ಹೊಸದಿಲ್ಲಿ : ಚಲಿಸುವ ಕಾರಿನಿಂದ ಹೊರಗೆ ಹಾರುವ, ಮತ್ತೆ ಕಾರಿನೊಳಗೆ ಜಿಗಿದು ಬರುವ, ನಡು ರಸ್ತೆಯಲ್ಲಿ ಡ್ಯಾನ್ಸ್ ಮಾಡುವ ಹುಚ್ಚು ಸಾಹಸದ ಕೆನಡ rapper ಡ್ರೇಕ್ ನ ಹೊಸ ಮ್ಯೂಸಿಕ್ ಟ್ರ್ಯಾಕ್ “ಕೀಕೀ, ಡೂ ಯೂ ಲವ್ ಮೀ’ ಮಾರಣಾಂತಿಕ ನೃತ್ಯ ಇದೀಗ ಭಾರತದ ಯುವ ಸಮುದಾಯದಲ್ಲಿ ಹುಚ್ಚಿನ ಕಿಚ್ಚು ಹಬ್ಬಿಸುತ್ತಿದ್ದು ಈ ದುಸ್ಸಾಹಸ ನಡೆಸಿರುವ ಅನೇಕ ಯುವಕ – ಯುವತಿಯರು ಈಗಾಗಲೇ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಮಾತ್ರವಲ್ಲದೆ ರಸ್ತೆಯಲ್ಲಿ ಸಾಗುವ ಅಮಾಯಕರು ಕೂಡ ಆಸ್ಪತ್ರೆಗೆ ಸೇರುವಂತೆ ಮಾಡಿದ್ದಾರೆ.
ಉತ್ತರ ಪ್ರದೇಶ, ದಿಲ್ಲಿ ಮತ್ತು ಮುಂಬಯಿಯಲ್ಲಿ ನಡು ರಸ್ತೆಯ ಈ ಹುಚ್ಚು ನೃತ್ಯ ಈಗ ತಾರಕಕ್ಕೇರಿದೆ. ಅಂತೆಯೇ ಪೊಲೀಸರು ಟ್ವಿಟರ್‌ನಲ್ಲಿ ಎಚ್ಚರಿಕೆಯ ಸೂಚನೆಗಳನ್ನು ನೀಡುತ್ತಿದ್ದಾರೆ. ತಮ್ಮ ಜೀವಕ್ಕೆ ಮಾತ್ರವಲ್ಲದೆ ಅಮಾಯಕ ಜೀವಕ್ಕೂ ಅಪಾಯಕಾರಿಯಾಗಿರುವ ಈ ಹುಚ್ಚು ನರ್ತಕರ ವಿರುದ್ದ ಕಾರ್ಯಾಚರಣೆ ಆರಂಭಿಸಿದ್ದಾರೆ.
ಕೀಕೀ ಹುಚ್ಚು ನೃತ್ಯದ ಕ್ರೇಜ್ ಕಳೆದ ಜೂನ್ 30ರಂದು ಆರಂಭವಾಗಿತ್ತು. ಕಾಮಿಡಿಯನ್ ಶಿಗ್ಗಿ ತನ್ನ ಈ ನೃತ್ಯ ವೈಖರಿಯ ವಿಡಿಯೋವನ್ನು ಅಂದು ಇನ್‌ಸ್ಟಾಗ್ರಾಂ ಗೆ ಅಪ್‌ಲೋಡ್ ಮಾಡಿದ್ದ. ಈ ಹುಚ್ಚು ನೃತ್ಯಕ್ಕೆ ಮೊದಲಾಗಿ ಹೆಜ್ಜೆ ಹಾಕಿ ರಸ್ತೆಯಲ್ಲಿ ಕುಣಿದವರು ಬಾಲಿವುಡ್‌ನ ಸೆಲೆಬ್ರಿಟಿಗಳು. ಅಲ್ಲಿಂದ ಈ ಹುಚ್ಚು ಭಾರತದ ವಿವಿಧ ನಗರಗಳಿಗೆ, ರಾಜ್ಯಗಳಿಗೆ ಹಬ್ಬಿತು.
