Advertisement

ಪೋಖ್ರಾನ್‌ 2 – ಭಾರತದ ಅಣು ಶಕ್ತಿಗೆ ಈಗ 25 ವರ್ಷ

11:59 PM May 11, 2023 | Team Udayavani |

1998ರ ಮೇ 11. ಸಮಯ 3.45. ರಾಜಸ್ಥಾನದ ಬಹುದೂರದ ಪೋಖ್ರಾನ್‌ ಎಂಬಲ್ಲಿ ಭಾರತ ತನ್ನ 2ನೇ ಪರಮಾಣು ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿತು. ವಿಶೇಷವೆಂದರೆ ಇತ್ತ ಭಾರತ  ಇಂಥ ದೊಡ್ಡ ಪರೀಕ್ಷೆ ನಡೆಸಿದರೂ ಇಡೀ ಜಗತ್ತಿಗೆ ಇದರ ಕಿಂಚಿತ್ತೂ ಮಾಹಿತಿ ಗೊತ್ತಾಗಿರಲಿಲ್ಲ. ಆಗ ಸ್ವತಃ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರೇ ಪತ್ರಿಕಾಗೋಷ್ಠಿ ನಡೆಸಿ ಹೊರಜಗತ್ತಿಗೆ ಮಾಹಿತಿ ನೀಡಿದ್ದರು. ಭಾರತದ ಈ ಸಾಹಸಕ್ಕೆ ಅಮೆರಿಕವೂ ಸೇರಿದಂತೆ ಇಡೀ ಜಗತ್ತೇ ಒಂದು ಕ್ಷಣ ಅವಾಕ್ಕಾಗಿ ಕುಳಿತಿತ್ತು. ಇಡೀ ಜಗತ್ತನ್ನೇ ಮೀರಿಸಿದ ಈ ಪರೀಕ್ಷೆಗೆ ಈಗ 25 ವರ್ಷ…

Advertisement

ಹಾಗಾದರೆ ಅಂದು ಆಗಿದ್ದಾದರೂ ಏನು? ಇಡೀ ಆಪರೇಷ‌‌ನ್‌ ಅನ್ನು ರಹಸ್ಯವಾಗಿ ಇಟ್ಟಿದ್ದು ಹೇಗೆ?

ರಾಷ್ಟ್ರೀಯ ತಂತ್ರಜ್ಞಾನ ದಿನ

1998ರ ಮೇ 11ರಂದು ಭಾರತ 2ನೇ ಪರಮಾಣು ಪರೀಕ್ಷೆ ನಡೆಸಿದ ಜ್ಞಾಪಕಾರ್ಥವಾಗಿ ದೇಶ ಈ ದಿನವನ್ನು “ರಾಷ್ಟ್ರೀಯ ತಂತ್ರಜ್ಞಾನ ದಿನ’ವೆಂದು ಆಚರಿಸುತ್ತಿದೆ. ವಿಶೇಷವೆಂದರೆ ಭಾರತವೂ ಅಣ್ವಸ್ತ್ರ ಹೊಂದಿದ ದೇಶವಾಗಬೇಕು ಎಂಬುದು ವಿಜ್ಞಾನಿ ಹೋಮಿ ಜಹಾಂಗೀರ್‌ ಭಾಭಾ ಅವರ ಕನಸು. ಇದನ್ನು ನನಸು ಮಾಡಿದವರು ಎಪಿಜೆ ಅಬ್ದುಲ್‌ ಕಲಾಂ ಮತ್ತವರ ತಂಡ.

