Advertisement
ಜಮ್ಮು-ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ರದ್ದು ಮಾಡುವ ನಿರ್ಣಯಕ್ಕೆ ಸಂಬಂಧಿಸಿದ ಚರ್ಚೆಯಲ್ಲಿ ಪಾಲ್ಗೊಂಡ ಶಾ, ಪ್ರತಿಪಕ್ಷಗಳ ಸದಸ್ಯರು ಕೇಳಿದ ಪ್ರತಿಯೊಂದು ಪ್ರಶ್ನೆಗೂ ಏಟಿಗೆ ಎದಿರೇಟು ಎಂಬಂತೆ ಉತ್ತರಿಸುತ್ತಾ ಹೋದರು. ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ. ಅದರಲ್ಲಿ ಯಾವ ಸಂಶಯವೂ ಇಲ್ಲ. ಜಮ್ಮು ಮತ್ತು ಕಾಶ್ಮೀರ ಎಂಬ ನನ್ನ ಪದಪ್ರಯೋಗದಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರವೂ ಸೇರಿದೆ,
Related Articles
Advertisement
ಸಂವಿಧಾನದ ಅವಹೇಳನ: 370ನೇ ವಿಧಿಯ ಇತಿಹಾಸವನ್ನು ನೆನಪಿಸಿದ ಕಾಂಗ್ರೆಸ್ ನಾಯಕ ಮನೀಷ್ ತಿವಾರಿ, “ಜಮ್ಮು ಮತ್ತು ಕಾಶ್ಮೀರದ ಮಹಾರಾಜ ಅಂದು ಭಾರತದೊಂದಿಗೆ ವಿಲೀನವಾಗುವ ತೀರ್ಮಾನ ಕೈಗೊಂಡರು. ಹಾಗೆ ಸೇರ್ಪಡೆಯಾಗುವಾಗ ಅವರಿಗೆ ಕೆಲವೊಂದು ವಿಶೇಷ ಸವಲತ್ತುಗಳನ್ನು ಒದಗಿಸಲಾಯಿತು. ಆದರೆ, ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಯನ್ನು ಸಂಪರ್ಕಿಸದೇ ರಾಜ್ಯದ ಗಡಿಯನ್ನು ಕೇಂದ್ರ ಸರ್ಕಾರ ಬದಲಿಸಿದೆ. ಇದು ಸಂವಿಧಾನದ ಅವಹೇಳನ’ ಎಂದರು.
ನೆಹರೂ ವಿರುದ್ಧ ಕಿಡಿ: ಅಂದು ಸಂಪುಟದ ಸಾಮೂಹಿಕ ಹೊಣೆಗಾರಿಕೆ ಮರೆತು ಗೃಹ ಸಚಿವ ವಲ್ಲಭಭಾಯಿ ಪಟೇಲರ ಕಾರ್ಯನಿರ್ವಹಣೆಯಲ್ಲಿ ನೆಹರೂ ಮೂಗು ತೂರಿಸಿದ್ದರು. ಪಾಕ್ ವಿರುದ್ಧ ಏಕಪಕ್ಷೀಯವಾಗಿ ಕದನ ವಿರಾಮ ಘೋಷಿಸಿದ್ದರು. ಅಂದು ಅವರು ಆ ಘೋಷಣೆ ಮಾಡದಿದ್ದರೆ, ಇಂದು ಕಾಶ್ಮೀರದ ಒಂದು ಭಾಗವು ಪಾಕ್ ಆಕ್ರಮಿತ ಕಾಶ್ಮೀರ ಆಗುತ್ತಿರಲಿಲ್ಲ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಕಿಡಿಕಾರಿದರು.
ಈ ಸಂತೋಷ ಉಳಿದ ರಾಜ್ಯಗಳಿಗೆ ಯಾವಾಗ?: ಸಮಾಜವಾದಿ ಪಕ್ಷದ ಸಂಸದ ಅಖೀಲೇಶ್ ಯಾದವ್ ಮಾತನಾಡಿ, “ಜಮ್ಮು-ಕಾಶ್ಮೀರದ ಜನರನ್ನು ಸಂತೋಷಪಡಿಸಲು ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆಯೇ ಎಂದು ಗೊತ್ತಿಲ್ಲ. ಸರ್ಕಾರವು ಇಡೀ ದೇಶವನ್ನು ಗೊಂದಲದ ಗೂಡಾಗಿಸಲು ಹೊರಟಿದೆ. ಅಂದ ಹಾಗೆ, ನಾಗಾಲ್ಯಾಂಡ್, ಸಿಕ್ಕಿಂ ಮತ್ತು ಮಿಜೋರಾಂನ ಜನತೆಗೆ ನೀವು ಯಾವ ಇಂಥ “ಸಂತೋಷ’ವನ್ನು ಒದಗಿಸುತ್ತೀರಿ’ ಎಂದು ಪ್ರಶ್ನಿಸಿದ್ದಾರೆ.