‘ಹ್ಯಾಶ್‌ಟ್ಯಾಗ್ ಮೈ ಫೀಲಿಂಗ್ಸ್ ಚ್ಯಾಲೆಂಜ್’ ಎಂಬ ಹೆಸರಿನಲ್ಲಿ ಸಾಮಾಜಿಕ ಜಾಲ ತಾಣದಲ್ಲಿ ಕಿಚ್ಚು ಹಬ್ಬಿಸಿರುವ ಈ ಹುಚ್ಚು ನೃತ್ಯವನ್ನು ನಡು ರಸ್ತೆಯಲ್ಲಿ, ಚಲಿಸುವ ಕಾರಿನಿಂದ ಹೊರ ಜಿಗಿದು, ಮತ್ತೆ ಪುನಃ ಜಂಪ್ ಮಾಡಿ ಕಾರಿನೊಳಗೆ ನುಗ್ಗಿ ಬರುವ ರೀತಿಯಲ್ಲಿ ಮಾಡಿರುವ ಅನೇಕ ತರುಣ, ತರುಣಿಯರು ಆಸ್ಪತ್ರೆಗೆ ಸೇರಿದ್ದಾರೆ.
ದಿಲ್ಲಿ ಪೊಲೀಸರು ಟ್ವಿಟರ್‌ನಲ್ಲಿ “ಡ್ಯಾನ್ಸ್ ಮಾಡಿ, ಆದರೆ ರಸ್ತೆಯಲ್ಲಿ ಅಲ್ಲ; ನರ್ತಿಸುವ ಅಂಗಣದಲ್ಲಿ’ ಎಂಬ ಎಚ್ಚರಿಕೆಯನ್ನು ಯುವ ಜನರಿಗೆ ನೀಡಿದ್ದಾರೆ.
ಉತ್ತರ ಪ್ರದೇಶ ಪೊಲೀಸರು ತಮ್ಮ ಟ್ವಿಟರ್ ಸಂದೇಶವನ್ನು ಮಕ್ಕಳ ಹೆತ್ತವರಿಗೆ ಮುಡಿಪಾಗಿರಿಸಿ ಈ ರೀತಿ ಬರೆದಿದ್ದಾರೆ : ಪ್ರಿಯ ಹೆತ್ತವರೇ, ಕೀಕೀ ನಿಮ್ಮ ಮಗುವನ್ನು ಪ್ರೀತಿಸುತ್ತೋ ಇಲ್ಲವೋ ಗೊತ್ತಿಲ್ಲ; ಆದರೆ ನೀವಂತೂ ಖಂಡಿತ ನಿಮ್ಮ ಮಗುವನ್ನು ಪ್ರೀತಿಸುವಿರೆಂಬ ವಿಶ್ವಾಸ ನಮಗಿದೆ; ಆದುದರಿಂದ ಕೀಕೀ ದುಸ್ಸಾಹಸದಿಂದ ದೂರ ಉಳಿಯುವಂತೆ ನಿಮ್ಮ ಮಕ್ಕಳನ್ನು ಎಚ್ಚರಿಸಿ’.
ಮುಂಬಯಿ ಪೊಲೀಸರು ಕೀಕಿ ಯುವ ನರ್ತಕರಿಗೆ ಹೀಗೆ ಎಚ್ಚರಿಸಿದ್ದಾರೆ: ಅಪಾಯ ನಿಮಗೆ ಮಾತ್ರವಲ್ಲ ಇತರರ ಜೀವಕ್ಕೂ ಅಪಾಯವಿದೆ; ಜನರಿಗೆ ತೊಂದರೆ ಮಾಡದಿರಿ ಇಲ್ಲವೇ ನಮ್ಮ ಕ್ರಮ ಎದುರಿಸಿ’.