
ವಿಟ್ಲ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪ್ರಧಾನ ಕಾರ್ಯದರ್ಶಿ ವಿ. ರಾಮದಾಸ ಶೆಣೈ ಸ್ವಾಗತಿಸಿದರು. ಅಧ್ಯಕ್ಷ ಎಚ್. ಜಗನ್ನಾಥ ಸಾಲ್ಯಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಮಹಮ್ಮದ್ ಇಕ್ಬಾಲ್ ವಂದಿಸಿದರು. ಕಾರ್ಯದರ್ಶಿ ಭಾಸ್ಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.