ಪಾಕ್‌ನ ಭಾಷೆಯಲ್ಲಿ ಮಾತಾಡುತ್ತಿದೆ ಕಾಂಗ್ರೆಸ್: ಜಮ್ಮು- ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡಿರುವುದು ಆ ರಾಜ್ಯದ ಅಭಿವೃದ್ಧಿಗಾಗಿ ಮತ್ತು ಐತಿಹಾಸಿಕ ಪ್ರಮಾದವನ್ನು ಸರಿಪಡಿಸುವುದಕ್ಕಾಗಿ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಹೇಳಿದ್ದಾರೆ. ಲೋಕಸಭೆಯಲ್ಲಿ ಚರ್ಚೆ ವೇಳೆ ಮಾತನಾಡಿದ ಜೋಷಿ, “ಈ ವಿಧೇಯಕಕ್ಕೆ ಕಾಂಗ್ರೆಸ್ ಬೆಂಬಲ ಸೂಚಿಸುವ ಮೂಲಕ, ತಮ್ಮ ಹಿಂದಿನ ತಲೆಮಾರು ಮಾಡಿರುವ ತಪ್ಪನ್ನು ಸರಿಪಡಿಸಿಕೊಳ್ಳಬೇಕಿತ್ತು.
ಆದರೆ, ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುವ ಮೂಲಕ ಪಾಕಿಸ್ತಾನದ ಭಾಷೆಯಲ್ಲೇ ಮಾತನಾಡುತ್ತಿದೆ. ಇದೊಂದು ದುರದೃಷ್ಟಕರ ಸಂಗತಿ’ ಎಂದಿದ್ದಾರೆ. ಅಲ್ಲದೆ, ನಿಮ್ಮ(ಕಾಂಗ್ರೆಸ್) ನಿಲುವು ಮತ್ತು ಮತಬ್ಯಾಂಕ್ ರಾಜಕಾರಣದಿಂದಾಗಿಯೇ 1984ರಿಂದಲೇ ನಿಮ್ಮ ಸಂಸದರ ಸಂಖ್ಯೆ ಇಳಿಮುಖವಾಗುತ್ತಿದೆ ಎಂದೂ ಜೋಷಿ ಹೇಳಿದ್ದಾರೆ.
ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ: ಜೂ.17ರಂದು ಆರಂಭವಾಗಿದ್ದ 17ನೇ ಲೋಕಸಭೆಯ ಮೊದಲ ಅಧಿವೇಶನ ಮಂಗಳವಾರ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ. ನಿಗದಿಯಂತೆ ಜು.26ಕ್ಕೇ ಅಧಿವೇಶನ ಮುಗಿಯಬೇಕಿತ್ತಾದರೂ, ಪ್ರಮುಖ ವಿಧೇಯಕಗಳನ್ನು ಅಂಗೀಕರಿಸುವ ಸಲುವಾಗಿ ಕೇಂದ್ರ ಸರ್ಕಾರವು ಅಧಿವೇಶನದ ಅವಧಿಯನ್ನು ವಿಸ್ತರಿಸಿತ್ತು.
ಹೆಜ್ಜೆಹೆಜ್ಜೆಗೂ ತಲ್ಲಣಿಸಿದರು: ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದಾಗಿದ್ದಕ್ಕೆ ಸಂಸತ್ತಿನಲ್ಲಿ, ಮಾಧ್ಯಮಗಳಲ್ಲಿ ರಾಜಕೀಯ ಆಧಾರಿತ ಚರ್ಚೆಗಳು, ವಾದ-ಪ್ರತಿವಾದಗಳು ನಡೆಯುತ್ತಿವೆ. ಅತ್ತ, ಕಾಶ್ಮೀರದ ಹಾಗೂ ಅಲ್ಲಿನ ಜಟಿಲ ಪರಿಸ್ಥಿತಿಯಿಂದ ಪಾರಾಗಿ ದೆಹಲಿಗೆ ಬಂದಿಳಿಯುತ್ತಿರುವ ಪ್ರವಾಸಿಗರು ತಾವು ಅಲ್ಲಿ ಪಟ್ಟ ಫಜೀತಿಗಳನ್ನು ಮಾಧ್ಯಮಗಳ ಮುಂದೆ ಅನಾವರಣಗೊಳಿಸಿದ್ದಾರೆ.
