Advertisement

ಪೊಳಲಿ ಮಾ.13ರಂದು ಬ್ರಹ್ಮಕಲಶೋತ್ಸವ: ರಮಾನಾಥ ರೈ

11:37 AM Dec 07, 2018 | Team Udayavani |

ಪೊಳಲಿ: ಪುರಾತನ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ನಡೆಯುತ್ತಿದ್ದು, 2019ರ ಮಾ.13ರಂದು ಶ್ರೀ ದುರ್ಗಾಪರಮೇಶ್ವರಿ, ಶ್ರೀ ರಾಜರಾಜೇಶ್ವರಿ ಹಾಗೂ ಸಹಪರಿವಾರ ದೇವರುಗಳಿಗೆ ಬ್ರಹ್ಮಕಲಶ ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ, ಮಾಜಿ ಸಚಿವ ರಮಾನಾಥ ರೈ ಅವರು ಗುರುವಾರ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ತಿಳಿಸಿದ್ದಾರೆ.

Advertisement

ಮಾ.4ರಂದು ದೇವಸ್ಥಾನ ಪ್ರಾರ್ಥನೆ, ಮಾ.10 ರಂದು ಶ್ರೀದುರ್ಗಾಪರಮೇಶ್ವರಿ, ಶ್ರೀರಾಜರಾಜೇಶ್ವರಿ, ಮಹಾಗಣಪತಿ, ಸುಬ್ರಹ್ಮಣ್ಯ ಹಾಗೂ ಭದ್ರಕಾಳಿ ದೇವರ ಪ್ರತಿಷ್ಠೆ; ಮಾ.10ರಿಂದ 13ರ ಒಳಗೆ ನೂತನ ಧ್ವಜಸ್ತಂಭದ ಧ್ವಜಪ್ರತಿಷ್ಠೆ ಹಾಗೂ ಪರಿವಾರ ದೈವಗಳ ಪ್ರತಿಷ್ಠೆ ಜರಗುವುದು. ದೇವರ ವಾರ್ಷಿಕ ಜಾತ್ರಾ ಮಹೋತ್ಸವವು ಮಾ.14ರಿಂದ ಒಂದು ತಿಂಗಳ ಕಾಲ ನಡೆಯಲಿದೆ ಎಂದು ಅವರು ವಿವರಿಸಿದರು.

ಪುರಾತನ ದೇವಸ್ಥಾನ
ಪೊಳಲಿ ದೇವಸ್ಥಾನವು 1,700 ವರ್ಷಗಳ ಇತಿಹಾಸವಿರುವ ಪುರಾತನ ದೇವಸ್ಥಾನವಾಗಿದೆ. 2001ರಲ್ಲಿ ಅಷ್ಟಬಂಧ, ಲೇಪಾಷ್ಟಗಂಧ ಬ್ರಹ್ಮಕಲಶ ನಡೆದಿದೆ. ಅನಂತರ ದೇವಸ್ಥಾನದಲ್ಲಿ ಇರಿಸಲಾದ ಅಷ್ಟಮಂಗಲ ಪ್ರಶ್ನಾಚಿಂತನೆಯಲ್ಲಿ ಜೀರ್ಣೋದ್ಧಾರ ನಡೆಸಬೇಕೆಂದು ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ದೇವಸ್ಥಾನ ಪುನರ್‌ನಿರ್ಮಾಣಕ್ಕಾಗಿ 16 ಜನ ಸದಸ್ಯರನ್ನೊಳಗೊಂಡು, ಸಂಸದ ನಳಿನ್‌ ಕುಮಾರ್‌ ಕಟೀಲು ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿತ್ತು. ಅನಂತರ ನನ್ನ ಅಧ್ಯಕ್ಷತೆಯಲ್ಲಿ ಜೀರ್ಣೋದ್ಧಾರ ಸಮಿತಿ ರಚಿಸಿ, ದೇವಸ್ಥಾನದ ಪುನರ್‌ನಿರ್ಮಾಣ ಬಗ್ಗೆ ವಾಸ್ತುಶಿಲ್ಪಿ ಮಹೇಶ್‌ ಮುನಿಯಂಗಳ ಅವರ ಮಾರ್ಗದರ್ಶನದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ ಎಂದು ರಮಾನಾಥ ರೈ ವಿವರಿಸಿದರು. 

