Advertisement
ಸುಮಾರು ಮೂರುವರೆ ವರ್ಷಗಳ ಹಿಂದೆಯೇ ಶುರುವಾದ “ಪೊಗರು’ ಸಿನಿಮಾ ಇದೇ ಫೆ. 19ಕ್ಕೆ ತೆರೆಗೆ ಬಂದಿದೆ. ಬಿಡುಗಡೆಗೂ ಒಂದು ವಾರದ ಮುಂಚೆ “ಪೊಗರು’ ಸಿನಿಮಾವನ್ನು ವೀಕ್ಷಿಸಿದ ಸೆನ್ಸಾರ್ ಮಂಡಳಿ ಚಿತ್ರಕ್ಕೆ “ಯು/ಎ’ ಪ್ರಮಾಣಪತ್ರ ನೀಡಿ ಬಿಡುಗಡೆಗೆ ಅಸ್ತು ಎಂದಿತ್ತು. ಅದರಂತೆ ಚಿತ್ರತಂಡ “ಪೊಗರು’ ಪ್ರೇಕ್ಷಕರ ಮುಂದೆ ತಂದಿತ್ತು. ಆದರೆ ಸೆನ್ಸಾರ್ ಪರೀಕ್ಷೆಯಲ್ಲಿ ಪಾಸಾಗಿದ್ದ “ಪೊಗರು’ ಥಿಯೇಟರ್‌ನಲ್ಲಿ ವಿವಾದಕ್ಕೆ ಕಾರಣವಾಯಿತು. ಬ್ರಾಹ್ಮಣ ಸಮುದಾಯಕ್ಕೆ ಅವಹೇಳನ ಮಾಡುವಂಥ ದೃಶ್ಯಗಳು, ಸಂಭಾಷಣೆಗಳು ಸಿನಿಮಾದಲ್ಲಿದೆ ಎಂಬ ವಿವಾದ ಇಡೀ ಚಿತ್ರತಂಡವನ್ನೇ ಹೈರಾಣಾಗಿಸಿತು. ಕೊನೆಗೂ ಪ್ರತಿಭಟನೆಗೆ ಮಣಿದ ಚಿತ್ರತಂಡ, “ಪೊಗರು’ ಚಿತ್ರದ ವಿವಾದಿತ ದೃಶ್ಯಗಳಿಗೆ ಕತ್ತರಿ ಹಾಕಲು ಸಮ್ಮತಿಸಿ, ಅಂತೂ ವಿವಾದಕ್ಕೆ ಅಂತ್ಯ ಹಾಡಿತು.
Related Articles
Advertisement
ದಶಕಗಳ ಅನುಭವವಿರುವ, ಸಮಾಜದ ಬೇರೆ ಬೇರೆ ಕ್ಷೇತ್ರಗಳಿಂದ ಆಯ್ಕೆಯಾಗಿರುವ, ಸೂಕ್ಷ್ಮ ಸಂಗತಿಗಳನ್ನು ಬೇರೆಯದೇ ಆಯಾಮದ ಮೂಲಕ ಗುರುತಿಸಿ, ಗ್ರಹಿಸಬಲ್ಲ ಹತ್ತಾರು ಸದಸ್ಯರು ಇರುವಂಥ ಸೆನ್ಸಾರ್ ಮಂಡಳಿ, ಇಷ್ಟೊಂದು ದೊಡ್ಡ ವಿವಾದಕ್ಕೆ ಕಾರಣವಾದಂತಹ ಸಂಗತಿಗಳನ್ನು ನಿರ್ಲಕ್ಷಿಸಿದ್ದಾದರೂ ಹೇಗೆ? ಅಥವಾ ಸೆನ್ಸಾರ್ ಮಂಡಳಿ ಕೇವಲ ತಾಂತ್ರಿಕವಾಗಿ ಸಿನಿಮಾಗಳಿಗೆ ಸರ್ಟಿಫಿಕೇಟ್ ಕೊಟ್ಟು ಕೈತೊಳೆದುಕೊಳ್ಳುತ್ತದೆಯಾ? ಎಂಬ ಪ್ರಶ್ನೆಯನ್ನೂ ಅನೇಕರು ಮುಂದಿಡುತ್ತಿದ್ದಾರೆ.
