ಮುಂಬಯಿ: ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ರದ್ದುಗೊಳಿಸಿದ್ದನ್ನು ಬೆಂಬಲಿಸಿದ್ದ ಎನ್.ಡಿ.ಎ. ಅಂಗಪಕ್ಷ ಶಿವಸೇನೆ ಇದೀಗ ಅಖಂಡ ಭಾರತದ ಕನಸು ನನಸಾಗುವ ದಿನ ಹತ್ತಿರದಲ್ಲೇ ಇದೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದೆ.
ಶಿವಸೇನಾ ಸಂಸದ ಸಂಜಯ್ ರಾವತ್ ಅವರು ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತಾ, 2022ರ ಒಳಗೆ ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತದ ನೆಲದೊಳಕ್ಕೆ ಸೇರಿಸಿಕೊಳ್ಳಲಾಗುವುದು ಎಂದು ವಿಶ್ವಾಸದಿಂದ ನುಡಿದಿದ್ದಾರೆ.
‘ಕಾಶ್ಮೀರ ನಮ್ಮ ಆಂತರಿಕ ವಿಚಾರ ಎಂಬುದಾಗಿ ಪ್ರಧಾನಿ ಮೋದಿ ಅವರು ಡೊನಾಲ್ಡ್ ಟ್ರಂಪ್ ಅವರಿಗೆ ಸ್ಪಷ್ಟವಾಗಿ ಹೇಳಿದ್ದಾರೆ… ನೀವು ಪಾಕಿಸ್ಥಾನ ಪ್ರಧಾನಿಯ ಬಾಡಿ ಲಾಂಗ್ವೇಜ್ ಅನ್ನು ನೋಡಿದ್ದೀರಾ…? ಕಾಶ್ಮೀರದಲ್ಲಿನ ಸಂಪೂರ್ಣ ನಿಯಂತ್ರಣವನ್ನು ಭಾರತ ತೆಗೆದುಕೊಂಡುಬಿಟ್ಟಿದೆ.. 370ನೇ ವಿಧಿ ರದ್ಧತಿಯ ಬಳಿಕ ಇನ್ನು ಪಾಕ್ ಆಕ್ರಮಿತ ಕಾಶ್ಮೀರ ಅತಿ ಶೀಘ್ರದಲ್ಲೇ ಭಾರತಕ್ಕೆ ಸೇರಿಕೊಳ್ಳಲಿದೆ… ಈ ವಿಚಾರವನ್ನು ಪಾಕಿಸ್ಥಾನ ಇದೀಗ ನಿಧಾನವಾಗಿ ಒಪ್ಪಿಕೊಳ್ಳಲು ಪ್ರಾರಂಭಿಸಿದೆ… ಅಖಂಡ ಭಾರತದ ಕನಸನ್ನು 2022ರ ಒಳಗಾಗಿ ನಾವು ಪೂರ್ತಿಗೊಳಿಸಲಿದ್ದೇವೆ’ ಎಂಬುದಾಗಿ ರಾವತ್ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡುತ್ತಾ ತಿಳಿಸಿದ್ದಾರೆ.
ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಬಳಿಕ ಕೇಂದ್ರ ಸರಕಾರದ ಮುಂದಿನ ಗುರಿ ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತದೊಳಕ್ಕೆ ಸೇರಿಸಿಕೊಳ್ಳುವುದೇ ಆಗಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಮಂಗಳವಾರವಷ್ಟೇ ಹೇಳಿಕೆ ನೀಡಿದ್ದರು. ಜಿತೇಂದ್ರ ಅವರ ಈ ಹೇಳಿಕೆಯ ಬೆನ್ನಲ್ಲೇ ಶಿವಸೇನೆಯ ರಾವತ್ ಅವರು ಅಖಂಡ ಭಾರತದ ಮಾತುಗಳನ್ನು ಆಡಿದ್ದಾರೆ.
ಸಂಜಯ್ ರಾವತ್ ಅವರು ಶಿವಸೇನೆಯ ಪ್ರಭಾವಿ ನಾಯಕರಾಗಿದ್ದು ಪಕ್ಷವನ್ನು ರಾಜ್ಯಸಭೆಯಲ್ಲಿ ಪ್ರತಿನಿಧಿಸುತ್ತಿದ್ದಾರೆ. ಶಿವಸೇನೆಯ ಮುಖವಾಣಿ ‘ಸಾಮ್ನಾ’ದ ಕಾರ್ಯನಿರ್ವಾಹಕ ಸಂಪಾದಕರಾಗಿಯೂ ಸಂಜಯ್ ರಾವತ್ ಕಾರ್ಯನಿರ್ವಹಿಸುತ್ತಿದ್ದಾರೆ.