Advertisement

ಅನ್ನ ಸಂತರ್ಪಣೆ: ಸ್ವಯಂಸೇವಕರಿಂದ ಅಚ್ಚುಕಟ್ಟು ವ್ಯವಸ್ಥೆ

06:48 PM Mar 14, 2019 | |

ಪೊಳಲಿ : ಪೊಳಲಿ ಶ್ರೀ ರಾಜರಾಜೇಶ್ವರಿ ಕ್ಷೇತ್ರವು ಪುನರ್‌ ನಿರ್ಮಾಣಗೊಂಡು ಪ್ರಸ್ತುತ ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿದ್ದು, ಈ ಪುಣ್ಯ ಕಾರ್ಯದಲ್ಲಿ ಭಕ್ತರ ಭಕ್ತಿಯ ದಾಹ ನೀಗಿಸುವ ಜತೆಗೆ ಹಸಿವನ್ನೂ ನೀಗಿಸುವ ಕಾರ್ಯ ನಡೆಯುತ್ತಿದೆ. ಪ್ರಾರಂಭದ 2 ದಿನಗಳಲ್ಲಿ ಸಾವಿರಾರು ಭಕ್ತರು ಅನ್ನಪ್ರಸಾದ ಸ್ವೀಕರಿಸಿದ್ದು, ಮುಂದೆ ಲಕ್ಷಾಂತರ ಭಕ್ತರ ಊಟೋಪಚಾರಕ್ಕೆ ಸಕಲ ವ್ಯವಸ್ಥೆ ಕೈಗೊಳ್ಳಲಾಗಿದೆ.

Advertisement

ಪ್ರತಿದಿನ ಬೆಳಗ್ಗೆ 7ರಿಂದ ಉಪಾಹಾರ ಆರಂಭಗೊಳ್ಳಲಿದ್ದು, ಮಧ್ಯಾಹ್ನ 12ರಿಂದ ಅನ್ನಪ್ರಸಾದ, ಅಪರಾಹ್ನ 3ರಿಂದ ಉಪಾಹಾರ, ರಾತ್ರಿ ಊಟದ ವ್ಯವಸ್ಥೆ 12ರವರೆಗೂ ಮುಂದುವರಿಯಲಿದೆ. ಪೊಳಲಿ ಪರಿಸರದ 250ಕ್ಕೂ ಅಧಿಕ ಬಾಣಸಿಗರು ಊಟೋಪಚಾರದ ತಯಾರಿಯಲ್ಲಿ ತೊಡಗಿದ್ದು, 10 ಸಾವಿರಕ್ಕೂ ಅಧಿಕ ಸ್ವಯಂಸೇವಕರು ವಿವಿಧ ತಂಡಗಳ ಮೂಲಕ ಭಕ್ತರಿಗೆ ಅನ್ನಪ್ರಸಾದ ನೀಡುವ ಕಾರ್ಯ ನಿರ್ವಹಿಸುತ್ತಿದ್ದಾರೆ. ಊಟೋಪಚಾರದ ತಯಾರಿಗಾಗಿ 43 ಒಲೆಗಳು, 15ಕ್ಕೂ ಅಧಿಕ ಗ್ಯಾಸ್‌ ಸ್ಟವ್‌ಗಳ ವ್ಯವಸ್ಥೆ ಇದೆ.

ಭಕ್ತರಿಗೆ ಮಿನರಲ್‌ ವಾಟರ್‌
 ಭಕ್ತರ ಆರೋಗ್ಯದ ದೃಷ್ಟಿಯಿಂದ ಕುಡಿಯುವುದಕ್ಕೆ ಮಿನರಲ್‌ ವಾಟರನ್ನೇ ನೀಡಲಾಗುತ್ತಿದ್ದು, ಈಗಾಗಲೇ 2 ಲಕ್ಷ ಬಾಟಲ್  (300 ಎಂಎಲ್ ) ನೀರು, ಸಾವಿರಕ್ಕೂ ಅಧಿಕ ಕ್ಯಾನ್‌ಗಳು ಕ್ಷೇತ್ರ ತಲುಪಿವೆ. 4 ಕಡೆಗಳಲ್ಲಿ ಶುದ್ಧ ಕುಡಿಯುವ ನೀರಿನ ಮೆಷಿನ್‌ ಅಳವಡಿಸಲಾಗಿದೆ.