ವಾಜಪೇಯಿ ಅವರ ಪತ್ರಿಕಾಗೋಷ್ಠಿ

Advertisement

ಮೇ 11ರಂದು ಪೋಖ್ರಾನ್‌ 2 ಪರೀಕ್ಷೆಯನ್ನು ಯಶಸ್ವಿಯಾಗಿ ಮುಗಿಸಿದ ಮೇಲೆ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಪತ್ರಿಕಾಗೋಷ್ಠಿ ಕರೆದು ಈ ವಿಷಯ ಹೇಳಿದರು. “ಮೇ 11ರ ಮಧ್ಯಾಹ್ನ 3.45ರ ವೇಳೆಗೆ ಭಾರತವು ಪೋಖ್ರಾನ್‌ ನಲ್ಲಿ ಮೂರು ಭೂಗತ ಪರಮಾಣು ಅಸ್ತ್ರಗಳ ಪ್ರಯೋಗ ನಡೆಸಿತು. ಈ ಪರೀಕ್ಷೆಯನ್ನು ಫಿಶನ್‌ ಸಾಧನದ ಮೂಲಕ ನಡೆಸಲಾಯಿತು. ಅಲ್ಲದೆ ಈ ಪರೀಕ್ಷೆಯಿಂದ ಯಾವುದೇ ವಿಕಿರಣ ಅಪಾಯವಿಲ್ಲ ಎಂಬುದನ್ನು ಖಾತ್ರಿ ಮಾಡಿಕೊಂಡಿದ್ದೇವೆ. 1974ರ ಮೇನಲ್ಲಿ ನಡೆಸಿದ ರೀತಿಯಲ್ಲೇ ಈಗಲೂ ಪರೀಕ್ಷೆ ನಡೆಸಲಾಗಿದೆ. ನಾನು ಈ ಪರೀಕ್ಷೆಯಲ್ಲಿ ಭಾಗಿಯಾದ ಎಲ್ಲ ವಿಜ್ಞಾನಿಗಳಿಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ” ಎಂದಿದ್ದರು. ಇದಾದ ಬಳಿಕ ಮೇ 13ರಂದು ಮತ್ತೆರಡು ಪೂರಕ ಪರೀಕ್ಷೆಗಳನ್ನು ನಡೆಸಲಾಗಿತ್ತು.

ಪರೀಕ್ಷೆ ನಡೆಸಿದ್ದು ಏಕೆ?

ಭಾರತವು 1974ರಲ್ಲಿ ಇಂದಿರಾ ಗಾಂಧಿಯವರ ಆಡಳಿತಾವಧಿಯಲ್ಲಿ ಪೋಖ್ರಾನ್‌ ನಲ್ಲೇ ಒಂದು ಪರಮಾಣು ಪರೀಕ್ಷೆ ನಡೆಸಲಾಗಿತ್ತು. ಇದಾದ ಮೇಲೆ ಭಾರತ ತನ್ನ ಪಾಡಿಗೆ ತಾನಿತ್ತು. ಆದರೆ 1990ರ ದಶಕದಲ್ಲಿ ನೆರೆಯ ಪಾಕಿಸ್ಥಾನ ಮತ್ತು ಚೀನ ಕಡೆಯಿಂದ ಅನಪೇಕ್ಷಿತ ಬೆದರಿಕೆಗಳು ಬರಲು ಶುರುವಾದವು. ಪಾಕಿಸ್ಥಾನ ಅಣ್ವಸ್ತ್ರ ಪರೀಕ್ಷೆಗೆ ಸಿದ್ಧವಾಗುತ್ತಿದೆ ಎಂಬ ಮಾಹಿತಿ ಗೊತ್ತಾಗಿತ್ತು. ಜತೆಗೆ ಚೀನ ಪಾಕಿಸ್ಥಾನಕ್ಕೆ ಸಿದ್ಧವಾಗಿರುವಂಥ ಅಣ್ವಸ್ತ್ರಗಳನ್ನು ಕಳುಹಿಸಲು ಸಿದ್ಧತೆ ನಡೆಸಿತ್ತು. ಇನ್ನು ಅಮೆರಿಕ ಪ್ರಸರಣ ರಹಿತ ಒಪ್ಪಂದ(ಎನ್‌ಪಿಟಿ)ಯನ್ನು ಜಗತ್ತಿನ ಬೇರೆ ಬೇರೆ ದೇಶಗಳಿಗೆ ವ್ಯಾಪಿಸಲು ಸಿದ್ಧತೆ ನಡೆಸಿತ್ತು. ಇದರ ಒಳಗೇ ಭಾರತ ಮತ್ತೂಂದು ಪರಮಾಣು ಪರೀಕ್ಷೆ ನಡೆಸಲೇಬೇಕಿತ್ತು. 1998ರಲ್ಲಿ ಅಧಿಕಾರಕ್ಕೆ ಬಂದಿದ್ದ ವಾಜಪೇಯಿ ಸರಕಾರ ಈ ಬಗ್ಗೆ ಭರವಸೆಯನ್ನೂ ನೀಡಿತ್ತು. ಹೀಗಾಗಿ ಪೋಖ್ರಾನ್‌ ನಲ್ಲಿ ಪರೀಕ್ಷೆ ನಡೆಸಲಾಯಿತು.