ಅಮರನಾಥ ಯಾತ್ರೆ ಸೇರಿದಂತೆ ವಿಹಾರಾರ್ಥವಾಗಿ ಕಾಶ್ಮೀರಕ್ಕೆ ತೆರಳಿದ್ದ ಇತರ ರಾಜ್ಯಗಳ ಸಾವಿರಾರು ಮಂದಿ, ಏಕಾಏಕಿ ಪ್ರವಾಸ ಮೊಟಕುಗೊಳಿಸಿ ತಮ್ಮ ರಾಜ್ಯಗಳಿಗೆ ಹಿಂದಿರುಗಲು ಸಾಕಷ್ಟು ಪಡಿಪಾಟಲು ಬಿದ್ದಿದ್ದಾರೆ. ತಾವಿರುವ ಸ್ಥಳಗಳಿಂದ ಇದ್ದಕ್ಕಿದ್ದಂತೆ ಹೊರಟು, ವಿಮಾನ ನಿಲ್ದಾಣ ತಲುಪುವ ವೇಳೆ ಅನುಭವಿಸಿದ ಯಾತನೆ-ತೊಂದರೆಗಳು, ವಿಮಾನ ಟಿಕೆಟ್‌ಗಳ ಬೆಲೆ ಗಗನಮುಖೀಯಾಗಿದ್ದು, ಹೆಜ್ಜೆಹೆಜ್ಜೆಗೂ ಯೋಧರ ಇರುವಿಕೆಯಿಂದಾಗಿ ಮನಸ್ಸು ತಲ್ಲಣಿಸಿದ್ದರ ಬಗ್ಗೆ ಎಳೆಎಳೆಯಾಗಿ ವಿವರಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಜೆಹ್ರಾ ಬಷೀರ್ ಎಂಬುವರು, ಭಾನುವಾರ ರಾತ್ರಿಯಿಂದ ಕಾಶ್ಮೀರದಲ್ಲಿ ಇಂಟರ್ನೆಟ್, ಮೊಬೈಲ್ ಸಂಪರ್ಕ ಕಡಿತಗೊಳಿಸಿದ್ದರಿಂದಾಗಿ ತಮ್ಮ ಆಪ್ತರ ಸಂಪರ್ಕಕ್ಕೆ ಅಥವಾ ಮತ್ಯಾವುದೇ ಅಂತರ್ಜಾಲ ಆಧಾರಿತ ಸೇವೆಗಳನ್ನು ಪಡೆಯಲು ತೊಂದರೆಯಾಯಿತು ಎಂದಿರುವ ಅವರು, ಸಂಪರ್ಕ ರಹಿತ ಪರಿಸ್ಥಿತಿಯು ತಮ್ಮನ್ನು ಶಿಲಾಯುಗದಲ್ಲಿ ಇದ್ದಿರಬಹುದಾದ ಪರಿಸ್ಥಿತಿಗೆ ತಳ್ಳಿತ್ತು ಎಂದಿದ್ದಾರೆ.
ಇನ್ನು, ಮೇಘನಾ ನೇಗಿ ಎಂಬುವರು ಹಲವಾರು ವರ್ಷಗಳ ಆಸೆಯಂತೆ ಈ ಬಾರಿ ಅಮರನಾಥ ಯಾತ್ರೆಗೆ ಹೋಗಲು ಅವಕಾಶ ಸಿಕ್ಕಿದರೂ ಅದು ಸಫಲವಾಗಲಿಲ್ಲ ಎಂದು ವ್ಯಥೆ ತೋಡಿಕೊಂಡಿದ್ದಾರೆ. ಹಜ್ ಯಾತ್ರೆಯಿಂದ ಭಾರತಕ್ಕೆ ಮರಳಿರುವ ಇಮಿ¤ಯಾಜ್ ಅಹ್ಮದ್ ಖಾನ್ ಎಂಬುವರು ಶ್ರೀನಗರದಲ್ಲಿ ಸರ್ಕಾರಿ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಶ್ರೀನಗರಕ್ಕೆ ತಲುಪಲು ಸಾಧ್ಯವಾಗದ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್-ನೀವು ಇದನ್ನು ಆಂತರಿಕ ವಿಚಾರ ಎನ್ನುತ್ತೀರಿ. 