ಜೀರ್ಣೋದ್ಧಾರ ಕಾರ್ಯವು ಶೇ. 80ರಿಂದ 85 ಪೂರ್ಣಗೊಂಡಿದ್ದು, ಪ್ರಧಾನ ಕಾರ್ಯದರ್ಶಿ ತಾರಾನಾಥ ಆಳ್ವ, ಪವಿತ್ರಪಾಣಿ ಮಾಧವ ಭಟ್‌, ಚೇರ ಮನೆತನದ ಸೂರ್ಯನಾರಾಯಣ ಭಟ್‌  ನೇತೃತ್ವದಲ್ಲಿ ಮುನ್ನಡೆಯುತ್ತಿದೆ. ಬಿಲ್ಲವ ಸಮುದಾಯದವರು ನೂತನ ಧ್ವಜಸ್ತಂಭ ಅರ್ಪಣೆ ಮಾಡಿದ್ದು, ಪ್ರತಿಷ್ಠೆ ನಡೆಯಲಿದೆ. ಗಾಣಿಗ ಸಮಾಜದವರ ದೀಪಸ್ತಂಭವನ್ನು ಸ್ಥಾನಪಲ್ಲಟವಾಗದಂತೆ ನಿರ್ಮಿಸಲಿಕ್ಕಿದೆ. ಈ ಎಲ್ಲ ಕಾರ್ಯಗಳು ಸುಬ್ರಹ್ಮಣ್ಯ ತಂತ್ರಿಯವರ ಮುಂದಾಳತ್ವದಲ್ಲಿ ನಡೆಯುತ್ತಿವೆ ಎಂದು ವಿವರಿಸಿದರು.

ಪುನರ್‌ನಿರ್ಮಾಣ ಕಾಮಗಾರಿಗೆ 19 ಕೋ.ರೂ. ಅಂದಾಜಿಸಲಾಗಿದೆ. ದೇಣಿಗೆ ರೂಪದಲ್ಲಿ ಸುಮಾರು 6.64 ಕೋಟಿ ರೂ. ಸಂಗ್ರಹವಾಗಿದೆ. ವಿವಿಧ ಕಾಮಗಾರಿಗಳನ್ನು ವಿವಿಧ ಸಮಾಜಗಳು ಹಾಗೂ ದಾನಿಗಳು ಸೇವಾ ರೂಪದಲ್ಲಿ ನಿರ್ವಹಿಸಲು ಮುಂದೆ ಬಂದಿದ್ದಾರೆ. ದೇವಸ್ಥಾನದ ನಿಧಿಯಿಂದ 5 ಕೋ.ರೂ. ಭರಿಸಲು ಸರಕಾರದಿಂದ ಅನುಮತಿ ಸಿಕ್ಕಿದೆ. ಈವರೆಗಿನ ಕಾಮಗಾರಿಗೆ ಸುಮಾರು 11.71 ಕೋ.ರೂ. ವ್ಯಯವಾಗಿದೆ. ಉಳಿದ ಕೆಲಸ ನಿರ್ವಹಿಸಲು 2.5 ಕೋ.ರೂ. ಅಗತ್ಯವಿದ್ದು, ಭಕ್ತರು ಹಾಗೂ ದಾನಿಗಳು ಸಹಕರಿಸಬೇಕು. ಬಾಕಿ ಕೆಲಸಗಳನ್ನು 2 ತಿಂಗಳಲ್ಲಿ ಸಂಪೂರ್ಣ ಗೊಳಿಸಲಾಗುವುದು ಎಂದು ಅವರು ತಿಳಿಸಿದರು. 

Advertisement

ಪತ್ರಿಕಾಗೋಷ್ಠಿಯಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ ಅಮ್ಮುಂಜೆಗುತ್ತು ಡಾ| ಮಂಜಯ್ಯ ಶೆಟ್ಟಿ, ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ತಾರಾನಾಥ ಆಳ್ವ, ಪ್ರಧಾನ ಅರ್ಚಕ, ಆನುವಂಶಿಕ ಮೊಕ್ತೇಸರರಾದ ಮಾಧವ ಭಟ್‌ ಹಾಗೂ ಚೇರ ಸೂರ್ಯನಾರಾಯಣ ಭಟ್‌, ಕಾರ್ಯನಿರ್ವಹಣಾಧಿಕಾರಿ ಪ್ರವೀಣ್‌ ಕುಮಾರ್‌ ಉಪಸ್ಥಿತರಿದ್ದರು. ಸುಬ್ರಾಯ ಕಾರಂತ ನಿರೂಪಿಸಿದರು.

ವ್ರತಾಚರಣೆಗೆ ಸೂಚನೆ
ಪೊಳಲಿ ದೇವಸ್ಥಾನದ ಅರ್ಚಕ ಮಾಧವ ಭಟ್‌ ಮಾತನಾಡಿ, ಪೊಳಲಿ ಸಾವಿರ ಸೀಮೆಯಲ್ಲಿ ಬರುವ 16 ಗ್ರಾಮಗಳ ಭಕ್ತರು 2019ರ ಜ.15ರಿಂದ ಬ್ರಹ್ಮಕಲಶದ ತನಕ ನಿಯಮದಂತೆ ವ್ರತಾಚರಣೆಯಲ್ಲಿ ಇರುವುದು ಉತ್ತಮ ಎಂದು ಸೂಚನೆ ನೀಡಿದರು. 

Advertisement

Udayavani is now on Telegram. Click here to join our channel and stay updated with the latest news.

Next