ಇದನ್ನೂ ಓದಿ:ಐಸ್ ಕ್ರೀಮ್ ಸೇವಿಸಿ ಮಗ,ಸಹೋದರಿ ಸಾವು:ನೈಜ ಕಾರಣ ಗೊತ್ತಿದ್ರೂ ತಾಯಿ ಸುಮ್ಮನಿದ್ದಿದ್ದೇಕೆ ?
ಇನ್ನು ಈ ಬಗ್ಗೆ ಮಾತನಾಡುವ ಸದ್ಯಕೆ ಬಿಡುಗಡೆಗೆ ಸಿದ್ಧವಿರುವ “ಕೋಟಿಗೊಬ್ಬ-3′ ಚಿತ್ರದ ನಿರ್ಮಾಪಕ ಸೂರಪ್ಪ ಬಾಬು, “ಸಿನಿಮಾವನ್ನು ಸೆನ್ಸಾರ್ ಮತ್ತು ಕಾಮನ್ ಆಡಿಯನ್ಸ್ ಇಬ್ಬರೂ ಕೂಡ ತಮ್ಮದೇ ಆದ ದೃಷ್ಟಿಕೋನದಲ್ಲಿ ನೋಡುತ್ತಾರೆ. ಹಾಗಾಗಿ ಅವರಿಗೆ ಸರಿ ಅನಿಸಿದ್ದು, ಇವರಿಗೆ ಸರಿ ಅನಿಸದೇ ಇರಬಹುದು. ಆದರೂ ಸೆನ್ಸಾರ್‌ನವರು ಮೊದಲು ಸಿನಿಮಾ ನೋಡುವುದರಿಂದ, ಸಿನಿಮಾದ ಎಲ್ಲ ಅಂಶಗಳೂ ಮೊದಲು ಅವರ ಗಮನಕ್ಕೇ ಬರುತ್ತದೆ. ಈ ವೇಳೆ ಆದಷ್ಟು ಸಿನಿಮಾದ ಸೂಕ್ಷ್ಮ ಸಂಗತಿಗಳನ್ನು ಗಮನವಿಟ್ಟು ನೋಡಿದರೆ, ಅದರಿಂದ ಮುಂದಾ ಗ ಬಹು ದಾದ ವಾದ- ವಿವಾದ ಗಳನ್ನು ಅಲ್ಲೇ ತಡೆಯುವ ಸಾಧ್ಯೆ ಇರುತ್ತದೆ. ಇದರಿಂದ ಮುಂದೆ ಅನಗತ್ಯ ಗೊಂದಲಗಳಿಗೆ ಆಸ್ಪದವಿರುವುದಿಲ್ಲ’ ಎನ್ನುತ್ತಾರೆ.
ಒಟ್ಟಾರೆ ಇತ್ತೀಚಿನ ವರ್ಷಗಳಲ್ಲಿ ಬಿಡುಗಡೆಯಾದ ಬಳಿಕ ವಿವಾದ ಪಡೆದು ಕೊಂಡಿರುವ ಅನೇಕ ಸಿನಿಮಾಗಳನ್ನು ನೋಡಿದರೆ ಅಂತಿಮವಾಗಿ ಎಲ್ಲರೂ ಸೆನ್ಸಾರ್ ಕಡೆಗೆ ಬೊಟ್ಟು ಮಾಡುತ್ತಿರುವುದಂತೂ ನಿಜ. ಇದು ನಿಜಕ್ಕೂ ಸೆನ್ಸಾರ್ ವಿಶ್ವಾಸಾರ್ಹತೆಯ ಪ್ರಶ್ನೆಯಾಗಿದ್ದು, ಈ ನಿಟ್ಟಿನಲ್ಲಿ ಸೆನ್ಸಾರ್ ಮಂಡಳಿ ಆದಷ್ಟು ಎಚ್ಚರಿಕೆ ಮತ್ತು ಸೂಕ್ಷ್ಮತೆಯಿಂದ ಹೆಜ್ಜೆ ಇಡುವುದು ಭವಿಷ್ಯದ ದೃಷ್ಟಿಯಿಂದ ಒಳಿತು.
ಜಿ.ಎಸ್. ಕಾರ್ತಿಕ ಸುಧನ್