ಕುಸಿದ “ವೈಟ್‌ ಹೌಸ್‌”!

1998ರ ಮಾ.20ರಂದು ವಾಜಪೇಯಿ ಅವರು ಅಣು ಶಕ್ತಿ ವಿಭಾಗದ ಮುಖ್ಯಸ್ಥ ಆರ್‌.ಚಿದಂಬರಂ ಮತ್ತು ಡಿಆರ್‌ಡಿಒ ಮುಖ್ಯಸ್ಥರಾಗಿದ್ದ ಅಬ್ದುಲ್‌ ಕಲಾಂ ಅವರನ್ನು ಕರೆಸಿ ಅಣ್ವಸ್ತ್ರ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದರು. ಅದೇ ವರ್ಷದ ಮೇ 1ರಂದು ಪರಮಾಣು ಸಲಕರಣೆಗಳನ್ನು ಹೊತ್ತ ವಿಮಾನ ಮುಂಬಯಿಯ ಭಾಭಾ ಪರಮಾಣು ಸಂಶೋಧನ ಕೇಂದ್ರದಿಂದ ರಾಜಸ್ಥಾನದ ಜೈಸಲ್ಮೇರ್‌ನ ವಿಮಾನ ನಿಲ್ದಾಣಕ್ಕೆ ಹೋಗಿ ಇಳಿಯಿತು. ಅಲ್ಲಿಂದ ಪೋಖ್ರಾನ್‌ ಗೆ ನಾಲ್ಕು ಟ್ರಕ್‌ಗಳಲ್ಲಿ ತೆಗೆದುಕೊಂಡು ಹೋಗಲಾಯಿತು.

ಭಾರತೀಯ ಸೇನೆಯ 58ನೇ ಎಂಜಿನಿಯರ್‌ ರೆಜಿಮೆಂಟ್‌ನ ಕರ್ನಲ್‌ ಗೋಪಾಲ್‌ ಕೌಶಿಕ್‌, ಅಣು ಸಲಕರಣೆಗಳ ಮೇಲುಸ್ತುವಾರಿ ನೋಡಿಕೊಂಡರು. ಅಲ್ಲದೆ ಎಲ್ಲ ಅಧಿಕಾರಿಗಳಿಗೂ ಈ ವಿಚಾರವನ್ನು ಅತ್ಯಂತ ರಹಸ್ಯವಾಗಿ ಇಡುವಂತೆ ಸೂಚಿಸಲಾಯಿತು. ಇಡೀ ಕಾರ್ಯಾಚರಣೆಯ ಬಗ್ಗೆ ಸ್ಯಾಟ್‌ಲೈಟ್‌ಗಳಿಗೂ ಗೊತ್ತಾಗದಂತೆ ನೋಡಿಕೊಳ್ಳಲಾಗಿತ್ತು. ಅಲ್ಲದೆ ಆಪರೇಶನ್‌ನಲ್ಲಿ ಇದ್ದವರಿಗೆ ಎಲ್ಲರಿಗೂ ಕೋಡ್‌ ನೇಮ್‌ ನೀಡಲಾಗಿತ್ತು. ಜತೆಗೆ ಅಣುಬಾಂಬ್‌ಗ ವೈಟ್‌ ಹೌಸ್‌ ಎಂಬ ಕೋಡ್‌ ನೇಮ್‌ ನೀಡಲಾಗಿತ್ತು. ಪರೀಕ್ಷೆ  ಮುಗಿದ ಮೇಲೆ ವೈಟ್‌ಹೌಸ್‌ ಕುಸಿಯಿತು ಎಂಬ ಸಂದೇಶವನ್ನು ರವಾನಿಸಲಾಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next