1948ರಿಂದಲೇ ಇಲ್ಲಿನ ಸ್ಥಿತಿಯ ಮೇಲೆ ವಿಶ್ವಸಂಸ್ಥೆ ನಿಗಾ ಇಟ್ಟಿದೆ. ಅಲ್ಲದೆ, ಶಿಮ್ಲಾ ಒಪ್ಪಂದ ಮತ್ತು ಲಾಹೋರ್ ಒಪ್ಪಂದವನ್ನೂ ಮಾಡಿಕೊಳ್ಳಲಾಗಿದೆ. ಹೀಗಿರುವಾಗ ಇದು ದ್ವಿಪಕ್ಷೀಯ ವಿಚಾರವೋ, ಆಂತರಿಕ ವಿಚಾರವೋ ನೀವೇ ಹೇಳಿ. -ಜಮ್ಮು-ಕಾಶ್ಮೀರ, ಜುನಾಗಡ ಹಾಗೂ ಹೈದರಾಬಾದ್ ಈಗ ಭಾರತದ ಭಾಗವಾಗಿದೆ ಎಂದರೆ, ಅದಕ್ಕೆ ಜವಾಹರಲಾಲ್ ನೆಹರೂ ಅವರೇ ಕಾರಣ. -ಈ ವಿಧೇಯಕದ ಮಂಡನೆ ಮತ್ತು ನಿರ್ಣಯವು ಜನತೆಯ ಹಕ್ಕುಗಳ ಉಲ್ಲಂಘನೆ. -370ನೇ ವಿಧಿಯನ್ನು ರದ್ದುಗೊಳಿಸಿರುವುದು ಒಂದು ಐತಿಹಾಸಿಕ ಪ್ರಮಾದ. ನೀವು ತಪ್ಪು ಮಾಡುತ್ತಿದ್ದೀರಿ. -ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸಿದ್ದಂಥ ಸಂವಿಧಾನದ 370ನೇ ವಿಧಿಯನ್ನು ರದ್ದು ಮಾಡುವ ನಿಮ್ಮ ನಿರ್ಧಾರದ ಹಿಂದೆ ಕೋಮುವಾದಿ ಅಜೆಂಡಾ ಅಡಗಿದೆ. ಅಮಿತ್ ಶಾ
-ಪಾಕ್ ಆಕ್ರಮಿತ ಕಾಶ್ಮೀರವು ಭಾರತದ ಅಂಗವಲ್ಲ ಎಂದು ನೀವು ಯೋಚಿಸಿದ್ದೀರಾ? ದೇಶಕ್ಕಾಗಿ ಪ್ರಾಣ ತ್ಯಾಗ ಮಾಡುವಂಥ ದೇಶಪ್ರೇಮಿಗಳು ಇಂಥದ್ದೊಂದು ಪ್ರಶ್ನೆಯನ್ನು ಸಹಿಸಲು ಹೇಗೆ ಸಾಧ್ಯ? ಈ ವಿಚಾರದಲ್ಲಿ ಕೂಡಲೇ ಕಾಂಗ್ರೆಸ್ ತನ್ನ ನಿಲುವನ್ನು ಸ್ಪಷ್ಟಪಡಿಸಲಿ. -ನೀವು ಪಟೇಲ್ ಕೊಡುಗೆ ಕಡೆಗಣಿಸುತ್ತಿದ್ದೀರಿ. ನೆಹರೂ ಕಾಶ್ಮೀರ ವಿವಾದವನ್ನು ವಿಶ್ವಸಂಸ್ಥೆಗೆ ಕೊಂಡೊ ಯ್ಯದೇ ಇದ್ದಿದ್ದರೆ, ಈಗ ಪಿಒಕೆ ನಮ್ಮಲ್ಲೇ ಇರುತ್ತಿತ್ತು. -ಕಣಿವೆ ರಾಜ್ಯ ಸಹಜ ಸ್ಥಿತಿಗೆ ಬಂದಾಗ ಅದಕ್ಕೆ ರಾಜ್ಯ ಸ್ಥಾನಮಾನ ನೀಡಲು ನಾವು ಹಿಂಜರಿಯಲ್ಲ. -ಇದು ಐತಿಹಾಸಿಕ ಪ್ರಮಾದವಲ್ಲ. ಐತಿಹಾಸಿಕವಾಗಿ ಆಗಿದ್ದ ಪ್ರಮಾದವನ್ನು ಸರಿಪಡಿಸುವಂಥ ಕ್ರಮ. -ಅಂಥ ಅಜೆಂಡಾ ಇಲ್ಲ. ಸಂವಿಧಾನದಲ್ಲಿರುವ ನಿಬಂಧನೆಯೇ ತಾರತಮ್ಯದಿಂದ ಕೂಡಿತ್ತು. ಅದು ಅಲ್ಪಸಂಖ್ಯಾತರು, ಮಹಿಳೆಯರು ಮತ್ತು ಜನರ ಕ್ಷೇಮಾಭಿವೃದ್ಧಿಗೆ ವಿರುದ್ಧವಾಗಿತ್ತು.