ಲಾಡು, ಮೈಸೂರುಪಾಕ್‌
ಕುಡಿಯುವುದಕ್ಕೆ ನಿರಂತರವಾಗಿ ಬಿರಿಂಡಾ, ಕಲ್ಲಂಗಡಿ ಜ್ಯೂಸ್‌, ಎಳನೀರನ್ನು ನೀಡಲಾಗುತ್ತಿದೆ. ಊಟದ ಜತೆಗೆ ಲಾಡು ವಿತರಿಸಲಾಗುತ್ತಿದ್ದು, ಇದಕ್ಕಾಗಿ 6 ಲಕ್ಷಕ್ಕೂ ಅಧಿಕ 30 ಗ್ರಾಂ. ತೂಕದ ಲಾಡು ಸಿದ್ಧಪಡಿಸಲಾಗುತ್ತಿದೆ. ಮಾ. 10ರಂದು ಹಾಗೂ 13ರಂದು ಭಕ್ತರಿಗೆ ಪ್ರಸಾದ ರೂಪದಲ್ಲಿ ಲಾಡು ವಿತರಣೆಯಾಗಲಿದ್ದು, ಇದಕ್ಕಾಗಿ 100 ಗ್ರಾಂ. ತೂಕದ 3 ಲಕ್ಷಕ್ಕೂ ಅಧಿಕ ಲಾಡು ಸಿದ್ಧವಾಗುತ್ತಿದೆ. ಇದರ ಜತೆಗೆ ಉಪಾಹಾರಕ್ಕಾಗಿ ಮೈಸೂರುಪಾಕ್‌, ಕಡಿ ಮೊದಲಾದ ಸಿಹಿತಿಂಡಿ ಸಿದ್ಧವಾಗುತ್ತಿದೆ. 2 ಸಾವಿರಕ್ಕೂ ಹೆಚ್ಚು ಭಕ್ತರು ಏಕಕಾಲದಲ್ಲಿ ಕುಳಿತು ಊಟ ಮಾಡಲು ಪೆಂಡಾಲ್‌, ಸಾವಿರಾರು ಮಂದಿಯ ಊಟಕ್ಕಾಗಿ ಬಫೆ ವ್ಯವಸ್ಥೆಯ ಹತ್ತಾರು ಕೌಂಟರ್‌ಗಳಿವೆ. ಊಟಕ್ಕಾಗಿ 5 ಲಕ್ಷಕ್ಕೂ ಅಧಿಕ ಹಾಳೆ ತಟ್ಟೆಗಳನ್ನು ತರಿಸಲಾಗಿದೆ. 

ಊಟೋಪಹಾರ 
2ನೇ ದಿನ ಮಂಗಳವಾರ ಭಕ್ತರಿಗೆ ಬೆಳಗ್ಗೆ ಉಪಾಹಾರದಲ್ಲಿ 2 ಸಾವಿರ ಮಂದಿಗೆ ದೋಸೆ, ಸಾಂಬಾರ್‌, ಶೀರಾ, ಅವಲಕ್ಕಿ, ಮೈಸೂರ್‌ಪಾಕ್‌, ಚಾ-ಕಾಫಿ, ಮಧ್ಯಾಹ್ನ 8 ಸಾವಿರ ಮಂದಿಗೆ ಊಟದಲ್ಲಿ ಉಪ್ಪಿನಕಾಯಿ, ಪಲ್ಯ, ಗಸಿ, ಅನ್ನ, ಸಂಬಾರ್‌, ಹುಳಿ ಸಂಬಾರ್‌, ಲಾಡು, ಗೋಧಿ ಪಾಯಸ, ಸಂಜೆ 10 ಸಾವಿರ ಮಂದಿಗೆ ಉಪಾಹಾರದಲ್ಲಿ ಪೋಡಿ, ಟೊಮೆಟೋ ಬಾತ್‌, ಅವಲಕ್ಕಿ, ಮೈಸೂರು ಪಾಕ್‌, ಚಾ-ಕಾಫಿ, ರಾತ್ರಿ 4 ಸಾವಿರ ಮಂದಿಗೆ ಊಟದ ವ್ಯವಸ್ಥೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next