ಮುಜಫರಾಬಾದ್ : ‘ಪಾಕ್ ಆಕ್ರಮಿತ ಕಾಶ್ಮೀರವು ಪಾಕಿಸ್ಥಾನದ್ದೆಂದು ಎಲ್ಲಿ ಬರೆಯಲ್ಪಟ್ಟಿದೆ? ಹಾಗಂತ ಏನಾದರೂ ಒಪ್ಪಂದ ಆಗಿದೆಯಾ? ಪಿಓಕೆ ಪಾಕಿಸ್ಥಾನದ್ದೆಂಬ ಇಸ್ಲಾಮಾಬಾದಿನ ಹೇಳಿಕೆ ಬರೀ ಬೊಗಳೆ” ಎಂದು ಪಿಓಕೆ ನಾಯಕ ತೌಕೀರ್ ಗೀಲಾನಿ ಅವರು ಇಂದು ಶನಿವಾರ ಇಸ್ಲಾಮಾಬಾದ್ ವಿರುದ್ಧ ಧ್ವನಿ ಎತ್ತರಿಸಿ ಗಟ್ಟಿಯಾಗಿ ಮಾತನಾಡಿದ್ದಾರೆ.
“ಮುಸ್ಲಿಂ ಕಾನ್ಫರೆನ್ಸ್ ಇಷ್ಟು ಕಾಲವೂ ಮಾಡಿಕೊಂಡು ಬಂದಿರುವ ಶುದ್ಧ ಸುಳ್ಳಿನ ಮತ್ತು ಮೂರ್ಖತನದ ಅಪಪ್ರಚಾರ ಇದು. ನಮ್ಮ ಬಚ್ಚಲು ಮನೆಯ ಬಾಗಿಲಲ್ಲಿ ಕೂಡ “ಕಾಶ್ಮೀರ್ ಬನೇಗಾ ಪಾಕಿಸ್ಥಾನ್’ ಎಂದವರು ಬರೆದಿದ್ದಾರೆ’ ಎಂದು ಗೀಲಾನಿ ಆಕ್ರೋಶ ವ್ಯಕ್ತಪಡಿಸಿದರು.
“ಈ ರೀತಿಯ ಶುದ್ಧ ಸುಳ್ಳಿನ, ಮೋಸದ ಮತ್ತು ಮೂರ್ಖತನದ ಅಪಪ್ರಚಾರಕ್ಕೂ ಒಂದು ಮಿತಿ ಇದೆ. ಟಿವಿಯಲ್ಲಿ ಪಾಕಿಗಳು ನಮ್ಮನ್ನು ದ್ರೋಹಿಗಳೆಂದು ಕರೆಯುತ್ತಾರೆ. ಆದರೆ ನಾವು ಪಾಕ್ ಉಪ್ಪನ್ನು ಕಿಲೋಗೆ 20 ರೂ. ತೆತ್ತು ಖರೀದಿಸುತ್ತಿದ್ದೇವೆ. ನಾವಲ್ಲದೆ ಈ ರೀತಿ ಬೇರೂ ಯಾರೂ ಮಾಡುತ್ತಿಲ್ಲ. ಮಾತ್ರವಲ್ಲ, ನೀವು ಪಾಕಿಗಳು ನಮ್ಮ ನೀರನ್ನೇ ಕುಡಿಯುತ್ತಿದ್ದೀರಿ ಎಂಬುದನ್ನು ಮರೆಯಬೇಡಿ’ ಎಂದು ಗೀಲಾನಿ ಧೈರ್ಯದಿಂದ ಇಸ್ಲಾಮಾಬಾದ್ ವಿರುದ್ಧ ಧ್ವನಿ ಎತ್ತಿದರು.
ಹಿರಿಯ ಕಾಶ್ಮೀರೀ ಪ್ರತ್ಯೇಕತಾವಾದಿ ನಾಯಕರುಗಳಾದ ಮೀರ್ ವೇಜ್ ಉಮರ್ ಫಾರೂಕ್ ಮತ್ತು ಸಜ್ಜದ ಲೋನ್ ಅವರ ತಂದೆಯ ಹತ್ಯೆಯ ಹಿಂದೆ ಪಾಕ್ ಉಗ್ರ ಸಂಸ್ಥೆಗಳು ಇವೆ. ಅವು ಈ ಹತ್ಯೆಗಳಲ್ಲಿ ಮಾಸ್ಟರ್ ಮೈಂಡ್ ಆಗಿ ಕೆಲಸ ಮಾಡಿವೆ ಎಂದು ಗೀಲಾನಿ ಆರೋಪಿಸಿದರು.
ಸೌಮ್ಯವಾದಿ ಹುರಿಯತ್ ಕಾನ್ಫರೆನ್ಸ್‌ನ ಈಗಿನ ಅಧ್ಯಕ್ಷರಾಗಿರುವ ಮೀರ್ ವೇಜ್ ಉಮರ್ ಫಾರೂಕ್ ಅವರ ತಂದೆ ಮೀರ್ ವೇಜ್ ಫಾರೂಕ್ ಅವರನ್ನು 1990ರ ಮೇ 21ರಂದು ಅವರ ನಿವಾಸದಲ್ಲೇ ಗುಂಡಿಕ್ಕಿ ಸಾಯಿಸಲಾಯಿತು. ಅಬ್ದುಲ್ ಗನೀ ಲೋನ್ ಅವರನ್ನು 2002ರ ಮೇ 21ರಂದು ಸೀನಿಯರ್ ಮೀರ್ ವೇಜ್ ಅವರ ಸಂಸ್ಮರಣ ರಾಲಿಯಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು ಎಂದು ಗೀಲಾನಿ ಹೇಳಿದರು.