Advertisement
ಭಾನುವಾರ ಜಿಲ್ಲಾ ಪೊಲೀಸ್ ಕಚೇರಿ ಆವರಣದಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದೇಶದ ರಕ್ಷಣೆ ಇತರೆ ಸಂದರ್ಭದಲ್ಲಿ ಹುತಾತ್ಮರಾಗುವಂತಹ ಸೈನಿಕರ ಕುಟುಂಬಕ್ಕೆ ಮನೆ, ಆರೋಗ್ಯ, ಮಕ್ಕಳ ವಿದ್ಯಾಭ್ಯಾಸಕ್ಕೆ ಸೌಲಭ್ಯ ನೀಡಲಾಗುತ್ತದೆ. ಅದೇ ಮಾದರಿಯ ಸೌಲಭ್ಯ ದೇಶದ ಒಳಗಿನ ಸೈನಿಕರಾದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ದೊರಕಿಸಿಕೊಡುವ ನಿಟ್ಟಿನಲ್ಲಿ ಇಲಾಖೆಯ ಹಿರಿಯಅಧಿಕಾರಿಗಳು ಗಮನ ನೀಡಬೇಕು ಎಂದರು.
Related Articles
Advertisement
ಯಾವುದೇ ರೀತಿಯ ಸಮಾಜಘಾತುಕ, ವಿಧ್ವಂಸಕ ಕೃತ್ಯಗಳು ನಡೆದ ಕ್ಷಣಗಳಲ್ಲಿ ರಕ್ಷಣಾ ಕಾರ್ಯಕ್ಕೆ ಬರುವರು ದೇಶದ ಒಳಗಿನ ಸೈನಿಕರಾದ ಪೊಲೀಸರು. ಕೆಲವೊಮ್ಮೆ ಘಟನೆಗೆ ಪ್ರತಿಕ್ರಿಯಿಸುವುದಕ್ಕೂ ಸಮಯವೇ ಇರುವುದಿಲ್ಲ. ಆದರೂ, ಸಾರ್ವಜನಿಕರ ರಕ್ಷಣೆಗೆ ಧಾವಿಸಬೇಕಾಗುತ್ತದೆ. ಮುಂಬೈ ದಾಳಿಯ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿ ಹೇಮಂತ್ ಕರ್ಕರೆಗೆ ಭಯೋತ್ಪಾದಕರು ದಾಳಿ ಮಾಡಿದ್ದಾರೆ ಎಂಬುದೇ ಗೊತ್ತಾಗದ ಕಾರಣಕ್ಕೆ ಸರ್ವಿಸ್ ಪಿಸ್ತೂಲ್ ನೊಂದಿಗೆ ರಕ್ಷಣಾ ಕಾರ್ಯಕ್ಕೆ ಮುಂದಾಗಿ, ಕೊನೆಗೆ ಹುತಾತ್ಮರಾದರು ಎಂದು ತಿಳಿಸಿದರು.
ಉತ್ತರ ಭಾರತದಲ್ಲಿ ದೇವಮಾನವರೊಬ್ಬರ ಬಂಧನದ ಸಂದರ್ಭದಲ್ಲಿ ಏಕಾಏಕಿ ಗಲಭೆ ಉಂಟಾಯಿತು. ಅದನ್ನು ನಿಯಂತ್ರಿಸುವ ವೇಳೆ ಅನೇಕರು ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಬಲಿಯಾಗಬೇಕಾಯಿತು. ಹಿಂದೆ ಕಾನೂನು ಮತ್ತು ಸುವ್ಯವಸ್ಥೆಗೆ ಮಾತ್ರವೇ ಇದ್ದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಈಗ ಕಾನೂನು, ಸುವ್ಯವಸ್ಥೆ ಜೊತೆಗೆ ಪ್ರಕೃತಿ ವಿಕೋಪ ಇತರೆ ಸಂದರ್ಭದಲ್ಲೂ ಕರ್ತವ್ಯ ನಿಭಾಯಿಸಬೇಕಾಗುತ್ತದೆ. ಇಂತಹ ಘಟನೆಗಳ ಅವಲೋಕಿಸಿದರೆ ಕಾಲ ಬದಲಾವಣೆಗೆ ತಕ್ಕಂತೆ ಪೊಲೀಸ್ ಇಲಾಖೆ ಎದುರಿಸಬೇಕಾದ ಸವಾಲುಗಳು ಹೆಚ್ಚಾಗುತ್ತಿವೆ ಎಂಬುದು ಗೊತ್ತಾಗುತ್ತದೆ. ಅಂತಹ ಸವಾಲುಗಳನ್ನು ಪೊಲೀಸ್ ಇಲಾಖೆ ಅತಿ ಸಮರ್ಥವಾಗಿ ನಿಭಾಯಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ರಕ್ಷಣಾಧಿಕಾರಿ ಆರ್. ಚೇತನ್ ಮಾತನಾಡಿ, 1959 ಅ. 21 ರಂದು ಲಡಾಖ್‌ನ ಆಸ್ಟ್ರಿಂಗ್ ಪ್ರದೇಶದಲ್ಲಿ ಸಿಆರ್‌ಪಿಎಫ್ ಡಿಎಸ್ಪಿ ಕರಣ್‌ಸಿಂಗ್ ಮತ್ತವರ ತಂಡ ಗಸ್ತುನಲ್ಲಿದ್ದಾಗ ಚೀನಾ ಸೈನಿಕರು ಎಕೆ-47 ಮುಂತಾದ ಅತ್ಯಾಧುನಿಕ ಶಸ್ತ್ರಾಸ್ತ್ರಗಳೊಂದಿಗೆ ದಾಳಿ ಮಾಡಿದರು. ಸಾಮಾನ್ಯ ಬಂದೂಕುಗಳೊಂದಿಗೆ ಕರಣ್‌ಸಿಂಗ್ ಮತ್ತವರ ತಂಡ ಧೈರ್ಯ, ಸಾಹಸ, ವಿರೋಚಿತ ಹೋರಾಟ ನಡೆಸಿತು. ಆ ದಾಳಿಯಲ್ಲಿ 10 ಜನರು ವೀರಮರಣ ಹೊಂದಿದರು. 9 ಜನರನ್ನು ಚೀನಿ ಸೈನಿಕರು ಬಂಧಿಸಿದರು. ಕರ್ತವ್ಯಪಾಲನೆಯಲ್ಲಿ ಹುತಾತ್ಮರಾದ ಸಿಆರ್‌ಪಿಎಫ್ ಯೋಧರ ಸ್ಮರಣೆಗಾಗಿ, ಪ್ರತಿ ವರ್ಷ ಅ. 21 ರಂದು ಪೊಲೀಸ್ ಹುತಾತ್ಮರ ದಿನಾಚರಣೆ ನಡೆಯುತ್ತಿದೆ ಎಂದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಟಿ.ಎಸ್.ಉದೇಶ್ ಇತರರು ಇದ್ದರು. ನಾಗರಿಕರು, ಸ್ವಯಂ ಸೇವಾ ಸಂಸ್ಥೆ, ಸಂಘಗಳ ಪದಾಧಿಕಾರಿಗಳು, ಮಾಧ್ಯಮದವರು, ನಿವೃತ್ತರು ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುತ್ಛ ಸಮರ್ಪಿಸುವ ಮತ್ತು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸುವ ಮೂಲಕ ಗೌರವ ಸಲ್ಲಿಸಲಾಯಿತು.